ಯೋಧ ಸುಬೇದಾರ್ ಗುಣಕರ ಕೆ ಅವರಿಗೆ ಸೇವಾ ನಿವೃತ್ತಿ-ಹುಟ್ಟೂರಿನಲ್ಲಿ ಅಭೂತಪೂರ್ವ ಸ್ವಾಗತ

0

ಉಪ್ಪಿನಂಗಡಿ: ಭಾರತೀಯ ಭೂ ಸೇನೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಮಾ.1ರಂದು ಊರಿಗೆ ಆಗಮಿಸಿದ ಹಿರೇಬಂಡಾಡಿಯ ಕೇರ್ನಡ್ಕದ ಯೋಧ ಸುಬೇದಾರ್ ಗುಣಕರ ಕೆ. ಅವರಿಗೆ ಅವರ ಅಭಿಮಾನಿ ಬಳಗ ಹಾಗೂ ಕುಟುಂಬ ವರ್ಗದವರಿಂದ ಅಭೂತಪೂರ್ವ ಸ್ವಾಗತ ನೀಡಿ, ಅವರನ್ನು ಬರಮಾಡಿಕೊಳ್ಳಲಾಯಿತು.

ಯೋಧ ಗುಣಕರ ಕೆ. ಅವರು ಭಾರತೀಯ ಭೂ ಸೇನೆಯ ಎಂಜಿನಿಯರ್‌ರಿಂಗ್ ವಿಭಾಗವಾದ ಕೋರ್ಪ್ಸ್ ಆಫ್ ಇಲೆಕ್ಟ್ರಿಕಲ್ ಆಂಡ್ ಮೆಕಾನಿಕಲ್ ವಿಭಾಗದಲ್ಲಿ ಕರ್ತವ್ಯವನ್ನು ನಿರ್ವಹಿಸಿ ಇದೀಗ ಸೇವಾ ನಿವೃತ್ತಿಯನ್ನು ಪಡೆದಿದ್ದಾರೆ. 1994ರಲ್ಲಿ ಸಿಕಂದರಬಾದ್‌ನಲ್ಲಿ ಸೇನಾ ತರಬೇತಿಯನ್ನು ಮುಗಿಸಿದ ಇವರು ಪಂಜಾಬ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಆ ಬಳಿಕದ ದಿನಗಳಲ್ಲಿ ಜಮ್ಮು- ಕಾಶ್ಮೀರ, ಉತ್ತರ ಪ್ರದೇಶದ ಆಗ್ರಾ, ಅಸ್ಸಾಂ, ಮಧ್ಯಪ್ರದೇಶ, ಶ್ರೀನಗರದಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ, ಬರೋಡಾದ ಇಎಂಬಿ ಸ್ಕೂಲ್‌ನಲ್ಲಿ ನಾಲ್ಕು ವರ್ಷಗಳ ಕಾಲ ತರಬೇತುದಾರನಾಗಿ, ಸಿಕ್ಕಿಂ ಡೋಕ್ಲಾಂ, ಚೀನಾದ ಗಡಿಭಾಗಗಳಲ್ಲಿ, ಜಮ್ಮು ಕಾಶ್ಮೀರದ ಗಡಿ ಪ್ರದೇಶವಾಗಿರುವ ಪಂಜಾಬ್‌ನ ಪಠಾನ್‌ಕೋಟ್‌ನಲ್ಲಿ, ಬರೋಡದಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದರು. ಈ ಅವಧಿಯಲ್ಲಿ ಇವರು ಕಮಿಷನ್ ಆಫೀಸರ್ ಆಗಿ ಭಡ್ತಿ ಹೊಂದಿದ್ದರು.

ಇವರನ್ನು ಉಪ್ಪಿನಂಗಡಿಯ ಆದಿತ್ಯ ಹೊಟೇಲ್ ಬಳಿ ಸ್ವಾಗತಿಸಿ ಮಾತನಾಡಿದ ಉದ್ಯಮಿ ಸುದರ್ಶನ್, ಸೇನೆಯಲ್ಲಿದ್ದುಕೊಂಡು ಸುದೀರ್ಘ 30 ವರ್ಷಗಳ ದೇಶ ಸೇವೆ ಮಾಡಿದ ಯೋಧ ಗುಣಕರ ಕೆ. ಅವರ ಮೇಲೆ ನಮಗೆಲ್ಲರಿಗೂ ಹೆಮ್ಮೆ ಇದೆ. ನಿವೃತ್ತಿಯ ಬಳಿಕವೂ ಈ ಸಮಾಜಕ್ಕೆ ಅವರಿಂದ ಉತ್ತಮ ಸೇವೆಗಳು ಲಭ್ಯವಾಗಲಿ. ಅವರಿಗೆ ಶ್ರೀ ದೇವರು ಉತ್ತಮ ಆಯುರಾರೋಗ್ಯ ಭಾಗ್ಯಗಳನ್ನು ನೀಡಿ ಕಾಪಾಡಲಿ ಎಂದರು.

ನಿವೃತ್ತ ಯೋಧ ಸುಬೇದಾರ್ ಗುಣಕರ ಕೆ. ಮಾತನಾಡಿ, ಸುದೀರ್ಘ ವರ್ಷಗಳ ಕಾಲ ತಾಯ್ನಾಡಿಗಾಗಿ ಸೇವೆ ಸಲ್ಲಿಸಿರುವ ಬಗ್ಗೆ ಹೆಮ್ಮೆಯಿದೆ. ಸೇನೆಯಲ್ಲಿದ್ದ ಕಾರಣ ತನ್ನ ಮನೆ, ಕುಟುಂಬ ವರ್ಗದವರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗಿರಲಿಲ್ಲ. ಈಗ ಅವರನ್ನು ಸೇರಿಕೊಳ್ಳುವ ಖುಷಿ ಇದೆ. ಸೇನೆಯಲ್ಲಿರುವಷ್ಟು ದಿನ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗದೇ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಅನುಗ್ರಹ ನೀಡಿರುವ ಶ್ರೀ ದೇವರಿಗೂ ವಂದಿಸುವುದರೊಂದಿಗೆ, ನನ್ನ ಮೇಲೆ ಅಭಿಮಾನ, ಪ್ರೀತಿ- ವಿಶ್ವಾಸ ತೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭ ಬಿಳಿಯೂರು ಸಾಮ್ರಾಟ್ ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಮಾರ್ ಬೆದ್ರ, ಉಪಾಧ್ಯಕ್ಷ ರಮೇಶ್ ಸುಣ್ಣಾನ, ಕಾರ್ಯದರ್ಶಿ ಮಹೇಶ್ ಪಡಿವಾಳ್, ಪದಾಧಿಕಾರಿಗಳು, ಪ್ರಮುಖರಾದ ನಾಗರಾಜ್ ಕೋಟೆ, ನಾರಾಯಣ ಗೌಡ ಪುಯಿಲ, ಕುಟುಂಬಸ್ಥರಾದ ಹೊನ್ನಪ್ಪ ಪೂಜಾರಿ ಬಿಳಿಯೂರು, ಜಯಪ್ರಕಾಶ್ ದೋಳ ಕಡಬ, ವಾಸಪ್ಪ ಪೂಜಾರಿ ಕೇರ್ನಡ್ಕ, ಮೋಹನ್ ರಾಜ್ ಕೇರ್ನಡ್ಕ, ಪ್ರವೀಣ್ ಎಂ. ಕೇರ್ನಡ್ಕ, ರಾಧಿಕಾ ಎಂ. ಕೇರ್ನಡ್ಕ, ಅಕ್ಷಿತ್ ಕೆ.ವಿ. ಪೂಜಾರಿ, ಜಿತೇಶ್ ಸರಪಾಡಿ, ಯೋಧ ಗುಣಕರ ಕೆ. ಅವರ ಪತ್ನಿ ರೇಷ್ಮಾ ಎಂ.ಎಚ್., ಮಕ್ಕಳಾದ ರಿತ್ವೀಕ್ ಜೆ.ಕೆ., ರಿಧೀತ್ ಜಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here