5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮನವಿ
ಪುತ್ತೂರು: ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದ್ದು ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 19637 ಮಂದಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 5ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ತಾಲೂಕು ಆರೊಗ್ಯಾಧಿಕಾರಿ ಡಾ. ದೀಪಕ್ ರೈ ವಿನಂತಿಸಿದ್ದಾರೆ.
ಇದಕ್ಕಾಗಿ 145 ಪೋಲಿಯೋ ಬೂತ್ಗಳನ್ನು ತೆರೆಯಲಾಗಿದೆ. ಈ ಬೂತ್ಗಳಲ್ಲಿ 580 ಜನ ಸಿಬ್ಬಂದಿಗಳನ್ನು ಲಸಿಕೆ ಹಾಕುವ ಪ್ರಕ್ರಿಯೆಗಾಗಿ ನಿಯೋಜಿಸಲಾಗಿದೆ. 30 ಜನ ಮೇಲ್ವಿಚಾರಕರು ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದ್ದಾರೆ. ಬೆಳಿಗ್ಗೆ ಗಂಟೆ 8 ರಿಂದ ಸಂಜೆ 5ರವರೆಗೆ ಪೋಲಿಯೋ ಬೂತ್ಗಳು ತೆರೆದಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ 4 ಮತ್ತು 5ರಂದು ಹಾಗೂ ನಗರ ಪ್ರದೇಶದಲ್ಲಿ 3 ದಿನ ಮನೆ ಭೇಟಿ ಮಾಡಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುವುದು. ಪುತ್ತೂರು ಉಪ್ಪಿನಂಗಡಿ ಮತ್ತು ಕಡಬ ಬಸ್ ನಿಲ್ದಾಣಗಳಲ್ಲಿ ಕೂಡಾ ಪೋಲಿಯೋ ಬೂತ್ ತೆರೆಯಲಾಗಿರುತ್ತದೆ ಎಂದವರು ತಿಳಿಸಿದ್ದಾರೆ.