ಪುತ್ತೂರು: ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರುಗೊಂಡು ಇನ್ನೂ ಕೂಡ ಮನೆ ಕಾಮಗಾರಿ ಆರಂಭಿಸದೇ ಇರುವ ಫಲಾನುಭವಿಗಳಿಗೆ ನೋಟೀಸ್ ನೀಡುವುದು, ಶೀಘ್ರವೇ ಮನೆ ಕಾಮಗಾರಿ ಆರಂಭಿಸುವಂತೆ ತಿಳಿಸುವುದು ಎಂದು ಕೆಯ್ಯೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಫೆ.22ರಂದು ಗ್ರಾಪಂ ಕಛೇರಿ ಮೀಟಿಂಗ್ ಹಾಲ್‌ನಲ್ಲಿ ನಡೆಯಿತು.
ಕೆಯ್ಯೂರು ಗ್ರಾ.ಪಂ.ಗೆ 2021-22ನೇ ಸಾಲಿನಲ್ಲಿ ಸರಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ 32 ಮನೆಗಳು ಮಂಜೂರುಗೊಂಡಿದ್ದು ಇದರಲ್ಲಿ ಬಹುತೇಕ ಫಲಾನುಭವಿಗಳು ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರೂ 5 ಮಂದಿ ಫಲಾನುಭವಿಗಳು ಇನ್ನೂ ಕೂಡ ಮನೆ ಕಾಮಗಾರಿ ಆರಂಭಿಸದೇ ಇರುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆರವರು ಮನೆ ಕಾಮಗಾರಿ ಆರಂಭಿಸದೇ ಇರುವ ಫಲಾನುಭವಿಗಳಿಗೆ ನೋಟೀಸ್ ನೀಡಿದ್ದು ಅಲ್ಲದೆ ಮೌಖಿಕವಾಗಿ ಹೇಳಿಯೂ ಆಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಂತ ಪೂಜಾರಿ ಕೆಂಗುಡೇಲುರವರು, ನಾವು ಮನೆ ಕಟ್ಟುವವರಿಗೆ ಮಾತ್ರ ಕೊಡುವ, ಇನ್ನೂ ಕೂಡ ಮನೆ ಬೇಕಾದವರು ನಮ್ಮ ಗ್ರಾಮದಲ್ಲಿದ್ದಾರೆ. ಮನೆ ಬೇಕು ಎಂದು ಹೇಳಿಕೊಂಡು ಕೊನೆಗೆ ಮನೆ ಕಾಮಗಾರಿ ಆರಂಭಿಸದೇ ಇರುವವರಿಗೆ ಮನೆ ಮಂಜೂರು ಮಾಡುವುದು ಬೇಡ, ಇನ್ನೊಮ್ಮೆ ಅವರಿಗೆ ನೋಟೀಸ್ ನೀಡುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಕೆಯ್ಯೂರು ಗ್ರಾಪಂಗೆ ಪ್ರಧಾನ ಮಂತ್ರಿಆಚಾಜ್ ಯೋಜನೆ, ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಡಿ ಒಟ್ಟು 32 ಮನೆಗಳು ಮಂಜೂರುಗೊಂಡಿವೆ.
ನೀರಿನ ದುರ್ಬಳಕೆ ಕಂಡುಬಂದರೆ ಮಾಹಿತಿ ಕೊಡಿ
ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥಿತ ಸರಬರಾಜಿಗೆ ಗ್ರಾಪಂ ಎಲ್ಲಾ ವಿಧದಲ್ಲೂ ಪ್ರಯತ್ನ ಮಾಡುತ್ತಿದೆ. ಕೆಲವೊಂದು ಕಾಲನಿಗಳಿಂದ ನಮಗೆ ನೀರು ಬರುತ್ತಿಲ್ಲ ಎಂಬ ದೂರು ಬಂದಿದ್ದು ದೂರು ಬಂದ ಕಾಲನಿಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದ್ದಾಗ ಕೆಲವು ಮಂದಿ ಪಂಚಾಯತ್ ನೀರಿನ ದುರ್ಬಳಕೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಒಂದಕ್ಕಿಂತ ಹೆಚ್ಚು ನಳ್ಳಿ ಸಂಪರ್ಕ ಇಟ್ಟುಕೊಂಡಿರುವುದು, ತೋಟ, ಬಾವಿ ಇತ್ಯಾದಿಗಳಿಗೆ ನೀರು ಬಿಡುತ್ತಿರುವುದು ಇತ್ಯಾದಿ ಅಕ್ರಮಗಳು ಕಂಡುಬಂದಿದ್ದು ಇಂತಹ ಪ್ರಕರಣಗಳಲ್ಲಿ ನೀರಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತ ಮಾಡುವ ಕ್ರಮ ಕೈಗೊಂಡಿದ್ದೇವೆ ಎಂದ ಪಿಡಿಒ ನಮಿತಾ.ಎ.ಕೆರವರು, ಗ್ರಾಮದಲ್ಲಿ ಪಂಚಾಯತ್‌ನ ಕುಡಿಯುವ ನೀರನ್ನು ಯಾರಾದರೂ ತೋಟಗಳಿಗೆ ಬಿಡುವುದು ಅಥವಾ ಪೋಲು ಮಾಡುತ್ತಿರುವುದು ಕಂಡುಬಂದರೆ ನೇರವಾಗಿ ಪಂಚಾಯತ್‌ಗೆ ತಿಳಿಸುವಂತೆ ಕೇಳಿಕೊಂಡರು. ಗ್ರಾಮಸ್ಥರು ಮಾಹಿತಿ ಕೊಡದೇ ಹೋದರೆ ನಮಗೆ ಗೊತ್ತಾಗುವುದಿಲ್ಲ ಎಂದ ಅವರು, ಕುಡಿಯುವ ನೀರನ್ನು ಯಾರೂ ಕೂಡ ದುರ್ಬಳಕೆ ಮಾಡಬಾರದು ಎಂದು ಕೇಳಿಕೊಂಡರು.
ಸೋಲಾರ್ ಲೈಟ್‌ಗಳು ಉರಿಯುತ್ತಿಲ್ಲ
ಗ್ರಾಮದ ಹಲವು ಕಡೆಗಳಲ್ಲಿ ಹಾಕಿರುವ ಸೋಲಾರ್ ದಾರಿದೀಪಗಳು ಉರಿಯುತ್ತಿಲ್ಲ ಎಂಬ ವಿಚಾರವನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಕೆಲವೊಂದು ಸೋಲಾರ್ ಲೈಟ್‌ಗಳನ್ನು ದುರಸ್ತಿ ಮಾಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯರು ಸೋಲಾರ್ ಲೈಟ್‌ಗಳು ಹೆಚ್ಚು ವರ್ಷ ಬಾಳ್ವಿಕೆ ಬರುವುದಿಲ್ಲ ಇದರ ದುರಸ್ತಿ ಖರ್ಚು ಕೂಡ ವಿಪರೀತ. ಲೈಟ್ ಅಳವಡಿಸಿದ ಒಂದೇ ವರ್ಷದಲ್ಲಿ ಹಾಳಾಗುತ್ತವೆ. ಆದ್ದರಿಂದ ಸೋಲಾರ್ ದಾರಿದೀಪಗಳನ್ನು ಹಾಕದೇ ಇರುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸರಕಾರದ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ತಾರಾನಾಥ ಕಂಪ, ಶೇಷಪ್ಪ ದೇರ್ಲ, ಅಮಿತಾ ಎಚ್.ರೈ, ನೆಬಿಸಾ, ಸುಭಾಷಿಣಿ, ಮಮತಾ ರೈ, ಗಿರಿಜಾ ಕಣಿಯಾರು, ಜಯಂತಿ ಎಸ್.ಭಂಡಾರಿ ಉಪಸ್ಥಿತರಿದ್ದರು.
ಚರ್ಚೆಗಳಿಲ್ಲದೆ ಮುಗಿದ ಸಭೆ
ಕೆಯ್ಯೂರು ಗ್ರಾಪಂ ಆರಂಭವಾದಗಿನಿಂದಲೇ ತನ್ನ ವಿಶೇಷತೆಗಳಿಂದ ಗುರುತಿಸಿಕೊಂಡಿದೆ. ರಾಜಕೀಯ ರಹಿತ ಆಡಳಿತ, ಸದಸ್ಯರೊಳಗಿನ ಬಾಂಧವ್ಯ, ಅಭಿವೃದ್ಧಿ ಪರ ಚಿಂತನೆ ಇತ್ಯಾದಿಗಳಿಂದ ಗಮನ ಸೆಳೆದಿದೆ. ಫೆ.22ರಂದು ನಡೆದ ಸಾಮಾನ್ಯ ಸಭೆಯು ಯಾವುದೇ ಚರ್ಚೆಗಳಿಲ್ಲದೆ ಮುಗಿಯಿತು.