ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

0

ನಿರಂತರ ಅಭ್ಯಾಸದಿಂದ ಅಸಮಾನ್ಯ ಸಾಧನೆ: ಡಾ.ಎಚ್.ಮಾಧವ ಭಟ್
ಪುತ್ತೂರು: ನಿರಂತರ ಅಭ್ಯಾಸದಿಂದ ಸಾಮಾನ್ಯ ಮನುಷ್ಯನೂ ಕೂಡ ಅಸಾಮಾನ್ಯ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿದಲ್ಲಿ ಸಾಧನೆಯ ಶಿಖರವನ್ನು ಏರಬಹುದು. ಕಾಲೇಜಿನಲ್ಲಿ ನಿರಂತರವಾಗಿ ಲಭಿಸಿದ ಪ್ರೇರಣಾತ್ಮಕ ವಿಚಾರಗಳು ಹಾಗು ಗುಣಾತ್ಮಕ ಶಿಕ್ಷಣವನ್ನು ಭವಿಷ್ಯತ್ತಿನಲ್ಲಿ ಬಳಕೆ ಮಾಡಿಕೊಳ್ಳಬೇಕು. ಭವಿಷ್ಯದ ಬಗ್ಗೆ ಗುರಿಯನ್ನು ಇಟ್ಟುಕೊಂಡು ತಮ್ಮ ಜೀವನದಲ್ಲಿ ಅಭಿವೃದ್ಧಿ ಸಾಧಿಸಲು ಯೋಚನೆ ಹಾಗೂ ಯೋಜನೆ ರೂಪಿಸಿಕೊಂಡು ಅದನ್ನು ಕಾರ್ಯಗತ ಮಾಡಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಮತ್ತು ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆ ವತಿಯಿಂದ ಬಪ್ಪಳಿಗೆಯ ಶಂಕರಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ಅಂಕಗಳಿಸುವುದು ಮಾತ್ರ ಶಿಕ್ಷಣವಲ್ಲ, ಸಂಸ್ಕಾರವಂತರಾಗುವುದು ನಿಜವಾದ ಶಿಕ್ಷಣ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಹೊಂದಿದಾಗ ಭವ್ಯ ಸಮಾಜದ ನಿರ್ಮಾಣ ಸಾಧ್ಯ. ಆಂತರ್ಯದ ಶುದ್ಧತೆಯಿಂದ ಶಾಶ್ವತ ನೆಮ್ಮದಿ ಸಿಗುತ್ತದೆ, ಬೇರೆಯವರ ನೋವಿಗೆ ಸ್ಪಂದಿಸುವ ಮನೋಭಾವನೆ ಮೂಡುವುದು ಅವಶ್ಯ ಎಂದು ಕಿವಿ ಮಾತು ಹೇಳಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಯೋಗಕ್ಕೂ ಪ್ರಾಮುಖ್ಯತೆ ನೀಡಿದ ಪರಿಣಾಮ ವಿದ್ಯಾರ್ಥಿಗಳು ಜೆಇಇ ಫಲಿತಾಂಶದಲ್ಲೂ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಯಿತು. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ದೇಶಪ್ರೇಮ, ಧರ್ಮಪ್ರೇಮದ ಶಿಕ್ಷಣವನ್ನು ನೀಡಿದಾಗ ಅವರು ಸಮಾಜದ ಸಂಪತ್ತಾಗಿ ಬೆಳೆಯುತ್ತಾರೆ. ಮುಖ್ಯವಾಗಿ ದೇಶ ಸೇವೆಗೆ ಪ್ರತಿ ಕ್ಷಣವೂ ವಿದ್ಯಾರ್ಥಿಗಳು ಸಜ್ಜಾಗುವಂತೆ ಮಾಡುವ ಅಗತ್ಯತೆ ಇದ್ದು, ಪ್ರತಿಯೊಬ್ಬರೂ ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಅವರು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶೃಂಗೇರಿ ಶಾರದೆಯ ಪದಕವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾದ ಬಾಲಕೃಷ್ಣ ಬೋರ್ಕರ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಉಪಸ್ಥಿತರಿದ್ದರು. ಉಪನ್ಯಾಸಕಿ ಸುಕನ್ಯಾ ಪ್ರಾರ್ಥಿಸಿದರು. ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರ ಪ್ರಭು ವಂದಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಎಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here