ಒಂದು ಹಾಳೆ ಹಿಂಗಾರವಿಟ್ಟರೆ ಆರಭರಣಗಳನ್ನು ನೀಡುವ ಕಾರಣಿಕದ ವಿಶೇಷ ಹಿನ್ನೆಲೆ
ಫೆ.21, 22ಕ್ಕೆ ಬನ್ನೂರು ಶ್ರೀ ದೈಯ್ಯೆರೆ ಮಾಡ ನಡಿಮಾರ್ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ಪುತ್ತೂರು: ತುಳುನಾಡು ನಾಗಾರಾಧನೆ, ದೈವರಾಧನೆಯ ತವರೂರು, ಇಲ್ಲಿನ ದೈವ ದೇವರ ಕಾರ್ಣಿಕ ಪವಾಡಗಳು ನಮಗೆಲ್ಲ ತಿಳಿದಿರುವ ವಿಚಾರ. ಅದೇ ರೀತಿ ಸೂಟೆಯ ಬೆಳಕಿನ ಸಂಚಾರ ಪ್ರತೀತಿ, ಸಂತಾನ ಭಾಗ್ಯ ಸಹಿತ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯಾಗಿ ಗೋಚರಿಸಿದ ಬನ್ನೂರು ಗ್ರಾಮ ನಡಿಮಾರು ಹಾಗು ಆನೆಮಜಲು ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಜೀರ್ಣ ವ್ಯವಸ್ಥೆಯಲ್ಲಿದ್ದ ದೈವ ಸಾನಿಧ್ಯ ಇದೀಗ ಜೀರ್ಣೋದ್ಧಾರಗೊಂಡು ಫೆ.21 ಮತ್ತು 22ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಅವರು ಜೊತೆಯಾಗಿ ಮಾತನಾಡಿ ಬನ್ನೂರು ದೈಯ್ಯೆರೆ ಮಾಡ ನಡಿಮಾರ್, ಆನೆಮಜಲು ನ್ಯಾಯಾಲಯ ಸಂಕೀರ್ಣ ಇರುವ ಜಾಗದಲ್ಲಿರುವ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.21 ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ, ಸಂಜೆ ಪುಣ್ಯಾಹವಾಚನ, ಸ್ಥಳಶುದ್ದಿ, ಪೂಜಾ ವಿಧಿವಿಧಾನ ನಡೆಯಲಿದೆ. ಇದೇ ಸಂದರ್ಭ ಸಂಜೆ ಗಂಟೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೇದಿಕೆಯಲ್ಲಿ ಗುಡ್ಡಪ್ಪ ಬಲ್ಯ ಮತ್ತು ತಂಡದವರಿಂದ ತಾಳಮದ್ದಳೆ ನಡೆಯಲಿದೆ. ಫೆ.22ರಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಬ್ರಹ್ಮಕಲಶಪೂಜೆ, ಬೆಳಿಗ್ಗೆ ಗಂಟೆ 11.33ಕ್ಕೆ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ:
ಫೆ.22ರ ಸಂಜೆ ಗಂಟೆ 6.30 ರಿಂದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಬ್ರಹ್ಮಕಲಶ ಮತ್ತು ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸುದೇಶ್ ಪೂಂಜಾ ಬನ್ನೂರುಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ನೀರ್ಪಾಜೆ, ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಪೌರಾಯುಕ್ತ ಮಧು ಎಸ್ ಮನೋಹರ್, ಕುಂಟ್ಯಾಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಎನ್, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎ.ವಿ.ನಾರಾಯಣ ಹೇಳಿದರು.
ಬೆಳಿಗ್ಗೆ ಭಜನೆ, ಮಧ್ಯಾಹ್ನ ಹರಿಕಥೆ, ಸಂಜೆ ಗಾನ ಸಂಭ್ರಮ:
ಫೆ.22ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2 ರಿಂದ ಹರಿದಾಸ ಶ್ರೀ ಮಂಡ್ಯ ಮಧುಸೂಧನ್ ತಂಡದಿಂದ ಹರಿಕಥಾ ಕಾಲಕ್ಷೇಪ ‘ಗಿರಿಜಾ ಕಲ್ಯಾಣ’ ನಡೆಯಲಿದೆ. ಸಂಜೆ ಗಂಟೆ 4 ರಿಂದ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವನಾಥ ಗೌಡ ಬನ್ನೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೀಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್ ಎನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ ಉಪಸ್ಥಿತರಿದ್ದರು.
—