ಪುತ್ತೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ದೇಶಾದ್ಯಂತ ಕಾರ್ಯಚಟುವಟಿಕೆಯನ್ನು ಆರಂಭಿಸಿದೆ. ಬೂತ್ ಮಟ್ಟದಲ್ಲಿ ಸಂಘಟನಾ ಕಾರ್ಯ ನಡೆಸಲಾಗುತ್ತಿದೆ. ಈ ನಡುವೆ, ದೆಹಲಿಯಲ್ಲಿ ಫೆ.17 ರಿಂದ ಎರಡು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಪ್ರತಿ ರಾಜ್ಯದ ನಾಯಕರನ್ನು ಆಹ್ವಾನಿಸಲಾಗಿದ್ದು, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಸಭೆಗೆ ಆಹ್ವಾನಿಸಲಾಗಿದೆ.
ಮಾಜಿ ಶಾಸಕ ಸಂಜೀವ ಮಠಂದೂರು, ಬೆಂಗಳೂರು ದಕ್ಷಿಣ ಪ್ರಭಾರಿ ಮತ್ತು ರಾಜ್ಯ ಸಹಕಾರಿ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ ಎನ್ನಲಾಗಿದೆ. ದೆಹಲಿಯ ಭಾರತ ಮಂಟಪದಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಗೆ ಎಲ್ಲಾ ರಾಜ್ಯಗಳ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ಪದಾಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಸಭೆಯ ಮೊದಲ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಷಣ ಮಾಡಲಿದ್ದು, ಕೊನೆಯ ದಿನ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.