ವಿಟ್ಲ: ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವತಿಯಿಂದ ತೋಟಗಾರಿಕಾ ಮೇಳ

0

ಪರಂಪರಾಗತ ತಳಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು -ಪದ್ಮಶ್ರೀ ಸತ್ಯನಾರಾಯಣ ಬೆಲೇರಿ


ಪುತ್ತೂರು: ಪ್ರಕೃತಿ ಎಂಬುದು ಹಲವು ಜೀವವೈವಿಧ್ಯಗಳ ಆಗರವಾಗಿದೆ. ಆದರೆ ನಾವು ಅವುಗಳನ್ನು ಹಾಳುಮಾಡುತ್ತಾ ಬಂದಿದ್ದೇವೆ. ಹಿಂದೆ ಇದ್ದಂತಹ ಎಷ್ಟೋ ತಳಿಗಳು ಕಣ್ಮರೆಯಾಗುತ್ತಾ ಬಂದಿವೆ. ಇದಕ್ಕೆ ಮುಖ್ಯ ಕಾರಣ ನಾವು ಅದರ ಬಗ್ಗೆ ಆಸಕ್ತಿ ವಹಿಸದೆ ಇರುವುದಾಗಿದೆ. ನಾವು ಎಷ್ಟೇ ಹೈಬ್ರಿಡ್ ತಳಿಗಳನ್ನು ತಂದರೂ ಅವುಗಳು ಬದಲಾಗುತ್ತಲೇ ಇರುತ್ತದೆ. ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿರುವ ಪರಂಪರಾಗತ ತಳಿಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸತ್ಯನಾರಾಯಣ ಬೆಲೇರಿ ಹೇಳಿದರು.

ಅವರು ಫೆ.28ರಂದು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ ಇದರ ವತಿಯಿಂದ ನಡೆದ ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಭತ್ತದಂತಹ ತಳಿಗಳ ಸಂರಕ್ಷಣೆಗೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ನಾನು ನನ್ನದೇ ಮಾದರಿಯನ್ನನುಸರಿಸಿ ಭತ್ತದ ತಳಿಗಳ ಸಂರಕ್ಷಣೆಯನ್ನು ಮಾಡಿದ್ದೇನೆ. ನನ್ನ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಸಿಗುವಂತಾಗಲು ಬಹಳಷ್ಟು ಹಿತೈಷಿಗಳ ಶ್ರಮವಿದೆ. ಅವರೆಲ್ಲರಿಗೂ ಕೃತಜ್ಞತೆಗಳು ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಸಿಆರ್‌ಐ ಸಂಸ್ಥೆಯ ಮುಖ್ಯಸ್ಥ ಎಂ.ಕೆ ರಾಜೇಶ್‌ರವರು ಮಾತನಾಡಿ, ಇಂದು ಎಲ್ಲೆಡೆ ಅಡಿಕೆ ಬೆಳೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿರುವುದು ನಾವು ಕಾಣಬಹುದಾಗಿದೆ. ಆದರೆ ಅಡಿಕೆ ಬೆಳೆಯೊಂದಿಗೆ ಕೊಕ್ಕೋ, ಕಾಳುಮೆಣಸು, ಲವಂಗ, ಗೇರುಬೀಜಗಳ ಬೆಳೆಗಳ ಬಗ್ಗೆಯೂ ಗಮನಹರಿಸುವ ಅಗತ್ಯತೆ ಇದೆ. ಕೃಷಿ ಸಂಬಂಧಿತ ರೋಗಗಳು ಹಾಗೂ ಇನ್ನಿತರ ಸವಾಲುಗಳ ಬಗ್ಗೆ ನಾವು ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.


ವೇದಿಕೆಯಲ್ಲಿ ಕಾಸರಗೋಡು ಸಿಪಿಸಿಆರ್‌ಐ ನ ಡಾ.ನಿರಲ್, ಕಾರ್ಯಕ್ರಮದ ಸಂಚಾಲಕಿ ವಿಜ್ಞಾನಿ ಎಲೈನ ಅಪ್ಸರಾ ಹಾಗೂ ಹಿರಿಯ ವಿಜ್ಞಾನಿ ಕಾರ್ಯಕ್ರಮದ ಸಂಯೋಜಕರಾದ ಡಾ.ನಾಗರಾಜ್ ಉಪಸ್ಥಿತರಿದ್ದರು. ಸತ್ಯನಾರಾಯಣ ಬೆಲೇರಿಯರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ನಂತರ ನುರಿತ ವಿಜ್ಞಾನಿಗಳಿಂದ ವಿವಿಧ ಬೆಳೆಗಳ ಬಗ್ಗೆ ಉಪನ್ಯಾಸ, ವಿವಿಧ ಪ್ರಾತ್ಯಕ್ಷಿಕೆಗಳು ನಡೆಯಿತು.ವಿವಿಧ ಕೃಷಿಗೆ ಸಂಬಂಧಿಸಿದ ಪ್ರದರ್ಶನಗಳ ೨೦ ಕ್ಕೂ ಹೆಚ್ಚು ಮಳಿಗೆಗಳನ್ನು ಸೇರಿದ್ದ ನೂರಾರು ಸಂಖ್ಯೆಯ ಕೃಷಿಕರು ಸಂದರ್ಶಿಸಿ ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here