ಬೆಂಗಳೂರು: 2017ರಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹನ್ನೊಂದನೆ ಆರೋಪಿಯಾಗಿರುವ ಕೆಮ್ಮಾಯಿ ಮೂಲದ ಮೋಹನ್ ನಾಯಕ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವುದರ ಹಿಂದಿನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಆರೋಪಿಗೆ ನೋಟೀಸ್ ಜಾರಿಗೆ ಆದೇಶಿಸಿದೆ.ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ಚಂದ್ರ ಶರ್ಮ ಅವರಿದ್ದ ದ್ವಿಸದಸ್ಯ ಪೀಠವು, ಈ ವಿಚಾರದಲ್ಲಿ ಆರೋಪಿಯಿಂದ ಪ್ರತಿಕ್ರಿಯೆಯನ್ನು ಕೇಳಿದೆ.ಈ ಹಿಂದೆ ಜನವರಿಯಲ್ಲಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗಲೂ ನ್ಯಾಯಾಲಯ ಆರೋಪಿಗೆ ಇದೇ ರೀತಿ ನೋಟೀಸ್ ಜಾರಿ ಮಾಡಿತ್ತು.ಎರಡೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಏ.9ರಂದು ವಿಚಾರಣೆ ನಡೆಸಲು ನ್ಯಾಯಾಲಯ ಆದೇಶಿಸಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ನಿವಾಸದೆದುರು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗಿತ್ತು.ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ನಾಯಕ್ ಸೇರಿ 18 ಆರೋಪಿಗಳು ಬಂಧನಕ್ಕೊಳಗಾಗಿದ್ದು,1200 ಪುರಾವೆ ಹಾಗೂ 438 ಸಾಕ್ಷ್ಯ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಅಮೋಲ್ ಕಾಳೆ, ಅಮಿತ್ ಬದ್ದಿ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್, ಭರತ್ ಕುರಾಣೆ, ರಾಜೇಶ್ ಡಿ.ಬಂಗೇರ, ಸುಧನ್ವ ಗೊಂದಲೇಕರ್, ಮೋಹನ್ ನಾಯಕ್ ಎನ್, ಸುರೇಶ್ ಎಚ್.ಎಲ್., ಶರದ್ ಬಿ.ಕಲಸ್ಕರ್, ವಾಸುದೇವ್ ಬಿ.ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಯಡವೆ, ಶ್ರೀಕಾಂತ ಜೆ.ಪಗಾರಕರ್, ಕೆ.ಟಿ.ನವೀನ್ ಕುಮಾರ್ ಮತ್ತು ಋಷಿಕೇಶ್ ದೇವಡೇಕರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.ಮೋಹನ್ ನಾಯಕ್ ಹೊರತುಪಡಿಸಿ ಇತರ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.ಮೋಹನ್ ನಾಯಕ್ 2018ರ ಜುಲೈನಲ್ಲಿ ಬಂಽತರಾಗಿದ್ದರು.ಬಂಧಿತರಾಗಿ ಐದು ವರ್ಷಗಳಿಗೂ ಹೆಚ್ಚು ಅವಽಗೆ ಜೈಲಲ್ಲಿದ್ದ ವಿಚಾರ ಮತ್ತು ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕ ಹೈಕೋರ್ಟ್ ಆರೋಪಿ ಮೋಹನ್ ನಾಯಕ್ ಅವರಿಗೆ ಕಳೆದ ದ.7ರಂದು ಜಾಮೀನು ಮಂಜೂರು ಮಾಡಿತ್ತು.ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ಮಂಜೂರುಗೊಳಿಸಿತ್ತು. ಇದರ ಸಿಂಧುತ್ವ ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.