ಕರ್ನಾಟಕದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಫಿಲೋಮಿನಾ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಅನಿಲ್ ಸಿಕ್ವೇರಾ

0

ಪುತ್ತೂರು: ಕರ್ನಾಟಕದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಅನಿಲ್ ಜಾನ್ ಸಿಕ್ವೇರಾರವರು ನೇಮಕಗೊಂಡಿದ್ದಾರೆ. ತನ್ನ 25ನೇ ವಯಸ್ಸಿನಲ್ಲಿಯೇ ಅಪ್ರತಿಮ ಸಾಧನೆಯನ್ನು ಅನಿಲ್ ಸಿಕ್ವೇರಾರವರು ಮೆರೆದಿದ್ದಾರೆ.


ಬಂಟ್ವಾಳ ತಾಲೂಕಿನ ಬರಿಮಾರು ಮೂಲದ ಅನಿಲ್ ಸಿಕ್ವೇರಾರವರು 2023ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಆ ಮೂಲಕ ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್.ಎಲ್.ಬಿ ಶಿಕ್ಷಣವನ್ನು ಪೂರೈಸಿದ್ದ ಅನಿಲ್ ಸಿಕ್ವೇರಾರವರು ಕಾಲೇಜು ದಿನಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬರಿಮಾರು ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದರು.


ಕಾನೂನು ಪದವಿಯ ಬಳಿಕ ಮಂಗಳೂರಿನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರಾಗಿ ಪ್ರ್ಯಾಕ್ಟೀಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿ’ಸೋಜ ಮತ್ತು ನವೀನ್ ಪಾಯಿಸ್ ಜೊತೆಗೆ ವೃತ್ತಿ ನಡೆಸುತ್ತಿದ್ದರು. ಕಾಲೇಜು ದಿನಗಳಲ್ಲಿಯೇ ನಾಯಕತ್ವ ಬೆಳೆಸಿಕೊಂಡಿದ್ದ ಅನಿಲ್ ಸಿಕ್ವೇರಾರವರು 2022ರಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಇಂಡಿಯನ್ ಯೂತ್ ಮೂವ್ ಮೆಂಟ್ ಸಂಘಟನೆ(ಐಸಿವೈಎಂ)ಯ ಅಧ್ಯಕ್ಷರಾಗಿದ್ದರು. ಅನಿಲ್ ಸಿಕ್ವೇರಾರವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಇಂಟರ್ ವ್ಯೂ ಪಾಸ್ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

LEAVE A REPLY

Please enter your comment!
Please enter your name here