*ರಾಮ ಮಂದಿರ ನಿರ್ಮಾಣಕ್ಕೆ ಕಾರಣಕರ್ತರಾದವರು ಈ ಕ್ಷೇತ್ರಕ್ಕೂ ಬಂದಿರುವುದು ಇತಿಹಾಸ – ಸಂಜೀವ ಮಠಂದೂರು
*ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣಗಳು ಪ್ರಾರಂಭವಾಗಲಿ- ಕೇಶವಪ್ರಸಾದ್ ಮುಳಿಯ
*ಕ್ಷೇತ್ರದಲ್ಲಿ ಗತ ಕಾಲದ ವೈಭವ ಕಾಣುವ ಸಾಧ್ಯತೆ ಇದೆ – ರಾಜಶೇಖರ್ ಜೈನ್
*ಸಾನಿಧ್ಯ ಜೀರ್ಣೋದ್ಧಾರಗೊಂಡ ಬಳಿಕವೇ ಕೋರ್ಟ್ ಉದ್ಘಾಟನೆ, ಕೆರೆಯ ಅಭಿವೃದ್ಧಿ – ಎ.ವಿ.ನಾರಾಯಣ
*ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ – ವಿಶ್ವನಾಥ ಗೌಡ ಬನ್ನೂರು
ಪುತ್ತೂರು: ರಾಮಮಂದಿರ ಅಯೋಧ್ಯೆಯಲ್ಲಿ ಆಗಬೇಕಾದಾರೆ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿತ್ತು. ಆ ತೀರ್ಪನ್ನು ನೀಡಿದ ನ್ಯಾಯ ಮೂರ್ತಿ ನಝೀರ್ ಅವರು ಇದೇ ನ್ಯಾಯಾಲಯ ಸಂಕೀರ್ಣದ ಪಕ್ಕದಲ್ಲಿರುವ ಇಷ್ಟದೇವತೆಗಳ ಸ್ಥಾನಕ್ಕೆ ಬಂದು ಅಲ್ಲಿ ಕೈ ಮುಗಿದು ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಮಾಡಿದ್ದರು. ಹಾಗಾಗಿ ರಾಮ ಮಂದಿರ ನಿರ್ಮಾಣ ಮಾಡಲು ಯಾರು ಕಾರಣಕರ್ತರೂ ಅವರು ಇದೇ ಇಷ್ಟ ದೇವತೆಗಳ ಕ್ಷೇತ್ರಕ್ಕೂ ಬಂದಿರುವುದು ಇತಿಹಾಸ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಬನ್ನೂರು ಗ್ರಾಮದ ದೈಯರ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದ ಬಳಿಯ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯದಲ್ಲಿ ಫೆ.22ರಂದು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವಾರು ಕೈಗಳು, ನೂರಾರು ಹೃದಯಗಳು ಸೇರಿದರೆ ದೈವದ ಕಾರ್ಯವನ್ನು ಹೇಗೆ ಮಾಡಬಹುದು ಎಂಬುದನ್ನು ಬನ್ನೂರು ನಡಿಮಾರು ಮಾದರಿಯಾಗಿದೆ. ದೈವ ನಿಷ್ಟೆ, ಸ್ವಾಮಿ ನಿಷ್ಟೆ ಇದ್ದಲ್ಲಿ ಕಂಡಿತಾ ಭಗವಂತನನ್ನು ಕಾಣಲು ಸಾಧ್ಯ. ಈ ಭಾಗದಲ್ಲಿ ದೈವದ ಮಂದಿರ ನಿರ್ಮಾಣ ಮಾಡುವ ಮೂಲಕ ನೂರಾರು ವರ್ಷಗಳ ಹಿರಿಯರ ಭಾವನೆ ನಂಬಿಕೆಯನ್ನು ಮತ್ತೊಮ್ಮೆ ಸಮಾಜಕ್ಕೆ ಈಗಿನ ಪೀಳಿಗೆ ತೋರಿಸುವ ಮೂಲಕ ನಾವು ಕೂಡಾ ಇತಿಹಾಸ ನಿರ್ಮಾಣ ಮಾಡುವ ಕೆಲಸ ಮಾಡಿದ್ದೇವೆ. ಅಯೋಧ್ಯೆಯಲ್ಲಿ ಹೇಗೆ ರಾಮಮಂದಿರ ನಿರ್ಮಾಣ ಆಗಿದೆಯೋ ಅದೆ ರೀತಿ ಹಳ್ಳಿ ಹಳ್ಳಿಯಲ್ಲಿ ರಾಮ ಭಕ್ತಿ ಮತ್ತು ದೈವ ಭಕ್ತಿ ಮೂಡಿ ಬರುತ್ತಿದೆ. ಆ ದೈವ ಭಕ್ತಿ ಬನ್ನೂರಿನಲ್ಲಿ ಕಾಣುತ್ತಿದೆ. ಮುಂದಿನ ದಿನ ಬನ್ನೂರು ಪವಿತ್ರ ಕ್ಷೇತ್ರವಾಗಲಿದೆ ಎಂದರು.
ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣಗಳು ಪ್ರಾರಂಭವಾಗಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಇವತ್ತು ಧಾರ್ಮಿಕತೆ ಬೆಳೆಯುತ್ತಿದೆ. ಮಹಾಲಿಂಗೇಶ್ವರ ದೇವರ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲೂ ಈ ಭಾಗದ ವಿಚಾರ ಬಂದಿತ್ತು. ಇವತ್ತು ಧಾರ್ಮಿಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಎಷ್ಟು ಕಷ್ಟ ಇದೆಯೋ ಅದನ್ನು ನಿರ್ವಹಿಸಿ ಮುಂದಿನ ತಲೆಮಾರಿಗೆ ಮುಟ್ಟಿಸುವುದು ಕೂಡಾ ನಮ್ಮ ಕೆಲಸ. ಧಾರ್ಮಿಕ ಕೇಂದ್ರಗಳು ಕೇವಲ ಪೂಜೆ ಪುನಸ್ಕಾರಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿ ಮೂಡಿ ಬರಬೇಕು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ದಾರಿ ತೋರಿಸುವ ಕೆಲಸ ಆಗಬೇಕು. ಧರ್ಮ ಶಿಕ್ಷಣವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಧಾರ್ಮಿಕ ಕೇಂದ್ರದಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಾರಂಭಿಸಲು ಮನವಿ ಮಾಡಿದರು.
ಕ್ಷೇತ್ರದಲ್ಲಿ ಗತ ಕಾಲದ ವೈಭವ ಕಾಣುವ ಸಾಧ್ಯತೆ ಇದೆ:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಶೇಖರ್ ಜೈನ್ ನೀರ್ಪಾಜೆ ಅವರು ಮಾತನಾಡಿ ಈ ಕ್ಷೇತ್ರದಲ್ಲಿ ಸಾನಿಧ್ಯವನ್ನು ಜೀರ್ಣೋದ್ಧಾರ ಮಾಡುವ ಕುರಿತು ನನ್ನ ಸ್ನೇಹಿತ ಎ.ವಿ.ನಾರಾಯಣ ಅವರು ಪ್ರತಿ ಸಲ ನಮ್ಮಲ್ಲಿ ಬಂದು ಮಾತುಕತೆ ನಡೆಸುತ್ತಿದ್ದರು. ಇವತ್ತು ಇಲ್ಲಿನ ಸಾನಿಧ್ಯ ಜೀರ್ಣೋದ್ಧಾರ ಆಗಿರುವುದು ಎ.ವಿ.ನಾರಾಯಣ ಅವರ ನಾಯಕತ್ವದಿಂದ. ಅವರ ಟೀಮ್ ವರ್ಕ್ ಉತ್ತಮವಾಗಿ ನಡೆದಿದೆ. ಮುಂದಿನ ದಿನ ಇಲ್ಲಿ ಗತ ಕಾಲದ ವೈಭವ ಕಾಣುವ ಸಾಧ್ಯತೆ ಇದೆ ಎಂದರು.
ದೇವಿಯ ಸಾನಿಧ್ಯ ಜೀರ್ಣೋದ್ಧಾರಗೊಂಡ ಬಳಿಕವೇ ಕೋರ್ಟ್ ಉದ್ಘಾಟನೆ, ಕೆರೆಯ ಅಭಿವೃದ್ಧಿ:
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 20 ವರ್ಷದ ಮೊದಲು ಈ ಸ್ಥಳಕ್ಕೆ ವೇ ಮೂ ಹರಿಪ್ರಸಾದ್ ವಯಿಲಾಯರವರನ್ನು ಕರೆಸಿ ಇಲ್ಲಿ ಪ್ರಶ್ನೆ ಇಟ್ಟಿದ್ದೆವು. ಅದು ಪೂರ್ಣಗೊಳ್ಳದಾಗ ಅವರು ಕೊನೆಗೆ ಇದರ ಚಿಂತನೆಯನ್ನು 10 ವರ್ಷಗಳ ಬಳಿಕ ಮಾಡುವ ಎಂದರು. 2013ನೇ ಇಸವಿಯಲ್ಲಿ ಲೋಕೇಶ್ ಅಲ್ಬುಡ ಅವರ ನೇತೃತ್ವದಲ್ಲಿ ಒಂದು ಪ್ರಶ್ನೆ ಚಿಂತನೆ ಮಾಡಲಾಯಿತು. ಮತ್ತೆ 2018-19ರಲ್ಲಿ ಮತ್ತೆ ಪ್ರಶ್ನೆ ಚಿಂತನೆ ಸಭೆ ಮಾಡಿದ್ದೆವು. ಈ ನಡುವೆ ನನ್ನ ಮನೆಯಲ್ಲಿ ಮೂರು ದಿನ ನಾಗರಹಾವು ಕಾಣಿಸಿತ್ತು. ಈ ಕುರಿತು ಪ್ರಶ್ನೆ ಚಿಂತನೆ ಮಾಡಿದಾಗ ಬಾವುದಕೆರೆಯ ಪಕ್ಕದ ನಾಗ ಸಾನಿಧ್ಯವನ್ನು ಜೀರ್ಣೋದ್ದಾರ ಮಾಡುವಂತೆ ಸೂಚನೆ ಬಂತು. ಅದರಂತೆ ಊರಿನವರನ್ನು ಸೇರಿಸಿಕೊಂಡು ಕಾರ್ಯಪ್ರವೃತರಾಗುತ್ತಿದ್ದಂತೆ ಆನೆಮಜಲಿನಲ್ಲಿ ಕೋರ್ಟ್ ನಿರ್ಮಾಣಕ್ಕೆ ಸಿದ್ದತೆ ನಡೆಯಿತು. ಆಗ ಭಾಗದಲ್ಲಿರುವ ಇಷ್ಟದೇವತೆ ಬನವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನ ಊರವರೊಂದಿಗೆ ಸೇರಿಕೊಂಡು ಅಲ್ಲಿ ಕೇಕನಾಜೆ ಗಣೇಶ್ ಭಟ್ ಪ್ರಶ್ನೆ ಚಿಂತನೆ ನಡೆಸಿದರು. ಆದರೆ ಪ್ರಧಾನ ದೇವರ ಬಳಿಯೇ ಪ್ರಶ್ನೆ ಇಡಬೇಕೆಂದು ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿ ಅದು ಪೂರ್ಣಗೊಂಡಿರಲಿಲ್ಲ. ಕೊನೆಗೆ 2020ನೇ ಇಸವಿಯಲ್ಲಿ ದೈಯ್ಯೆರೆ ಮಾಡ ಕ್ಷೇತ್ರದಲ್ಲೇ ಪ್ರಶ್ನೆ ಚಿಂತನೆ ಮಾಡಲಾಯಿತು. ಆಗ ಈ ಭಾಗದ ದೈವ ದೇವರು, ಬಾವುದಕೆರೆಯ ನಾಗ ಸಾನಿದ್ಯ ಎಲ್ಲಾ ವಿಚಾರ ಬೆಳಕಿಗೆ ಬಂತು. ಒಟ್ಟಿನಲ್ಲಿ ದೇವಿಯ ಸಾನಿಧ್ಯದ ಜೀರ್ಣೋದ್ಧಾರ ಆಗದೆ ಆನೆಮಜಲಿನಲ್ಲಿ ಕೋರ್ಟು ಆಗಲಿಲ್ಲ. ಬಾವುದಕೆರೆಯ ಅಭಿವೃದ್ಧಿಯನ್ನು ಮಾಡಲು ಆಗಿರಲಿಲ್ಲ. ಇಲ್ಲಿನ ಸಾನಿಧ್ಯ ಜೀರ್ಣೋದ್ದಾರ ಅದ ಬಳಿಕವೇ ಕೋರ್ಟ್ ಉದ್ಘಾಟನೆಯಾಗಲಿದೆ ಎಂಬಂತೆ ಮುಂದಿನ ದಿನ ಎಲ್ಲವೂ ಒಳ್ಳೆಯದಾಗಲಿದೆ. ನಾಲ್ಕು ವರ್ಷಗಳ ಕಾಲ ನಿಧಾನವೇ ಪ್ರಧಾನ ಎಂಬಂತೆ ಕೆಲಸ ಕಾರ್ಯ ಮಾಡಿ ಇವತ್ತು ಎಲ್ಲವೂ ಪೂರ್ಣವಾಗಿದೆ. ಈ ಕ್ಷೇತ್ರ ಮುಂದೆ ಬಲ್ನಾಡಿನ ಉಳ್ಳಾಲ್ತಿ ಕ್ಷೇತ್ರದಂತೆ ಮೂಡಿ ಬರಲಿದೆ ಎಂದರು.
ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ:
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಅವರು ಸ್ವಾಗತಿಸಿ ಮಾತನಾಡಿ ಆರಂಭದಿಂದ ಇಲ್ಲಿನ ತನಕ ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲೂ ಊರವರ ಭಕ್ತರ ಎಲ್ಲರ ಸಹಕಾರ ಸಿಕ್ಕಿದೆ. ಎಲ್ಲರು ಉತ್ತಮ ಸಹಕಾರ ನೀಡಿದ್ದಾರೆ. ಹಾಗಾಗಿ ಇವತ್ತು ಬ್ರಹ್ಮಕಲಶವು ತಾಯಿಯ ಆಶೀರ್ವಾದಂತೆ ಯಶಸ್ವಿಯಾಗಿ ನಡೆದಿದೆ ಎಂದರು.
ಸನ್ಮಾನ:
ಕ್ಷೇತ್ರದಲ್ಲಿ ಪೂರ್ಣ ರೀತಿಯಲ್ಲಿ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶದ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ನೇತೃತ್ವ ವಹಿಸಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಅವರನ್ನು ಸಮಿತಿಯ ಸದಸ್ಯರು ಸೇರಿ ಸನ್ಮಾನಿಸಿದರು. ಇದೇ ಸಂದರ್ಭ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ಸಂಬಂಧಿಸಿ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ವಾಸುದೇವ ಅಚಾರ್ಯ ಬೆದ್ರಾಳ, ಯಶೋಧಾರ ಮುಕ್ವೆ, ಕುಶಾಲಪ್ಪ ಗೌಡ ಸೇರಾಜೆ, ಶರತ್, ರವಿ, ಚರಣ್ , ಕ್ಷೇತ್ರಕ್ಕೆ ಮರ ಮತ್ತು ಆರ್ಥಿಕವಾಗಿ ಸಹಕರಿಸಿದ ವಾಸಪ್ಪ ಗೌಡ, ನಾರಾಯಣ ಗೌಡ ಮನೆಯವರನ್ನು ಮತ್ತು ಹನುಮಾಜೆ ಕೃಷ್ಣ ಭಟ್, ಶೇಷಮ್ಮ ಬಾಬು ಗೌಡ, ಕೃಷ್ಣಭಟ್ ಕುಳುರು, ಮೌರೀಸ್ ಗೋನ್ಸಾಲಿಸ್ ಅಲ್ಮುಡ, ಕರಸೇವಕರಿಗೆ, ಆನೆಮಜಲು ಫ್ರೆಂಡ್ಸ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬನ್ನೂರು ತಂಡಗಳು, ಶ್ರೀ ಶಿವಪಾರ್ವತಿ ಮಂದಿರ ಮತ್ತು ಶ್ರೀ ಮಹಾಲಕ್ಷ್ಮೀ ಮಂದಿರದ ಸದಸ್ಯರು, ಸ್ಪೂರ್ತಿ ಯುವ ಸಂಸ್ಥೆಯ ಪದಾಧಿಕಾರಿಗಳು, ಬನ್ನೂರು ನವೋದಯ ಯುವಕ, ಯುವತಿ ಮಂಡಳಿಯ ಪದಾಧಿಕಾರಿಗಳು, ಕೃಷ್ಣನಗರ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ, ವೈಶಾಖ ಬ್ರದರ‍್ಸ್ ಪುತ್ತೂರು, ಒಕ್ಕಲಿಗ ಸ್ವಸಹಾಯ ಗ್ರಾಮ ಒಕ್ಕೂಟ ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು, ಗೆಳೆಯರ ಬಳಗ ಜೈನರಗುರಿ ಬನ್ನೂರು ಸಹಿತ ಹಲವಾರು ಮಂದಿ ಕಾರ್ಯಕರ್ತರನ್ನು ಗೌರವಿಸಲಾಯಿತು.
ಅದೃಷ್ಟ ಚೀಟಿಯ ಡ್ರಾ:
ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಅದೃಷ್ಟ ಚೀಟಿ ಯೋಜನೆಯನ್ನು ಕಾರ್ಯಕ್ರಮದ ಕೊನೆಯಲ್ಲಿ ಡ್ರಾ ಮಾಡಲಾಯಿತು ಆನೆಮಜಲಿನ ಅನ್ವಿ ಯು ಹೆಚ್(ಪ್ರ), ಟೌನ್ ಬ್ಯಾಂಕ್ ಮಮತಾ(ದ್ವಿ), ತಾರಿಗುಡ್ಡೆಯ ಕಾಮಾಕ್ಷಿ(ತೃ) ಬಹುಮಾನ ಪಡೆದುಕೊಂಡಿದ್ದಾರೆ. ಕೊರಗಪ್ಪ ಆನೆಮಜಲು, ಕುಸುಮಾ ನಾರಾಯಣ ಮೂಲ್ಯ, ಜೋಸ್ನಾ ಅವರು ಅದೃಷ್ಟ ಚೀಟಿಯನ್ನು ಡ್ರಾ ನಡೆಸಿದರು. ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಎನ್. ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ರವಿ ಮುಂಗ್ಲಿಮನೆ, ಶೇಖರ್ ಬಿರ‍್ವ, ಸ್ನೇಹ ಚಿದಾನಂದ, ಶ್ರೀಕೃಷ್ಣ ಭಟ್ ಕುಳುರು, ಶ್ರೀಕೃಷ್ಣ ಭಟ್, ಅತಿಥಿಗಳನ್ನು ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ ವಂದಿಸಿದರು.