ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳ ಶಿಕ್ಷಕರ ಸಹಕಾರ ಸಂಘ ಪುತ್ತೂರು ನಿ. ಉದ್ಘಾಟನೆ

0

ಪುತ್ತೂರು: ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳ ಶಿಕ್ಷಕರ, ಉಪನ್ಯಾಸಕರ, ನಿವೃತ್ತ ಶಿಕ್ಷಕರು, ನಿವೃತ್ತ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಳಗೊಂಡ ಹಾಗೂ ಭದ್ರತೆಯ ಸೇವೆಯೇ ನಮ್ಮ ಗುರಿ ಧ್ಯೇಯವಾಕ್ಯದೊಂದಿಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೇಂದ್ರ ಕಛೇರಿಯಾಗಿರುವ ಶಿಕ್ಷಕರ ಸಹಕಾರ ಸಂಘ ನಿಯಮಿತ ಪುತ್ತೂರು ಫೆ.15ರಂದು ಆಸ್ತಿತ್ವಕ್ಕೆ ಬರಲಿದ್ದು, ಇದರ ಉದ್ಘಾಟನೆಯು ಎಪಿಎಂಸಿ ರಸ್ತೆಯಲ್ಲಿನ ಸಿಟಿ ಆಸ್ಪತ್ರೆಯ ಬಳಿಯ ಡಾಯಸ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ನೆರವೇರಿತು.



ಗ್ರಾಹಕರಿಗೆ ನಗುಮುಖದ ಸೇವೆಯಿದ್ದಾಗ ಯಶಸ್ವಿ-ಸವಣೂರು ಸೀತಾರಾಮ ರೈ:
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈರವರು ನೂತನ ಕಛೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾಮಾನದಲ್ಲಿ ಕಮರ್ಷಿಯಲ್ ಬ್ಯಾಂಕ್ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ಹೋಲಿಸಿದಾಗ ಜನರು ಸಹಕಾರಿ ಕ್ಷೇತ್ರದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ನಾವು, ನಮ್ಮಿಂದ, ಪರರಿಗೆ ಎನ್ನುವ ಚಿಂತನೆಯೊಂದಿಗೆ ಆರಂಭಗೊಂಡ ಈ ಸಹಕಾರಿ ಸಂಸ್ಥೆಯು ಎಲ್ಲರ ಸಹಕಾರದೊಂದಿಗೆ ಪ್ರಗತಿಯತ್ತ ಸಾಗಲಿ. ಗ್ರಾಹಕರಿಗೆ ಎಲ್ಲಿ ನಗುಮುಖದ ಸೇವೆ ಸಿಗುತ್ತದೋ ಅಂತಹ ಸಂಸ್ಥೆಗಳು ಬೆಳೆಯಬಲ್ಲುದು. ಪ್ರಸ್ತುತ ವಿಟ್ಲ, ಕಡಬ, ಮಂಗಳೂರು, ಪುತ್ತೂರು ಹೀಗೆ ನಾಲ್ಕು ಕಡೆ ಶಿಕ್ಷಕರ ಸಹಕಾರ ಸಂಘಗಳು ಕಾರ್ಯಾಚರಿಸುತ್ತಿದ್ದು ಸಂಸ್ಥೆಗಳು ಅಭಿವೃದ್ಧಿ ಹೊಂದಲಿ ಎಂದರು.

ಶ್ರೇಷ್ಠತೆಯ ಶ್ರಮವಿದ್ದಾಗ ಒಳ್ಳೆಯ ಪ್ರತಿಫಲ ನಮ್ಮದಾಗುತ್ತದೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಆಶೀರ್ವಚನೆಯನ್ನು ನೆರವೇರಿಸಿದ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಶ್ರೇಷ್ಠತೆಯ ಶ್ರಮವಿದ್ದಾಗ ಒಳ್ಳೆಯ ಪ್ರತಿಫಲ ನಮ್ಮದಾಗುತ್ತದೆ. ಯಾವುದೇ ಉದ್ಯಮವಿರಲಿ, ಸಂಘ-ಸಂಸ್ಥೆಗಳಿರಲಿ, ಎಲ್ಲಿ ಪ್ರಾಮಾಣಿಕ, ನಿಷ್ಠೆ, ಸತ್ಯ, ವಿಶ್ವಾಸದ, ಸೌಹಾರ್ದತೆಯ, ಸೇವೆಯ ಚಟುವಟಿಕೆ ಇರುತ್ತದೆಯೋ ಅಲ್ಲಿ ದೇವರು ಖಂಡಿತಾ ಪ್ರತಿಫಲ ನೀಡುತ್ತಾನೆ ಎಂದರು.



ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ಇದು ಪೂರಕ-ಲೋಕೇಶ್ ಎಸ್.ಆರ್:
ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ರವರು ಮಾತನಾಡಿ, ಸಾಲ ಪಡೆಯುವಲ್ಲಿ ಹಿಂದಿನ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಸಾಮ್ಯತೆ ಇದೆ. ಸಹಕಾರ ಸಂಘದಲ್ಲಿ ಸಾಲ ಪಡೆಯಲು ಇಂದು ಸುಲಭ ಸಾಧ್ಯತೆಯಿದ್ದರೂ, ಸಾಲ ಪಡೆಯುವವರು ತಮ್ಮ ಬೇಡಿಕಗನುಸಾರ ಸಾಲ ಪಡೆಯಬೇಕಾಗುತ್ತದೆ. ಶಿಕ್ಷಕರ ಪರಿಚಯದ ಆಧಾರದ ಮೇಲೆ ಸಹಕಾರ ಸಂಘಗಳು ಸಾಲ ಕೊಟ್ಟರೂ, ಸಾಲ ಪಡೆದುಕೊಂಡವರು ಜವಾಬ್ದಾರಿಯುತವಾಗಿ ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವಂತಾದಾಗ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ಇದು ಪೂರಕವಾಗುತ್ತದೆ ಎಂದರು.

ಶಿಕ್ಷಕರಿಗೆ ಸಾಲದ ಮೂಲ ಕೊಡುವ ಈ ಸಂಸ್ಥೆಯು ಆರ್ಥಿಕವಾಗಿ ಬೆಳೆಯಲಿ-ತ್ರಿವೇಣಿ ರಾವ್:
ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ.ರವರು ಕಂಪ್ಯೂಟರ್ ಉದ್ಘಾಟನೆಯನ್ಬು ನೆರವೇರಿಸಿ ಮಾತನಾಡಿ, ಹಿಂದು ಸಂಪ್ರದಾಯದ ಪ್ರಕಾರ ಪಂಚಮಿ ಹಾಗೂ ಸೃಷ್ಟಿಯ ದಿನದಂದು ಆರಂಭಗೊಂಡ ಈ ಸಂಸ್ಥೆಯು ಉತ್ತರೋತ್ತರ ಪ್ರಗತಿ ಹೊಂದಲಿ ಜೊತೆಗೆ ಶಿಕ್ಷಕರಿಗೆ ಸಾಲದ ಮೂಲ ಕೊಡುವ ಈ ಸಂಸ್ಥೆಯು ಆರ್ಥಿಕವಾಗಿ ಬೆಳೆಯಲಿ ಎಂದರು.

ಶಿಕ್ಷಕರು ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ-ರೆ|ವಿಜಯ ಹಾರ್ವಿನ್:
ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೆ|ವಿಜಯ ಹಾರ್ವಿನ್ ಮಾತನಾಡಿ, ಶಿಕ್ಷಕರು ತಮ್ಮದೇ ಉಳಿಕೆ ಹಣವನ್ನು ಈ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡು ಇತರರಿಗೆ ಸಾಲದ ರೂಪದಲ್ಲಿ ಹಂಚಿ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಮಾತ್ರವಲ್ಲ ಇದು ದೇಶದ ಆರ್ಥಿಕತೆ ಸದೃಢತೆಯತ್ತ ಸಾಗಬಲ್ಲುದಾಗಿದೆ. ಸಹಕಾರ ತತ್ವದಡಿಯಲ್ಲಿ ಸಂಘವು ಉತ್ತಮ ಆಲೋಚನೆಯಿಂದ ಮುಂದಡಿಯಿಟ್ಟಾಗ ದೇವರು ಆಶೀರ್ವಾದ ನೀಡಬಲ್ಲನು ಎಂದರು.

ಶಿಕ್ಷಕರ ಸಹಕಾರ ಸಂಘವು ಪುತ್ತೂರಿಗೆ ಉತ್ತಮ ಕೊಡುಗೆ-ಕೆ.ಪಿ ಅಹಮದ್ ಹಾಜಿ:
ಸಾಲ್ಮರ ಮೌಂಟನ್ ವ್ಯೂ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಪಿ ಅಹಮದ್ ಹಾಜಿ ಮಾತನಾಡಿ, ಶಿಕ್ಷಕರ ಸಹಕಾರ ಸಂಘವು ಇಂದು ಲೋಕಾರ್ಪಗೊಂಡಿರುವುದು ಪುತ್ತೂರಿಗೆ ಉತ್ತಮ ಕೊಡುಗೆಯಾಗಿದೆ. ಸಂಸ್ಥೆಯು ಉತ್ತಮವಾಗಿ ನಡೆದು, ಅಭಿವೃದ್ಧಿ ಹೊಂದಲು ಕರುಣಾಮಯಿ ದೇವರು ಹರಸಲಿ ಎಂದರು.

ಶಿಕ್ಷಕರ ಸಹಕಾರಿ ಸಂಘವು ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ-ಈಶ್ವರ್ ಭಟ್ ಪಂಜಿಗುಡ್ಡೆ:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಮಾತನಾಡಿ, ಶಿಕ್ಷಕರ ಸಹಕಾರಿ ಸಂಘವು ಬೆಳೆಯುತ್ತಿರುವ ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದೆ. ಪ್ರಸ್ತುತ ದಿನಗಳಲ್ಲಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಭಾಷೆ ಗೊತ್ತಿಲ್ಲದವರ ಸಂಖ್ಯೆ ಹೆಚ್ಚಾಗಿದ್ದು ಕೇವಲ “ಕೈ ಸನ್ನೆ” ಮೂಲಕ ಸಂವಹನ ನಡೆಸುವ ಸ್ಥಿತಿ ಬಂದಿದೆ. ಯಾಕೆಂದರೆ ಅವರಿಗೆ ನಮ್ಮ ಭಾಷೆ ಗೊತ್ತಿಲ್ಲ, ನಮಗೆ ಅವರ ಭಾಷೆ ಗೊತ್ತಿಲ್ಲ. ಆದರೆ ಸಹಕಾರಿ ಸಂಘಗಳಲ್ಲಿ ಎಲ್ಲರೂ ನಮ್ಮವರೇ ಇರೋದ್ರಿಂದ ಸುಗಮ ಕಾರ್ಯಚಟುವಟಿಕೆಗೆ ಸಾಧ್ಯವಾಗಿದ್ದು ಈ ಸಂಹಕಾರಿ ಸಂಘಗಳು ಹೆಮ್ಮರವಾಗಿ ಬೆಳೆಯಲಿ ಎಂದರು.

ಎಲ್ಲಾ ಶಿಕ್ಷಕರು ಈ ಸಂಸ್ಥೆಯನ್ನು ಉಳಿಸಿ ಬೆಳೆಸುವವರಾಗಿ-ಲಿಲ್ಲಿ ಪಾಯಿಸ್:
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಲಿಲ್ಲಿ ಪಾಯಿಸ್ ಮಾತನಾಡಿ, ಸಹಕಾರ ಸಂಸ್ಥೆಗಳು ಹುಟ್ಟು ಹಾಕಿಕೊಳ್ಳುವುದು ಸುಲಭ. ಆದರೆ ಅದು ಮುಂದಯವರೆಯಬೇಕಾದರೆ ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಎಲ್ಲಾ ಶಿಕ್ಷಕರು ಈ ಸಂಸ್ಥೆಯನ್ನು ಉಳಿಸಿ ಬೆಳೆಸುವವರಾಗಿ ಎಂದರು.

ಸಂಸ್ಥೆಯು ತನ್ನ ಕಾರ್ಯತತ್ಪರೆಯಿಂದ ಎಲ್ಲರಿಗೂ ಮಾದರಿ ಎನಿಸಲಿ-ಶಿವಾನಂದ ಆಚಾರ್ಯ:
ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಸಹಕಾರ ಸಂಘಗಳು ಪೂರಕವಾಗಿವೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ತನ್ನ ಕಾರ್ಯತತ್ಪರೆಯಿಂದ ಎಲ್ಲರಿಗೂ ಮಾದರಿ ಎನಿಸಲಿ ಎಂದರು.

ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಕಡಬ ತಾಲೂಕು ಸಹಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಎಪಿಎಂಸಿ ರಸ್ತೆ ಡಾಯಸ್ ಕಾಂಪ್ಲೆಕ್ಸ್ ಮಾಲಕ ದೀಪಕ್ ಡಾಯಸ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ, ವಿಟ್ಲ ಅಧ್ಯಾಪಕರ ಸಹಕಾರ ಸಂಘದ ನಿರ್ದೇಶಕ ಸುರೇಶ್ ಕುಮಾರ್, ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಲೇರಿಯನ್ ಡಾಯಸ್, ಎಪಿಎಂಸಿ ರಸ್ತೆ ಆವಿನ್ ಕಾಂಪ್ಲೆಕ್ಸ್ ಮಾಲಕ ಮೆಲ್ವಿನ್ ಫೆರ್ನಾಂಡೀಸ್, ಡಾಯಸ್ ಕಾಂಪ್ಲೆಕ್ಸ್‌ನ ಮಳಿಗೆಗಳ ಮಾಲಕರು ಹಾಗೂ ಸಿಬ್ಬಂದಿಗಳು, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಕಾಲೇಜುಗಳ ಶೈಕ್ಷಣಿಕ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದರು. ಸಂಸ್ಥೆಯ ಮುಖ್ಯ ಪ್ರವರ್ತಕ ಮಾಮಚ್ಚನ್ ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಪ್ರವರ್ತಕರಾದ ರಾಜಶೇಖರ ಎಂ, ಮೋನಪ್ಪ ಎಂ, ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಬಾಬು ಟಿ, ಶ್ರೀಕಾಂತ್ ಕಂಬಳಕೋಡಿ, ಅಬ್ದುಲ್ ಬಶೀರ್ ಕೆ, ಗಿರೀಶ್ ಡಿ, ರತ್ನಕುಮಾರಿ, ಸ್ಮಿತಾಶ್ರೀ ಬಿ, ಸುಮತಿ ಎ.ಆರ್, ಸುನಿಲ, ಮೋಲಿ ಫೆರ್ನಾಂಡೀಸ್‌ರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಗೌರವಿಸಿ ಸಹಕರಿಸಿದರು.

-ಗ್ರಾಹಕರಿಗೆ ನಗುಮುಖದ ಸೇವೆಯಿದ್ದಾಗ ಯಶಸ್ವಿ-ಸವಣೂರು ಸೀತಾರಾಮ ರೈ
-ಶ್ರೇಷ್ಠತೆಯ ಶ್ರಮವಿದ್ದಾಗ ಒಳ್ಳೆಯ ಪ್ರತಿಫಲ ನಮ್ಮದಾಗುತ್ತದೆ-ವಂ|ಲಾರೆನ್ಸ್ ಮಸ್ಕರೇನ್ಹಸ್
-ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ಇದು ಪೂರಕ-ಲೋಕೇಶ್ ಎಸ್.ಆರ್
-ಶಿಕ್ಷಕರಿಗೆ ಸಾಲದ ಮೂಲ ಕೊಡುವ ಈ ಸಂಸ್ಥೆಯು ಆರ್ಥಿಕವಾಗಿ ಬೆಳೆಯಲಿ-ತ್ರಿವೇಣಿ ರಾವ್
-ಶಿಕ್ಷಕರು ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ-ರೆ|ವಿಜಯ ಹಾರ್ವಿನ್
-ಶಿಕ್ಷಕರ ಸಹಕಾರ ಸಂಘವು ಪುತ್ತೂರಿಗೆ ಉತ್ತಮ ಕೊಡುಗೆ-ಕೆ.ಪಿ ಅಹಮದ್ ಹಾಜಿ
-ಶಿಕ್ಷಕರ ಸಹಕಾರಿ ಸಂಘವು ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ-ಈಶ್ವರ್ ಭಟ್ ಪಂಜಿಗುಡ್ಡೆ
-ಎಲ್ಲಾ ಶಿಕ್ಷಕರು ಈ ಸಂಸ್ಥೆಯನ್ನು ಉಳಿಸಿ ಬೆಳೆಸುವವರಾಗಿ-ಲಿಲ್ಲಿ ಪಾಯಿಸ್

-ಸಂಸ್ಥೆಯು ತನ್ನ ಕಾರ್ಯತತ್ಪರೆಯಿಂದ ಎಲ್ಲರಿಗೂ ಮಾದರಿ ಎನಿಸಲಿ-ಶಿವಾನಂದ ಆಚಾರ್ಯ

ಸಾಲ ಸೌಲಭ್ಯಗಳು..
*ತುರ್ತು ಸಾಲ, ಜಮೀನು ಸಾಲ
*ವ್ಯಾಪಾರ ಸಾಲ, ವೈಯಕ್ತಿಕ ಸಾಲ
*ಅಡಮಾನ ಸಾಲ, ವಾಹನ ಸಾಲ
*ಚಿನ್ನಾಭರಣ ಸಾಲ

LEAVE A REPLY

Please enter your comment!
Please enter your name here