*ಭಜನಾ ಮಂದಿರದ ಪಾವಿತ್ರತೆ ಎಲ್ಲರಿಗೂ ದೊರಕಲಿ: ಸುರೇಶ್ ಪುತ್ತೂರಾಯ
*ನಿಸ್ವಾರ್ಥ ಸೇವೆಯ ಫಲವಾಗಿ ಸುಂದರ ಭಜನಾ ಮಂದಿರ ನಿರ್ಮಾಣ ಸಾಧ್ಯವಾಗಿದೆ: ಸುಧಾಕರ ಶೆಟ್ಟಿ ಬೀಡಿನಮಜಲು
ವಿಟ್ಲ: ಈಗಾಗಲೇ ಆಮಂತ್ರಣ ಪತ್ರ ಬಿಡುಗಡೆಗೊಂಡಿದೆ. ಇನ್ನುಳಿದಿರುವುದು ಬೆರಳೆಣಿಕೆಯ ದಿನಗಳು ಮಾತ್ರ. ಕಾರ್ಯಕ್ರಮ ಯಶಸ್ಸಾಗಲಿ. ಅತ್ಯಲ್ಪ ಸಮಯದಲ್ಲಿ ಭಜನಾ ಮಂದಿರದ ನಿರ್ಮಾಣವಾಗಿರುವುದು ತುಂಬಾ ಸಂತಸದ ವಿಚಾರ. ಎಲ್ಲರಿಗೂ ಇದರ ಪಾವಿತ್ರತೆ ದೊರಕಲಿ ಎಂದು ಪುತ್ತೂರಿನ ಖ್ಯಾತ ವೈದ್ಯರಾದ ಸುರೇಶ್ ಪುತ್ತೂರಾಯರವರು ಹೇಳಿದರು.
ಅವರು ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಮಾ.23 ಹಾಗೂ ಮಾ.24ರಂದು ನಡೆಯಲಿರುವ ನೂತನ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಮಹಾ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇಡ್ಕಿದು ಸೇವಾಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನ ಮಜಲು ರವರು ಮಾತನಾಡಿ ಶ್ರದ್ದಾ ಭಕ್ತಿಯ ಭಜಕರ ಸಹಕಾರದಿಂದ ಹಾಗೂ ಎಲ್ಲರ ನಿಸ್ವಾರ್ಥ ಸೇವೆಯ ಫಲವಾಗಿ ಇಷ್ಟೊಂದು ಸುಂದರ ಭಜನಾ ಮಂದಿರ ನಿರ್ಮಾಣ ಸಾಧ್ಯವಾಗಿದೆ. ಇದಕ್ಕೆ ಪೂರಕ ಕೆಲಸಗಳು ಎಲ್ಲರ ಸಹಕಾರದಲ್ಲಿ ನಡೆದು. ಎಲ್ಲರೂ ನೆನಪಿಡುವ ಕಾರ್ಯಕ್ರಮ ನಮ್ಮದಾಗಬೇಕು ಎಂದರು.
ಭಜನಾ ಮಂದಿರದ ಗೌರವ ಸಲಹೆಗಾರರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೌರವಾಧ್ಯಕ್ಷರಾದ ಸೋಮಶೇಖರ ಶೆಟ್ಟಿ ಅಳಕೆಮಜಲು, ಅಧ್ಯಕ್ಷರಾದ ಜಗದೀಶ ಪೂಜಾರಿ ರಾಮಗುಡ್ಡೆ, ಅಳಕೆಮಜಲು, ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ ಅಳಕೆಮಜಲು, ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಗಂಧಿನಿ ಪೆಲತ್ತಿಂಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾದ ಉದಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಕೋಶಾಧಿಕಾರಿ ಸುಧೀರ್ ಕುಮಾರ್ ನಾಯ್ಕ ಕೆಮನಾಜೆ ಸ್ವಾಗತಿಸಿದರು. ಭಜನಾ ಮಂಡಳಿಯ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾದ ಚಿದಾನಂದ ಪೆಲತ್ತಿಂಜ ವಂದಿಸಿದರು.