ಸಂಸ್ಕಾರಯುತ ಜೀವನ ನಡೆಸಿದಾಗ ನಮ್ಮ ಬದುಕು ಸಾರ್ಥಕ-ಪೇರೋಡ್ ಅಝ್ಹರಿ
ಓಲೆಮುಂಡೋವು ದರ್ಗಾ ಪವಾಡಗಳ ಕೇಂದ್ರ-ಸಯ್ಯದಲವಿ ತಂಙಳ್
ಪುತ್ತೂರು: ಇತಿಹಾಸ ಪ್ರಸಿದ್ಧ ಓಲೆಮುಂಡೋವು ದರ್ಗಾ ಶರೀಫ್ ಉರೂಸ್ ಪ್ರಯುಕ್ತ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಫೆ.22ರಂದು ಉದ್ಘಾಟನೆಗೊಂಡಿತು. ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್ ಅಧ್ಯಕ್ಷತೆ ವಹಿಸಿದ್ದರು.
ಓಲೆಮುಂಡೋವು ದರ್ಗಾ ಪವಾಡಗಳ ಕೇಂದ್ರ:
ಉದ್ಘಾಟಿಸಿದ ಮಜ್ಲಿಸುನ್ನೂರ್ ಕರ್ನಾಟಕ ಇದರ ಚೀಫ್ ಅಮೀರ್ ಆಗಿರುವ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಮಾತನಾಡಿ ಓಲೆಮುಂಡೋವು ಮಖಾಂ ಪವಾಡಗಳ ಕೇಂದ್ರವಾಗಿದ್ದು ಅನೇಕ ಸಮಸ್ಯೆಗಳಿಗೆ ಪರಿಹಾರ ಕೇಂದ್ರವೂ ಆಗಿದೆ, ಇಲ್ಲಿನ ಸಹೋದರ ಧರ್ಮದವರು ಕೂಡಾ ತಮ್ಮ ಜಾಗವನ್ನು ಇಲ್ಲಿಗೆ ಬಿಟ್ಟು ಕೊಟ್ಟಿದ್ದಾರೆ, ಹಾಗಾಗಿ ಓಲೆಮುಂಡೋವು ದರ್ಗಾದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು. ಹಲವಾರು ಮಂದಿ ಇಲ್ಲಿಗೆ ಬಂದು ಪ್ರಾರ್ಥಿಸಿ, ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಪ್ರಾರ್ಥಿಸಿ ಪರಿಹಾರ ಕಂಡುಕೊಂಡ ಉದಾಹರಣೆಯಿದೆ ಎಂದ ತಂಙಳ್ ಅವರು ಅಲ್ಲಾಹನ ಔಲಿಯಾಗಳ ದರ್ಗಾ ಸಂದರ್ಶನ ಮಾಡುವುದು, ಅವರ ಸನ್ನಿಧಿಯಲ್ಲಿ ಪ್ರಾರ್ಥಿಸುವುದು ಪುಣ್ಯವೇರಿದ ಕಾರ್ಯವಾಗಿದೆ ಎಂದು ಹೇಳಿದರು.
ಸಂಸ್ಕಾರಯುತ ಜೀವನ ನಡೆಸಿದಾಗ ನಮ್ಮ ಬದುಕು ಸಾರ್ಥಕ-ಪೇರೋಡ್ ಅಝ್ಹರಿ
ಮುಖ್ಯ ಪ್ರಭಾಷಣ ನಡೆಸಿದ ಪೇರೋಡ್ ಬಶೀರ್ ಅಝ್ಹರಿಯವರು ನಮ್ಮ ಜೀವನ ಕ್ಷಣಿಕವಾಗಿದ್ದು ಅದನ್ನು ಸಂಸ್ಕಾರದಿಂದ, ಸಂತೋಷದಿಂದ ಮುನ್ನಡೆಸಿದಾಗ ನಾವು ಈ ಭೂಮಿಯಲ್ಲಿ ಬದುಕಿರುವುದು ಸಾರ್ಥಕವಾಗಲಿದೆ, ಇಸ್ಲಾಂ ಆಜ್ಞಾಪಿಸಿದ ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸ್ವರ್ಗ ಸಂಪಾದಿಸಬಹುದು ಎಂದು ಅವರು ಹೇಳಿದರು.
ನಮ್ಮ ಜೀವನ ಹೇಗಿರಬೇಕು, ಮಕ್ಕಳ ಪರಿಪಾಲನೆ ಯಾವ ರೀತಿಯಲ್ಲಿರಬೇಕು, ತಂದೆ ತಾಯಿಯ ಮೇಲೆ ನಮ್ಮ ಬಾಧ್ಯತೆಯೇನು, ಕುಟುಂಬ ಸಂಬಂಧ ಹೇಗಿರಬೇಕು, ಮನೆಯಲ್ಲಿ ನಮ್ಮ ಜೀವನ ಶೈಲಿ ಯಾವ ರೀತಿಯಲ್ಲಿರಬೇಕು ಎಂಬಿತ್ಯಾದಿ ಎಲ್ಲ ವಿಚಾರಗಳನ್ನು ಇಸ್ಲಾಂ ನಮಗೆ ಕಲಿಸಿಕೊಟ್ಟಿದ್ದು ಅದನ್ನು ಜೀವನದಲ್ಲಿ ಸರಿಯಾಗಿ ರೂಢಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗಲಿದೆ, ನಮ್ಮ ಪೂರ್ವಿಕರಾದ ಪಂಡಿತ ಮಹಾನುಭಾವರು ಅಲ್ಲಾಹು ಇಷ್ಟಪಡುವ ಕ್ಷೇತ್ರದಲ್ಲಿ ಮಾತ್ರ ತಮ್ಮ ಜೀವನವನ್ನು ವ್ಯಯಿಸಿದ್ದರು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಹಾಜಿ ಮೇರ್ಲ, ಕೂಡುರಸ್ತೆ ಮಸೀದಿಯ ಅಧ್ಯಕ್ಷ ಅಬ್ದುಲ್ ಮಜೀದ್ ಬಾಳಾಯ, ಪ್ರ.ಕಾರ್ಯದರ್ಶಿ ಹನೀಫ್ ಕೂಡುರಸ್ತೆ, ಅಬೂಬಕ್ಕರ್ ದಾರಿಮಿ, ಪಾಪೆತ್ತಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಳ್ಳಿ, ಉದ್ಯಮಿ ಇಸ್ಮಾಯಿಲ್ ದರ್ಬೆ, ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಬ್ಬಾಸ್ ಸೊರಕೆ, ಅಬೂಬಕ್ಕರ್ ಮೇಸ್ತ್ರಿ, ಇಬ್ರಾಹಿಂ ಬಲ್ಕಾಡ್, ಅಬ್ದುಲ್ಲ ಸೊರಕೆ, ಶೇಖಬ್ಬ ಅಂಙತ್ತಡ್ಕ, ಇಬ್ರಾಹಿಂ ಕಟ್ಟಜೀರ್, ಉರೂಸ್ ಕಮಿಟಿಯ ಪ್ರ.ಕಾರ್ಯದರ್ಶಿ ಹಂಝ ಎಲಿಯ ಉಪಸ್ಥಿತರಿದ್ದರು. ಓಲೆಮುಂಡೋವು ಮಸೀದಿಯ ಸಹ ಖತೀಬ್ ಹಸನ್ ಬಾಖವಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.