ನಗರ ಸಭೆಯಲ್ಲಿ ರೂ.1.11ಕೋಟಿಯ ಮಿಗತೆಯ ಬಜೆಟ್‌ಗೆ ಅನುಮೋದನೆ

0

ಪುತ್ತೂರು; ನಗರ ಸಭೆಯ 2024-25ನೇ ಸಾಲಿನ ಆಯ-ವ್ಯಯವನ್ನು ನಗರ ಸಭೆಯ ಆಡಳಿತಾಧಿಕಾರಿಯಾಗಿರುವ ದ.ಕ ಜಿಲ್ಲಾಧಿಕಾರಿಯವರು ಅನುಮೋದಿಸಿದ್ದು, ಅನುಮೋದಿತ ಬಜೆಟ್‌ನ ಮಾಹಿತಿಯನ್ನು ಮಾ.6ರಂದು ನಗರ ಸಭಾ ಸಭಾಗಣದಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಸದಸ್ಯರಿಗೆ ನೀಡಲಾಯಿತು.


ಬಜೆಟ್‌ನ ಮುಖ್ಯಾಂಶಗಳು:
2024-25ನೇ ಸಾಲಿನ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣಾ ಶುಲ್ಕ ಇತ್ಯಾದಿಗಳಿಂದ ಸಂಗ್ರಹವಾಗುವ ಒಟ್ಟು ಸ್ವಂತ ರಾಜಸ್ವ ಆದಾಯಗಳಿಂದ ರೂ.12.40ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗುವ ರಾಜಸ್ವ ಅನುದಾನಗಳಾದ ವೇತನ ಅನುದಾನ, ಕುಡಿಯುವ ನೀರಿನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಮತ್ತು ಇತರೇ ರಾಜಸ್ವ ಅನುದಾನ ರೂ. 10.00 ಕೋಟಿ ನಿರೀಕ್ಷಿಸಲಾಗಿದೆ. ಎರಡು ಆದಾಯಗಳು ಸೇರಿ ಒಟ್ಟು ರೂ. 22.40 ಕೋಟಿ ಆಯ-ವ್ಯಯದಲ್ಲಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ.


ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 15ನೇ ಹಣಕಾಸು ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನ, ಸ್ವಚ್ಛ ಭಾರತ್ ಮಿಷನ್ ಅನುದಾನ-2 ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ಲೋಕಸಭಾ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ಡೇ-ನಲ್ಮ್ ಅನುದಾನ, ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಅನುದಾನ, ಮಲತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ ಅನುದಾನ, ಎಸ್.ಎಫ್.ಸಿ ವಿಶೇಷ ಅನುದಾನ, ಡಲ್ಟ್ ಅನುದಾನ, ಲೆಗಸಿ ವೆಸ್ಟ್ ನಿರ್ವಹಣೆ ಅನುದಾನ ಹಾಗೂ ಇತರೇ ಅನುದಾನ ಸೇರಿ ಒಟ್ಟು ರೂ. 18.20 ಕೋಟಿಗಳ ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.5.06 ಕೋಟಿ ಆಯವ್ಯಯದಲ್ಲಿ ನಿರೀಕ್ಷಿಸಲಾಗಿದೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದರು. ನಗರ ಸಭಾ ಇಂಜಿನಿಯರ್ ಅರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here