ವೃತ್ತಿಯಲ್ಲಿ ಬದ್ಧತೆಯನ್ನು ತೋರಿದ ಗಂಗಾಧರ್ ಆಳ್ವ- ಯು.ಟಿ.ಖಾದರ್
ಪುತ್ತೂರು: ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ 32 ವರ್ಷಗಳ ಕಾಲ ಸೇವೆಗೈದು ಎಲ್ಲರ ಅಚ್ಚು ಮೆಚ್ಚಿನವರಾದ ಪ್ರಾಂಶುಪಾಲ ಕೆ.ಎನ್.ಗಂಗಾಧರ್ ಆಳ್ವರವರು ವೃತ್ತಿಯಲ್ಲಿ ಅಮೋಘವಾದ ಸಾಧನೆಯನ್ನು ಮಾಡುವ ಮೂಲಕ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿಷ್ಠೆಯಿಂದ ಕಾರ‍್ಯ ನಿರ್ವಹಿಸಿ, ವೃತ್ತಿಗೆ ಬದ್ಧತೆಯನ್ನು ತೋರಿದ್ದಾರೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಅವರು ಮಾ.2ರಂದು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಕೆ.ಎನ್.ಗಂಗಾದರ್ ಆಳ್ವರವರ ಬೀಳ್ಕೊಡುಗೆ ಸಮಾರಂಭ ‘ಗಂಗಾಭಿನಂದನಾ’ ಸಮಾರಂಭದಲ್ಲಿ ಮಾತನಾಡಿದರು. ಗಂಗಾಧರ್ ಆಳ್ವರವರು ವೃತ್ತಿಯಿಂದ ನಿವೃತ್ತಿ ಆದರೂ ಅವರ ಸೇವೆ ಇನ್ನೂ ಮುಂದೆಯೂ ಸಮಾಜಕ್ಕೆ ಅಗತ್ಯವಾಗಿ ಬೇಕು. ಗ್ರಾಮೀಣ ಪ್ರದೇಶವಾಗಿದ್ದ ತುಂಬೆ ವಿದ್ಯಾಸಂಸ್ಥೆಯ ಕೀರ್ತಿಯನ್ನು ಹತ್ತೂರಿಗೆ ತೋರಿಸಿದ ನೇರ ನಡೆಯ ಗಂಗಾಧರ ಆಳ್ವರವರನ್ನು ಅಭಿನಂದಿಸುವುದಾಗಿ ಹೇಳಿದರು.
ಗೌರವ ದೊರೆತಿದೆ-ರಾಜೇಶ್ ನಾೖಕ್:
ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ರವರು ಮಾತನಾಡಿ, ಗಂಗಾಧರ ಆಳ್ವರವರು ಶಿಕ್ಷಕ ವೃತ್ತಿಯನ್ನು ಗೌರವಿಸಿದ ಕಾರಣ ಅವರಿಗೆ ಇದರಲ್ಲಿ ಯಶಸ್ಸು, ಗೌರವ ದೊರೆತಿದೆ 3 ವರ್ಷ ಉಪನ್ಯಾಸಕರಾಗಿ, 29 ವರ್ಷ ಪ್ರಾಂಶುಪಾಲರಾಗಿ ಒಟ್ಟು 32 ವರ್ಷ ಕಾಲ ಒಂದೇ ಸಂಸ್ಥೆಯಲ್ಲಿ ವೃತ್ತಿ ಜೀವನ ನಡೆಸಿದ ಗಂಗಾಧರ್ ಆಳ್ವರ ಸೇವಾ ಕಾರ‍್ಯ ಸಮಾಜಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ನಿವೃತ್ತಿ ಜೀವನ ಸುಖಕರವಾಗಿರಲಿ- ರಮಾನಾಥ ರೈ:
ಮಾಜಿ ಸಚಿವ ಬಿ.ರಮಾನಾಥ ರೈಯವರು ಮಾತನಾಡಿ, ಗಂಗಾಧರ ಆಳ್ವರವರು ತುಂಬೆ ಸಂಸ್ಥೆಯ ಅಭಿವೃದ್ಧಿಗೆ ಅರ್ಹನಿಶಿಯಾಗಿ ದುಡಿದಿದ್ದಾರೆ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮಂಗಳೂರು ಎಕ್ಸ್‌ಪರ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್, ವಿದ್ಯಾರ್ಥಿ ಅಮಿತ್ ಶುಕ್ಲರವರುಗಳು ಸಂದರ್ಭೋ ಚಿತವಾಗಿ ಮಾತನಾಡಿದರು.
ಮಾದರಿ ಸಂಸ್ಥೆಯಾಗಿ ರೂಪಿಸಿದ ಕೀರ್ತಿ- ಮುಹಿಯುದ್ದೀನ್:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಅಬ್ದುಲ್ ಸಲಾಂರವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 3 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ ೨೯ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಮಾಡುವ ಮೂಲಕ ಸಂಸ್ಥೆಯನ್ನು ದಕ್ಷ ರೀತಿಯಲ್ಲಿ ಶಿಸ್ತು ಬದ್ಧವಾಗಿ ಕಟ್ಟಿ, ಇಡೀ ಶಿಕ್ಷಣ ಕ್ಷೇತ್ರಕ್ಕೆ ಮಾದರಿ ಸಂಸ್ಥೆಯಾಗಿ ರೂಪಿಸಿದ ಕೀರ್ತಿ ಗಂಗಾಧರ್ ಆಳ್ವರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸನ್ಮಾನ:
ಪ್ರಾಂಶುಪಾಲ ಕೆ.ಎನ್.ಗಂಗಾಧರ್ ಆಳ್ವ ಮತ್ತು ಅವರ ಪತ್ನಿ ನವೀನ ಜಿ.ಆಳ್ವರವರನ್ನು ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಸಾಂಪ್ರದಾಯಿಕ ರೀತಿಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಗಂಗಾಧರ್ ಆಳ್ವರ ಪುತ್ರಿಯರಾದ ವೈದ್ಯೆಯಾಗಿ ಎಂ.ಡಿ, ಮಾಡುತ್ತಿರುವ ಡಾ.ಶ್ರೇಷ್ಠ ಆಳ್ವ, ನಿಟ್ಟೆಯಲ್ಲಿ ಇಂಜಿನಿಯರ್ ವಿದ್ಯಾರ್ಥಿನಿಯಾಗಿರುವ ಶ್ರೀಯಾ ಆಳ್ವರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಂಗಾಧರ್ ಆಳ್ವರ ಮಾವ ಕುಯ್ಯಾರು ವಿಶ್ವನಾಥ ರೈ, ಅತ್ತೆ ಚಂದ್ರಾವತಿ ರೈ ಅನಾಜೆ, ವಿದ್ಯಾಹರೀಶ್ ರೈರವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸನ್ಮಾನ ಹೃದಯ ತುಂಬಿ ಬಂದಿದೆ- ಗಂಗಾಧರ್ ಆಳ್ವ:
ಸನ್ಮಾನ ಸ್ವೀಕರಿಸಿದ ಗಂಗಾಧರ್ ಆಳ್ವರವರು ಮಾತನಾಡಿ, ತುಂಬೆ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇಂದಿನ ಸನ್ಮಾನ ನನ್ನ ಹೃದಯ ತುಂಬಿ ಬಂದಿದೆ ಎಂದರು. ಉಪನ್ಯಾಸಕ ದಿನೇಶ್ ಶೆಟ್ಟಿ ಅಭಿನಂದನಾ ಭಾಷಣಗೈದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ. ಮಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಬಿ.ಎಂ. ಅಶ್ರಫ್, ತುಂಬೆ ಗ್ರಾ.ಪಂ, ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಸಲಾಂ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ತುಂಬೆ ಮಹಾಲಿಂಗೇಶ್ವರ ದೇವವಾಲಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಜೋತಿಷಿ ಅನಿಲ್ ಪಂಡಿತ್‌ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿತಾ ಮತ್ತು ನೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಶೇಖರ್‌ರವರು ಆಶಯ ಗೀತೆಗೈದರು. ಸಂಸ್ಥೆಯ ನಿಯೋಜಿತ ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಸಂಸ್ಥೆಯ ಟ್ರಸ್ಟಿ ಅಬ್ದುಲ್ ಕಬೀರ್ ವಂದಿಸಿದರು.
ಸದಾ ನೆನಪಲ್ಲಿ ಉಳಿಯುವ ಸನ್ಮಾನ ಸಮಾರಂಭ:
ಕೆ.ಎನ್.ಗಂಗಾಧರ್ ಆಳ್ವರವರ ಶಿಸ್ತು, ಪ್ರಾಮಾಣಿಕ ರೀತಿಯ ಸೇವಾ ಕಾರ‍್ಯವನ್ನು ಸಮಾಜ ಗೌರವಿಸಿದೆ ಎಂಬುದಕ್ಕೆ ‘ಗಂಗಾಭಿನಂದನಾ’ ಸನ್ಮಾನ ಸಮಾರಂಭ ಸಾಕ್ಷಿಯಾಯಿತು. ಆಳ್ವರವರು ವೃತ್ತಿಯಲ್ಲಿ ತೋರಿದ ಬದ್ಧತೆಯನ್ನು ಇಡೀ ಸಮಾಜ ಮುಕ್ತ ಕಂಠದಿಂದ ಪ್ರಶಂಶಿಸಿದೆ ಎಂಬುದಕ್ಕೆ ಸನ್ಮಾನ ಸಮಾರಂಭಕ್ಕೆ ಸೇರಿದ ಜನಸಮೂಹ ಸಾಕ್ಷಿಯಾಯಿತು.