ಮುಂದಿನ ಪೀಳಿಗೆಯು ಧಾರ್ಮಿಕತೆಯಲ್ಲಿ ನಮ್ಮಿಂದಲೂ ಮುಂದೆ ಹೋಗಲಿ-ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರ ವಾರ್ಷಿಕೋತ್ಸವದಲ್ಲಿ ಕೇಶವಪ್ರಸಾದ್ ಮುಳಿಯ

0

ಪುತ್ತೂರು: ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದರಲ್ಲೂ ದೇವರಿದ್ದಾರೆ ಎಂಬ ಅರ್ಥ ಸಹಿತ ವಿಷಯ ತಿಳಿಸಲು ಧಾರ್ಮಿಕ ಶಿಕ್ಷಣ ಕೇಂದ್ರ ಮಹತ್ವದ ಸೇವೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಮುಂದಿನ ಪೀಳಿಗೆಯು ಧಾರ್ಮಿಕತೆಯಲ್ಲಿ ನಮ್ಮಿಂದಲೂ ಮುಂದೆ ಹೋಗಲಿ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಹೇಳಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರವರ್ತಿತ ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಮಾ.2ರಂದು ನಡೆದ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾಲಿಂಗೇಶ್ವರ ದೇವಸ್ಥಾನ ಪ್ರವರ್ತಿತ 17 ಧಾರ್ಮಿಕ ಶಿಕ್ಷಣ ಕೇಂದ್ರಗಳಿವೆ. ಅದರಲ್ಲಿ 2 ಸಾವಿರ ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದೇ ರೀತಿ ದೇವರಿಗೆ 152 ಕಡೆ ಕಟ್ಟೆಗಳಿವೆ. ಅಂತಹ ಕಟ್ಟೆಯಲ್ಲಿ ವರ್ಷಕ್ಕೊಮ್ಮೆ ಮಾತ್ರವಲ್ಲ ನಿತ್ಯ ಆರಾಧನೆ ನಡೆಯಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರ ಅಲ್ಲಲ್ಲಿ ಆಗಬೇಕೆಂಬ ನಮ್ಮ ಚಿಂತನೆ. ಈ ಹಿಂದೆ ನಮ್ಮ ಸಮಿತಿಯ ಚಿಂತನೆಯಂತೆ ಮಕ್ಕಳಿಗಾಗಿ ಧಾರ್ಮಿಕ ಶಿಕ್ಷಣ ಕೇಂದ್ರ ಆರಂಭಿಸಿದ್ದೆವು. ಆಗ ನಮಗೆ ಅದರಲ್ಲಿ ಪೂರ್ಣ ತೊಡಗಿಕೊಳ್ಳಲು ಆಗಿರಲಿಲ್ಲ. ಈಗ ನಮಗೆ ಜವಾಬ್ದಾರಿ ಕಡಿಮೆ ಇರುವುದರಿಂದ ಮುಂದೆ ದೇವಾಲಯದ ಸಂವರ್ಧನ ಸಮಿತಿಯ ಮೂಲಕ ಹೆಚ್ಚು ಕಾರ್ಯಪ್ರವೃತ ಮಾಡಲಿದ್ದೇವೆ. ಕನಿಷ್ಠ ಎರಡು ವರ್ಷ ಮಗು ಧಾರ್ಮಿಕ ಶಿಕ್ಷಣ ಪಡೆದರೆ ಸಾಕು. ಅಂತಹ ಆಸಕ್ತಿಯನ್ನು ಮೂಡಿಸುವುದು ನಮ್ಮ ಕೆಲಸ ಎಂದರು.

ನಗರಸಭಾ ಸ್ಥಳೀಯ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯೆ ವೀಣಾ ಬಿ.ಕೆ, ರಂಗನಾಥ್ ಟಿ. ಬೊಳುವಾರು, ನಗರಸಭಾ ಸದಸ್ಯೆ ಗೌರಿ ಬನ್ನೂರು, ಗಣೇಶ್ ಬಾಳಿಗ, ವಿನಯಕ ಬಾಳಿಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಧಾರ್ಮಿಕ ಶಿಕ್ಷಣ ಕೇಂದ್ರದ ಶಿಕ್ಷಕರಾದ ಪ್ರಭಾವತಿ, ಸುಧಾ ಹೆಬ್ಬಾರ್, ವತ್ಸಲರಾಜ್ಞಿ, ಶ್ರೀವಿದ್ಯಾ ಜೆ ರಾವ್ ಮತ್ತು ಭಜನಾ ತರಬೇತಿದಾರ ಪ್ರಶಾಂತ್ ಅವರಿಗೆ ಗೌರವ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗೋ ನಿಧಿಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಯೋಗ ಪ್ರಾತ್ಯಕ್ಷಿತೆ ನಡೆಯಿತು. ವಿದ್ಯಾರ್ಥಿಗಳಾದ ಚಿನ್ಮಯ, ಆಕಾಂಕ್ಷ, ಸುಮನ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here