ಮೈತ್ರೇಯಿ ಗುರುಕುಲದಲ್ಲಿ ಅಜೇಯ ಟ್ರಸ್ಟ್ ನಿಂದ ನಿರ್ಮಿಸಲ್ಪಟ್ಟ ನೂತನ ಭವ್ಯ ವಿದ್ಯಾರ್ಥಿನಿ ನಿಲಯ ಉದ್ಘಾಟನೆ

0

ಇಲ್ಲಿನ ಮಕ್ಕಳಲ್ಲಿರುವ ಆತ್ಮ ಸೈಯ್ಯಮ, ಶಿಸ್ತು ಇತರರಿಗೆ ಮಾದರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಉತ್ತಮ ವಿದ್ಯಾರ್ಥಿ ಶಿಕ್ಷಕರು ಸೇರಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ: ಬಿ. ಎನ್. ನರಸಿಂಹಮೂರ್ತಿ

ವಿಟ್ಲ: ಇಲ್ಲಿನ ವಿದ್ಯಾರ್ಥಿಗಳ ಜ್ಞಾ‌ನ ಅಪಾರ, ಇಲ್ಲಿನ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ನೋಡಿ ತುಂಬಾ ಸಂತಸವಾಗಿದೆ. ನಮ್ಮ ದೇಶದಲ್ಲಿ ಇಂತಹ ಸಂಸ್ಥೆ ಇದೆ ಎನ್ನುವುದು ಹೆಮ್ಮೆಯ ವಿಚಾರ. ಇದೂ ಕೂಡ ನಮ್ಮ ಸಂಸ್ಥೆ ಎನ್ನುವ ಭಾವನೆ ಬಂದಿದೆ. ನಮ್ಮ ಜೀವನದಲ್ಲಿ ಪರ – ಅಪರ ವಿದ್ಯೆ ಎರಡೂ ಬೇಕು. ಬ್ರಹ್ಮ ತತ್ವ ತಿಳಿಯುವ ಕೆಲಸವಾಗಬೇಕು. ಇಲ್ಲಿನ ಮಕ್ಕಳಲ್ಲಿರುವ ಆತ್ಮ ಸೈಯ್ಯಮ, ಶಿಸ್ತು ಇತರರಿಗೆ ಮಾದರಿ. ಹಲವರ ತ್ಯಾಗ ಪರಿಶ್ರಮದ ಫಲ ಇದಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿರವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೈತ್ರೇಯಿ ಗುರುಕುಲದಲ್ಲಿ ಅಜೇಯ ಟ್ರಸ್ಟ್ ನಿಂದ ನಿರ್ಮಿಸಲ್ಪಟ್ಟ ನೂತನ ಭವ್ಯ ವಿದ್ಯಾರ್ಥಿನಿ ನಿಲಯವನ್ನು ಫೆ.15ರಂದು ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ತ್ಯಾಗ ಜೀವಿಗಳು, ಯೋಗಜೀವಿಗಳಾಗಬೇಕು. ಸಮಾಜದಲ್ಲಿ ಕಷ್ಟದಲ್ಲಿರುವವರನ್ನು ಮೇಲಕ್ಕೆತ್ತುವ ಕೆಲಸವಾಗಬೇಕು. ಉನ್ನತ ಶಿಕ್ಷಣಕ್ಕೆ ಒತ್ತು ಕೊಡುವ ಕೆಲಸವಾಗಬೇಕು. ನಿಸ್ವಾರ್ಥ ಸಂಕಲ್ಪ ನಮ್ಮದಾಗಬೇಕು. ದೇಶದ ಅಭಿವೃದ್ಧಿಗೆ ನಮ್ಮ ಜೀವನವನ್ನು ಮುಡಿಪಾಗಿಡಬೇಕು. ನಾವು ನಿಮಿತ್ತವಾಗಬೇಕು. ಭಗವಂತ ನಮ್ಮಲ್ಲಿ ಎಲ್ಲವನ್ನು ಮಾಡಿಸುತ್ತಾರೆ. ಸ್ತ್ರೀಯರನ್ನು ಸಮಾಜದಲ್ಲಿ ಮೇಲಕ್ಕೆತ್ತುವುದೇ ನಾರೀ ಪೂಜೆ. ನಮ್ಮ ಸಂಸ್ಕೃತಿ ಇತರರನ್ನು ಬೆಳೆಸುವುದಾಗಿದೆ. ನನ್ನ ಹೃದಯ ತುಂಬಿ ಬರುತ್ತಿದೆ. ನೀವೆಲ್ಲರೂ ನಮ್ಮ ಮಕ್ಕಳೇ. ಎಲ್ಲ ವಿಚಾರದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ.
ಸಂಸ್ಥೆಯು ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ವೇದಾಧಾರಿತ ಶಿಕ್ಷಣವನ್ನು, ದೇಶದ ಸ್ತ್ರೀ ಸಮುದಾಯಕ್ಕೆ ವಸತಿ- ಊಟೋಪಚಾರ ಸಹಿತ, ಸಂಪೂರ್ಣ ಉಚಿತವಾಗಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಇಂತಹ ವಿಶಿಷ್ಟ ವಿದ್ಯಾಸಂಸ್ಥೆಗಳ ಮೂಲಕ ದೇಶದಲ್ಲಿ ಸನಾತನ ಧರ್ಮದ ಪುನರುಜ್ಜೀವನಕ್ಕಾಗಿ ಸರ್ವರೂ ಒಗ್ಗೂಡಿ ಕಾರ್ಯವೆಸಗಬೇಕು ಎಂದರು.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ಅಧ್ಯಕ್ಷರಾದ ಬಿ. ಎನ್. ನರಸಿಂಹಮೂರ್ತಿರವರು ಮಾತನಾಡಿ ಮೈತ್ರೇಯಿ ಗುರುಕುಲ ಇರುವ ಜಾಗ ಸುಂದರ ನಿಸರ್ಗದ ಮಡಿಲಾಗಿದೆ‌. ಸದ್ಗುರು ಶ್ರೀ ಮಧುಸೂದನ ಸಾಯಿಯವರು ಭಗವಾನ್ ಸತ್ಯಸಾಯಿ ಬಾಬಾರವರ ಸ್ಪೂರ್ತಿ-ಪ್ರೇರಣೆ-ಅನುಗ್ರಹಗಳಿಂದ ಕಳೆದ ಹತ್ತು ವರ್ಷಗಳಲ್ಲಿ ಅವರ ಎಲ್ಲಾ ಕನಸುಗಳನ್ನು ನನಸು ಮಾಡಿದ್ದಾರೆ. ಅವರು ಕರ್ನಾಟಕದ 19 ಜಿಲ್ಲೆಗಳಲ್ಲಿ ಅಲ್ಲದೆ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿಯೂ ಒಂದೊಂದು ಆದರ್ಶ ವಿದ್ಯಾನಿವೇಶನಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆ. ಇನ್ನೂ ವಿಶೇಷವೆಂದರೆ ಈ ವಿದ್ಯಾ ನಿವೇಶನಗಳಲ್ಲಿ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೂ ವಸತಿ, ಊಟೋಪಚಾರ, ವಸ್ತ್ರ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿರುವುದು. ಭಾರತ ದೇಶದಲ್ಲಿ ಸಂಪೂರ್ಣ ಉಚಿತ ಸೇವೆಯನ್ನು ನೀಡುತ್ತಿರುವ ಹನ್ನೆರಡು ಉನ್ನತ ಆಸ್ಪತ್ರೆಗಳನ್ನು ಹಾಗೂ ಫಿಜಿ, ಶ್ರೀಲಂಕಾ ಮತ್ತು ನೈಜೀರಿಯಾ ದೇಶಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಪ್ರಾರಂಭಿಸಿದ್ದಾರೆ. ಭಾರತದ 17 ಪ್ರಾಂತ್ಯಗಳಲ್ಲಿ ಹಾಗೂ ಕೆಲವು ಹೊರಗಿನ ದೇಶಗಳಲ್ಲಿ ಸೇರಿ ಒಟ್ಟು 30 ದಶಲಕ್ಷ ಮಕ್ಕಳಿಗೆ ಪ್ರತಿದಿನ ಪೌಷ್ಠಿಕತೆಯನ್ನು ವೃದ್ಧಿಗೊಳಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ನಮ್ಮ ಭಾರತೀಯ ಗುರುಕುಲದಲ್ಲಿ ಪ್ರಾಚೀನ ಕಾಲದಲ್ಲಿ ಪಂಚ ಶಿಕ್ಷಣವನ್ನು ನೀಡಲಾಗುತ್ತಿತ್ತು. ನಮ್ಮ ದೇಶಕ್ಕೆ ಉಜ್ವಲ ಭವಿಷ್ಯ‌ವಿದೆ ಎನ್ನುವುದು ಇಲ್ಲಿನ ಅದ್ಯಾಪಿಕೆಯರು ಹಾಗೂ ವಿದ್ಯಾರ್ಥಿನಿಯರನ್ನು ನೋಡುವಾಗ ತಿಳಿಯುತ್ತದೆ. ಉತ್ತಮ ವಿದ್ಯಾರ್ಥಿ ಶಿಕ್ಷಕರು ಸೇರಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರಿರುವ ಉತ್ತಮ ವಿದ್ಯಾಸಂಸ್ಥೆ ಇದ್ದರೆ ಆ ಕೀರ್ತಿ ಮೈತ್ರೇಯಿ ಗುರುಕುಲಕ್ಕೆ ಸಲ್ಲಬೇಕು. ಲೋಕ ಕಲ್ಯಾಣದ ಕಾರ್ಯ ಎಲ್ಲರಿಂದಲೂ ಆಗಬೇಕು. ಹತ್ತುವರುಷಗಳಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿಯವರು ಹಲವಾರು ಲೋಕ ಕಲ್ಯಾಣದ ಕೆಲಸವನ್ನು ಮಾಡಿದ್ದಾರೆ ಎಂದರು.

ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಧರ್ಮದರ್ಶಿಗಳಾದ ಸಂಜೀವ ಶೆಟ್ಟಿ ಹಾಗೂ ಮಹೇಂದ್ರ ಹೆಗ್ಗಡೆ, ಕೋಟೆಮನೆ ರಾಮಚಂದ್ರ ಭಟ್ಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲ್ಲಡ್ಕ ಪ್ರಭಾಕರ ಭಟ್ಟ್ ಶ್ರೀಧಾಮ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ನಿವೃತ್ತ ನ್ಯಾಯಾಧೀಶರಾದ ಎನ್. ಕುಮಾರ್, ಪ್ರಮುಖರಾ ದ ಸೀತಾರಾಮ ಕೆದಿಲಾಯ, ಎಸ್.ಆರ್. ರಂಗಮೂರ್ತಿ, ಮುದುಸೂದನ್ ನಾಯಕ್ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಳಗ್ಗೆ ನೂತನ ಕಟ್ಟಡದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು‌. ಗುರುಕುಲದ ವಿದ್ಯಾರ್ಥಿನಿ ವನಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪಲ್ಲವಿ ಸ್ವಾಗತಿಸಿದರು. ಅಜೇಯ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ರೂಪಲೇಖ ಪುತ್ತೂರು ವಂದಿಸಿದರು.

ಅಳಿಕೆ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪನೆ

ಅಳಿಕೆ ಮತ್ತು ಮುದ್ದೇನಹಳ್ಳಿಯ ಪ್ರಸಿದ್ಧ ಲೋಕ ಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿl ಮಡಿಯಾಲ ನಾರಾಯಣ ಭಟ್ಟರ ಹೆಸರಿನಲ್ಲಿ, ಅವರ ಜನ್ಮಸ್ಥಳವಾದ ಅಳಿಕೆ ಗ್ರಾಮದಲ್ಲಿ ಒಂದು ಸಂಪೂರ್ಣ ಉಚಿತ ಸನಿವಾಸವಿರುವ ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗುವುದು. ಇಂತಹ ವಿಶ್ವವಿದ್ಯಾನಿಲಯ ಕೇಂದ್ರವನ್ನು ಸ್ಥಾಪಿಸಿ ದೇಶದ ಯುವ ಜನಾಂಗವನ್ನು ನಿಸ್ವಾರ್ಥ, ತ್ಯಾಗಶೀಲ ದೇಶ ಸೇವಕರನ್ನಾಗಿ ರೂಪಿಸಬೇಕೆಂಬುದು ನಾರಾಯಣ ಭಟ್ಟರ ಉಜ್ವಲ ಆಶಯವಾಗಿತ್ತು. ಇದುವೇ ಅವರ ಸಹೋದರಿ ದಿl ದೇವಕಿ ಭಟ್ಟದ ಜೀವನದ ಅಂತಿಮ ಆಶಯವು ಆಗಿತ್ತು. ಇಂತಹ ಸಂಸ್ಥೆಯ ಸ್ಥಾಪನೆಗಾಗಿ, ದೇವಕಿ ಭಟ್ ಅವರು ದಾನವಾಗಿ ನೀಡಿರುವ ಅಳಿಕೆಯ ಅವರ ಸ್ವಂತ ಜಮೀನಿನಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಎನ್ನುವ ಉನ್ನತ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸುವ ಸಂಕಲ್ಪವಿದೆ. ನಾರಾಯಣ ಭಟ್ಟರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ, 2026ರ ನವೆಂಬರ್ ತಿಂಗಳಲ್ಲಿ ಈ ಉನ್ನತ ಶಿಕ್ಷಣ ಸಂಸ್ಥೆಯು ಕಾರ್ಯೋನ್ಮುಖವಾಗಲಿದೆ. ಅದಕ್ಕೆ ಮೊದಲೇ ಸಂಸ್ಥೆಗೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು.
ಸದ್ಗುರು ಶ್ರೀ ಮಧುಸೂದನ ಸಾಯಿ

LEAVE A REPLY

Please enter your comment!
Please enter your name here