ಒಡ್ಯಮೆ ಕೂವೆಮಠ: ಪುನರ್‌ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ-ಧಾರ್ಮಿಕ ಸಭೆ – ನರಸಿಂಹ ದೇವರ ಆರಾಧನೆಯಿಂದ ಎಲ್ಲಾ ಗ್ರಹಾಚಾರಗಳಿಗೂ ಪರಿಹಾರ: ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ

0

ನೆಲ್ಯಾಡಿ: ದಶಾವತಾರದಲ್ಲಿ ನರಸಿಂಹ ದೇವರ ಅವತಾರವೂ ಒಂದು. ನರಸಿಂಹ ದೇವರ ಆರಾಧನೆಯಿಂದ ಎಲ್ಲಾ ಗ್ರಹಚಾರಗಳಿಗೂ ಪರಿಹಾರ ಸಿಗಲಿದೆ. ಅಂತಹ ಅದ್ಭುತ ಶಕ್ತಿ ನರಸಿಂಹ ದೇವರಿಗೆ ಇದೆ ಎಂದು ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ನುಡಿದರು.
ಅವರು ಬಜತ್ತೂರು ಗ್ರಾಮದ ಒಡ್ಯಮೆ ಸಮೀಪದ ಕೂವೆಮಠ(ಶಿವತ್ತಮಠ)ದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನರಸಿಂಹ ಮಠದಲ್ಲಿ ಫೆ.26ರಂದು ನಡೆದ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದಲ್ಲಿ ಭಾಗವಹಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನರಸಿಂಹ ದೇವರ ಆರಾಧನೆಯಿಂದ ಊರಿಗೆ ಬರುವ ಶಾಪಗಳಿಗೂ ಮುಕ್ತಿ ಸಿಗಲಿದೆ. ಕೂವೆಮಠವು ಉಗ್ರನರಸಿಂಹ ದೇವರ ಸನ್ನಿಧಾನ ಆಗಿದೆ. ಈ ಕ್ಷೇತ್ರದ ಜೀರ್ಣೋದ್ದಾರಕ್ಕೆ ಊರು, ಪರವೂರಿನ ಸಾವಿರಾರು ಮಂದಿ ಶ್ರಮದಾನ ಮಾಡಿದ್ದಾರೆ. ಉದಾರ ದೇಣಿಗೆಯನ್ನೂ ನೀಡಿದ್ದಾರೆ. ದಾನಿಗಳ ಸಹಕಾರವೂ ಸಿಕ್ಕಿದೆ. ಇದರ ಫಲವಾಗಿಯೇ ಸುಂದರ ದೇವಾಲಯ ನಿರ್ಮಾಣಗೊಂಡು ದೇವರ ಪ್ರತಿಷ್ಠೆಯೂ ಆಗಿದೆ. ಊರಿನ, ಕುಟುಂಬದವರ ಸಂಕಷ್ಟಗಳೂ ನಿವಾರಣೆಯಾಗಲಿದೆ. ಮುಂದೆ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಆರಾಧನೆಯನ್ನು ನಿಷ್ಠೆಯಿಂದ ಮುಂದುವರಿಸುವಂತೆ ಹೇಳಿದರು.
ದೈವಜ್ಞರಾದ ಮಾಧವ ಆಚಾರ್ಯ ಇಜ್ಜಾವು, ಉಪ್ಪಿನಂಗಡಿ ರಾಜ್ ಬೋರ್‌ವೆಲ್ಸ್‌ನ ಮಾಲಕ ಕೃಷ್ಣರಾಜ್, ಉದ್ಯಮಿ ಕರುಣಾಕರ ರೈ ದೇರ್ಲ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ದಿವಾಕರ ರೈ, ವೇಣುಗೋಪಾಲ ನಾಯಕ್ ಕುಳ್ಳಾಜೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ವಿಜಯ ಎಂ.ಶೆಟ್ಟಿ ಒಡ್ಯಮೆ, ಶಿವತ್ತಮಠ ಮನೆಯ ಹಿರಿಯರಾದ ರುಕ್ಮಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ಭಕ್ತರಿಗೆ ಸ್ವಾಮೀಜಿ ಶಾಲು ಹಾಕಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಪದ್ಮಯ್ಯ ಗೌಡ ಡೆಂಬಲೆ, ಪೂವಪ್ಪ ಗೌಡ ಡೆಂಬಲೆ, ದಿನೇಶ್ ಅರಾಮ, ಅಶೋಕ ಪೂಜಾರಿ ಡೆಂಬಲೆ, ಸುಜಾತ ಮೇಲೂರು, ಅಕ್ಷತಾ ಕೊಳೆಮಾನ್, ಇಂದಿರಾ ಅವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು ಸ್ವಾಗತಿಸಿ ಮಾತನಾಡಿ, ಶಿವತ್ತಮಠದಲ್ಲಿ ಮಣ್ಣಿನೊಳಗೆ, ಬಾವಿಯೊಳಗೆ ದೇವರು ಉಸಿರುಗಟ್ಟಿದ ಸ್ಥಿತಿಯಲ್ಲಿದ್ದ ವಾತಾವರಣ ತಿಳಿಗೊಳಿಸಿ ಸುಂದರ ದೇವಾಲಯದಲ್ಲಿ ಪುನರ್‌ಪ್ರತಿಷ್ಠೆ ಮಾಡಿದ ತೃಪ್ತಿ ಊರಿನವರಿಗೆ ದೊರೆತಿದೆ ಎಂದರು. ವೀರೇಂದ್ರ ಪಾಲೆತ್ತಡ್ಡ ವಂದಿಸಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಚರಣ್ ಡೆಂಬಲೆ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here