ಮಾ.11 -ಮಾ.15: ಕೆದಿಲ ಶ್ರೀ ಉಳ್ಳಾಕ್ಲು, ಧೂಮಾವತಿ, ಮಲರಾಯ ದೈವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರೋತ್ಸವ

0

ದೈವಗಳ ಅನುಗ್ರಹ, ಜನರ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕ: ಜೆ. ಕೃಷ್ಣ ಭಟ್ ಕೇಶವ ಕೃಪಾ ಮೀರಾವನ

ಪುತ್ತೂರು: ಕೆದಿಲ ಶ್ರೀ ಉಳ್ಳಾಕ್ಲು, ಧೂಮಾವತಿ, ಮಲರಾಯ ದೈವಸ್ಥಾನ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು, 2023ರ ಸೆ.9ರಂದು ಅನುಜ್ಞಾ ಕಲಶ ನಡೆದು ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಪ್ರಾರಂಭಿಸಲಾಗಿತ್ತು. ಭಕ್ತ ಜನರ ಸಹಕಾರದಿಂದ ಆರು ತಿಂಗಳಲ್ಲಿ ಸುಮಾರು 2.5ಕೋಟಿ ವೆಚ್ಚದ ಕೆಲಸ ಕಾರ್ಯಗಳು ಪೂರ್ಣಗೊಂಡು, 2024ರ ಮಾ.11ರಿಂದ 15ರವರೆಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೆ. ಕೃಷ್ಣ ಭಟ್ ಕೇಶವ ಕೃಪಾ ಮೀರಾವನ ಹೇಳಿದರು.

ಅವರು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಶ್ರೀ ಉಳ್ಳಾಕ್ಲು, ಧೂಮಾವತಿ, ಮಲರಾಯ ದೈವಸ್ಥಾನದಲ್ಲಿ ನಡೆಯಲಿದರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಿದ್ದೋಡಿ ಗ್ರಾಮದಲ್ಲಿ ಸಿದ್ಧರಿಂದ ಸ್ಥಾಪಿಸಲ್ಪಟ್ಟ ದೈವಸ್ಥಾನದಲ್ಲಿ ದೈವಗಳ ನಡಾವಳಿಗಳು 1949ರಲ್ಲಿ ನಿಂತು ಹೋಗಿ 1983ರವರೆಗೆ ಶಿಥಿಲಾವಸ್ಥೆಯಲ್ಲಿದ್ದು, 1984ರಲ್ಲಿ ಜೀರ್ಣೋದ್ಧಾರ ಕಾರ್ಯಕ್ರಗಳನ್ನು ಪ್ರಾರಂಭಿಸಲಾಗಿತ್ತು. 1991ರಲ್ಲಿ ಜೀರ್ಣೋದ್ಧಾರಗೊಂಡ ದೈವಸ್ಥಾನದ ಪ್ರಥಮ ಬ್ರಹ್ಮಕಲಶೋತ್ಸವ ನಡೆದಿದೆ. 2012ರಲ್ಲಿ ಎರಡನೇ ಬ್ರಹ್ಮಕಲಶೋತ್ಸವನ್ನು ನಡೆಸಲಾಗಿದ್ದು, 12 ವರ್ಷಗಳ ಬಳಿಕ ಈಗ ದೈವಸ್ಥಾನವನ್ನು ಶಿಲಾಮಯವಾಗಿಸಿ, ಛಾವಣಿಗೆ ತಾಮ್ರ ಹಾಸುವ ಮೂಲಕ ಜೀರ್ಣೋದ್ಧಾರಗೊಳಿಸಲಾಗಿದೆ. ಪ್ರತಿಯೊಂದು ಕೆಲಸವೂ ಭಕ್ತರ ಕೊಡುಗೆಯ ಮೂಲಕ ಹಾಗೂ ಸ್ವಯಂಸೇವಕರ ಶ್ರಮಸೇವೆಯ ಮೂಲಕ ನಡೆದುಕೊಂಡು ಬಂದಿರುವುದು ವಿಶೇಷವಾಗಿದೆ.

ದೈವಗಳಿಗೆ 5 ಪ್ರತ್ಯೇಕ ಭಂಡಿಗಳನ್ನು ಹೊಂದಿರುವುದು ಇಲ್ಲಿನ ವಿಶೇಷವಾಗಿದ್ದು, ಸಂತಾನ ಭಾಗ್ಯ, ವ್ಯಾಜ್ಯ ನಿವಾರಣೆ, ಆರೋಗ್ಯ ವಿಚಾರದಲ್ಲಿ ವಿಶೇಷ ಮಹತ್ವವಿದೆ. ತಪ್ಪು ಮಾಡಿದವರಿಗೆ ಶಿಕ್ಷೆ, ನಂಬಿದವರನ್ನು ಕೈ ಬಿಡದ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಕೈಂತಜೆ, ಕುದುಂಬ್ಲಾಡಿ, ಕಲ್ಲಾಜೆ ಮೂರು ಗುತ್ತು ಮನೆಗಳನ್ನು ಹೊಂದಿದ್ದು, 16 ಮನೆತಗಳನ್ನು ಒಳಗೊಂಡಿದೆ. ಸಂಕ್ರಾಂತಿ ಸೇರಿ ವಿಶೇಷ ಆಚರಣೆಗಳು ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿದ್ದು, 400ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಶ್ರಮಸೇವೆಯ ಮೂಲಕವೇ ಸುಮಾರು 50ರಿಂದ 60ಲಕ್ಷ ವೆಚ್ಚದ ಕಾಮಗಾರಿಗಳು ನಡೆದಿದೆ.

ಮಾ.10ರಂದು ಬೆಳಗ್ಗೆ 9.30ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದ್ದು, ಸಾಯಂಕಾಲ 4ಕ್ಕೆ ಗಾಂಧಿನಗರ ಶ್ರೀ ದೇವಿ ಭಜನಾ ಮಂದಿರದಿಂದ ಎಲ್ಲಾ ಭಾಗದಿಂದ ಸಂಗ್ರಹಿಸಿದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಾ.11ರಂದು ಸಾಯಂಕಾಲ ೫ಕ್ಕೆ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಮಾ.12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಮಾ.13ರಂದು ಬೆಳಗ್ಗೆ 10.20ರ ಬಳಿಕ ಶ್ರೀ ಸಪರಿವಾರ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಗಳ ಪುನಃ ಪ್ರತಿಷ್ಠೆ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ ನಡೆಯಲಿದೆ. ಮಾ.14ರಂದು ಸಂಕ್ರಾಂತಿ ತಂಬಿಲ, ದೈವಗಳ ನೇಮೋತ್ಸವ, ಮಾ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದ ಬಳಿಕ ಚಾವಡಿಗೆ ಭಂಡಾರ ಹಿಂದಿರುಗಲಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಕುಲಾಲ್, ಆಡಳಿತ ಸಮಿತಿ ಉಪಾಧ್ಯಕ್ಷರಾದ ಬಾಲಪ್ಪ ಗೌಡ ಕುದುಂಬ್ಲಾಡಿಗುತ್ತು, ಕಾರ್ಯದರ್ಶಿ ಕೆ. ಮುರಳೀಧರ ಶೆಟ್ಟಿ ಕಲ್ಲಾಜೆಗುತ್ತು, ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಪುಷ್ಪರಾಜ ಹೆಗ್ಡೆ ಪದ್ಮಶ್ರೀ ಸತ್ತಿಕಲ್ಲು, ಕ್ಷೇತ್ರಪಳಿಕೆ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಚರಣ್ ಕುಲಾಲ್ ಮಿತ್ತಪಡ್ಪು, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಜಿನ್ನಪ್ಪ ಗೌಡ ಕಂಪ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here