ಒಡ್ಯಮೆ ಕೂವೆಮಠ: ಸಪರಿವಾರ ಶ್ರೀ ನರಸಿಂಹ ದೇವರ, ನಾಗದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಸಮೀಪದ ಕೂವೆಮಠ(ಶಿವತ್ತಮಠ)ದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನರಸಿಂಹ ಮಠದಲ್ಲಿ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಫೆ.26ರಂದು ನಡೆಯಿತು.
ನೂತನವಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ಫೆ.23ರಿಂದ ತಂತ್ರಿವರ್ಯರಾದ ಶ್ರೀ ಭಾರತೀ ರಮಣಾಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ಆಚಾರ್ಯವರೇಣ್ಯ ನಾರಾಯಣ ಬಡೆಕಿಲ್ಲಾಯ ನಡ್ಪ ಇವರ ಹಿರಿತನದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆದು ಫೆ.26ರಂದು ಬೆಳಿಗ್ಗೆ ಪುಣ್ಯಾಹವಾಚನ, ನಾಗಸಾನಿಧ್ಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ಪ್ರಸನ್ನ ಪೂಜೆ, ಶ್ರೀ ನರಸಿಂಹ ದೇವರ ಸಾನಿಧ್ಯದಲ್ಲಿ ಅಷ್ಟ ಮಹಾಮಂತ್ರ, ತತ್ತ್ವ, ಪ್ರತಿಷ್ಠಾ ಪ್ರಧಾನ ಹೋಮ, 101 ಕಲಶಾರಾಧನೆ ನಡೆಯಿತು. ಬೆಳಿಗ್ಗೆ 11.45ರ ಸಿಂಹ ಲಗ್ನ ಸುಮುಹೂರ್ತದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಶ್ರೀ ನರಸಿಂಹ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ರಕ್ತೇಶ್ವರಿ ಪ್ರತಿಷ್ಠೆ ನಡೆಯಿತು. ಬಳಿಕ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಕ್ಷೇತ್ರ ವಿಧಿ ನಿರ್ಣಯ, ಯತಿ ಭಿಕ್ಷೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್, ಕಾರ್ಯಾಧ್ಯಕ್ಷರಾದ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರ ವರ್ಮ ಮೇಲೂರು, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿಗಳಾದ ಮಹೇಶ ಪಾತೃಮಾಡಿ, ಆನಂದ ಮೇಲೂರು, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು, ಸದಸ್ಯರಾದ ಅಣ್ಣು ಗೌಡ ಶಿವತ್ತಮಠ, ವೀರೇಂದ್ರ ಜೈನ್ ಮೇಲೂರು, ಶಾಂತಪ್ಪ ಗೌಡ ಮೇಲೂರು, ಜನಾರ್ದನ ಕದ್ರ, ಪ್ರಶಾಂತ್ ಆರ್.ಕೆ.ರಾಮಕುಂಜ, ಶೇಖರ ಗೌಡ ಕಟ್ಟಪುಣಿ, ರಮೇಶ್ ರೈ ರಾಮಾಜಾಲು, ನಾರಾಯಣ ಶೆಟ್ಟಿ ಮೇಲೂರು, ಶಿವಣ್ಣ ಗೌಡ, ಪದ್ಮಯ್ಯ ಗೌಡ ಡೆಂಬಲೆ, ರಾಜೇಶ್ ಗೌಡ ಶಿವತ್ತಮಠ, ಲೋಕೇಶ್ ಗೌಡ ಬಜತ್ತೂರುಗುತ್ತು, ಓಬಯ್ಯ ಪರವ ಮೇಲೂರು, ಸುರೇಶ್ ಬಿದಿರಾಡಿ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಭಜನೆ:
ಬೆಳಿಗ್ಗೆ ನಡೆದ ಭಜನಾ ಕಾರ್ಯಕ್ರಮವನ್ನು ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲ ದಡ್ಡು ಉದ್ಘಾಟಿಸಿದರು. ಬಳಿಕ ಶ್ರೀರಾಮ ಭಜನಾ ಮಂಡಳಿ ಅಯೋಧ್ಯಾನಗರ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಶಾಂತಿನಗರ, ಶ್ರೀಗುರು ಸಾರ್ವಭೌಮ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಉತ್ಖನನ ವೇಳೆ ಪತ್ತೆಯಾಗಿದ್ದ ವಿಗ್ರಹ:
ಶಿವತ್ತಮಠದ ರುಕ್ಮಣಿ ಎಂಬವರ ಸಂಸಾರಕ್ಕೆ ಒದಗಿದ ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಶ್ನೆ ಚಿಂತನೆ ನಡೆಸಿದಾಗ ನಾಗದೋಷ ಕಂಡುಬಂದು ಸಮೀಪದ ಬನವನ್ನು ಶೋಧಿಸಿದಾಗ ಸರ್ಪಗಾವಲು ಇದ್ದ 11 ನಾಗನ ಕಲ್ಲುಗಳು ಗೋಚರಾಗಿದ್ದವು. ಮರಳಿ ಪ್ರಶ್ನೆ ಇಟ್ಟಾಗ ದೇಗುಲದ ಅಸ್ತಿತ್ವದ ಉತ್ತರ ಬಂತು. ಅದರಂತೆ ಕಾಡು ಬೆಳೆದಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಶ್ರೀ ನರಸಿಂಹ, ಶ್ರೀ ಮಹಾಗಣಪತಿ, ಲಕ್ಷ್ಮೀ ನರಸಿಂಹ, ಬಾಲಕೃಷ್ಣ, ಆಂಜನೇಯ, ಗರುಡ ಮುಂತಾದ ದೇವರ ವಿಗ್ರಹ ಹಾಗೂ ಶ್ರೀ ರಕ್ತೇಶ್ವರಿಯ ಅಷ್ಟದಳ ಪದ್ಮಶಿಲೆಯೂ ತೀರ್ಥಬಾವಿಯೂ ಸಾಲಿಗ್ರಾಮ, ಶಂಖ, ದೀಪ, ಘಂಟಾಮಣಿ, ಆರತಿ, ಉದ್ದರಣೆ ಮುಂತಾದ ಪೂಜಾ ಸಾಮಾಗ್ರಿಗಳು ಪತ್ತೆಯಾಗಿತ್ತು. ಬಳಿಕ ಸುಬ್ರಹ್ಮಣ್ಯ ಶ್ರೀಗಳ ಮಾರ್ಗದರ್ಶನದಂತೆ ಟ್ರಸ್ಟ್ ರಚಿಸಿ ಕ್ಷೇತ್ರವನ್ನು ಜೀರ್ಣೋದ್ದಾರಗೊಳಿಸುವ ಸಂಕಲ್ಪ ಮಾಡಿ 7-10-2021ರಂದು ಉತ್ಖನನ ವೇಳೆ ಪತ್ತೆಯಾಗಿದ್ದ ವಿಗ್ರಹಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ನೂತನ ಗರ್ಭಗುಡಿ ರಚನೆಗೆ 17-2-2022ರಂದು ಶಿಲಾನ್ಯಾಸ ಮಾಡಲಾಗಿತ್ತು. ಇದೀಗ ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ದಾರ ಕೆಲಸಗಳು ನಡೆದಿದ್ದು ನೂತನ ದೇವಸ್ಥಾನದಲ್ಲಿ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪ್ರತಿಷ್ಠೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here