ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಭಾಸ್ಕರ್ ಕೋಡಿಂಬಾಳ ಸದಸ್ಯರಾಗಿ ನಿಹಾಲ್ ಪಿ.ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್, ಅನ್ವರ್ ಕಾಸಿಂ

0

ಪುತ್ತೂರು:ರಾಜ್ಯದ ನಗರ ಯೋಜನಾ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನಾಮನಿರ್ದೇಶನ ಮಾಡಿ ಸರಕಾರ ಆದೇಶಿಸಿದ್ದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ ಕೆ.ಭಾಸ್ಕರ್ ಕೋಡಿಂಬಾಳ ಮತ್ತು ಸದಸ್ಯರಾಗಿ ಉದ್ಯಮಿ, ರೈ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ನಿಹಾಲ್ ಪಿ ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ನಗರಸಭೆಯ ಮಾಜಿ ಸದಸ್ಯ ಅನ್ವರ್‌ಕಾಸಿಂ ಅವರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರದ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವೆ,ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಕೆ.ಅವರು ಮಾ.೧೪ರಂದು ಆದೇಶಿಸಿದ್ದಾರೆ.

ಅಧ್ಯಕ್ಷರ ಪರಿಚಯ: ಕಳೆದ ೩೨ ವರ್ಷಗಳಿಂದ ಪುತ್ತೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಕೆ.ಭಾಸ್ಕರ ಕೋಡಿಂಬಾಳ ಅವರು ದಿ.ದಾಸಪ್ಪ ಗೌಡ-ಶ್ರೀಮತಿ ಬಾಲಕಿ ದಂಪತಿಯ ಪುತ್ರ.ಹಿರಿಯ ವಕೀಲರಾಗಿದ್ದ ಅಂಬೆಕಲ್ಲು ರಾಧಾಕೃಷ್ಣ ಗೌಡರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ವೃತ್ತಿ ಆರಂಭಿಸಿದ್ದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಕೋಡಿಂಬಾಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ,ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು, ಪಂಜದಲ್ಲಿ ಹಾಗೂ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ, ಮಂಗಳೂರುನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು.ಭಾರತ ಸರಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್‌ನಲ್ಲಿ ಸಹಾಯಕ ಯೋಜನಾ ಧಿಕಾರಿಯಾಗಿ ಎರಡು ವರ್ಷಗಳ ಸೇವೆ ಸಲ್ಲಿಸಿದ್ದ ಇವರು ಬಳಿಕ ಈ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ಪುತ್ತೂರಿನಲ್ಲಿ ಕಳೆದ ೩೨ ವರ್ಷಗಳಿಂದ ವಕೀಲ ವೃತ್ತಿ ನಿರ್ವಹಿಸುತ್ತಿದ್ದು ೧೫ ವರ್ಷಗಳ ಹಿಂದೆ ಜಿಲ್ಲಾ ನೋಟರಿಯಾಗಿ ನೇಮಕಗೊಂಡಿದ್ದರು.ಕಳೆದ ೨೦ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಆರ್ಬಿಟ್ರೇಟರ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.ರಾಜಕೀಯವಾಗಿ,೮ ವರ್ಷ ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಇವರು ಪಿ.ಪಿ.ವರ್ಗೀಸ್‌ರವರು ಜಿಲ್ಲಾ ಪಂಚಾಯತ್ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಅವರ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ನಿರ್ವಹಣೆ ಮತ್ತು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ಫಝಲ್ ರಹೀಂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬ್ಲಾಕ್ ಕಾರ್ಯದರ್ಶಿಯಾಗಿ ಸೇವೆ, ಮಹಮ್ಮದ್ ಬಡಗನ್ನೂರು ಮತ್ತು ಎಂ.ಬಿ.ವಿಶ್ವನಾಥ ರೈಯವರು ಬ್ಲಾಕ್ ಅಧ್ಯಕ್ಷರಾಗಿರುವಾಗ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ,ಶಕುಂತಲಾ ಶೆಟ್ಟಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಪುತ್ತೂರು ಬ್ಲಾಕ್‌ನ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಕುಮಾರ್ ರೈಯವರ ಚುನಾವಣಾ ಏಜೆಂಟ್ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.ಪ್ರಕೃತ ಸುಳ್ಯ ಬ್ಲಾಕ್ ಕಾಂಗ್ರೆಸ್‌ನ ವೀಕ್ಷಕನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.ಹಲವಾರು ಸಹಕಾರ ಸಂಘಗಳು, ಸಂಘಟನೆಗಳ ಕಾನೂನು ಸಲಹೆಗಾರರು.ಶಕುಂತಲಾ ಶೆಟ್ಟಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇದರ ನಿರ್ದೇಶಕನಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಪುತ್ತೂರು ತಾಲೂಕು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿರುವ ಇವರು ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಇದರ ಪೂರ್ವಾಧ್ಯಕ್ಷರು ಮತ್ತು ಈ ಸಾಲಿನ ವಲಯ ಸೇನಾನಿ.ಪುತ್ತೂರು ತಾಲೂ ಒಕ್ಕಲಿಗ ಗೌಡ ನ್ಯಾಯ ತೀರ್ಮಾನ ಸಮಿತಿಯ ಅಧ್ಯಕ್ಷ.ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಹೆಣದೂರು ಎಂಬ ಬೀದಿ ನಾಟಕ ಹಾಗೂ ಕೋಮು ಸಾಮರಸ್ಯ ಸಂದೇಶ ಸಾರುವ ಕೆಂಪು ಕಾಡು ಎಂಬ ನಾಟಕದ ನಿರ್ಮಾಪಕರು.ಸುದ್ಧಿ ಬಿಡುಗಡೆ ಪತ್ರಿಕೆಯಲ್ಲಿ ಕಾನೂನು ಸಂಬಂಧಿತ ಅಂಕಣ ಬರಹಗಾರರಾಗಿದ್ದಾರೆ.ಇವರು ಶಿಕ್ಷಕಿಯಾಗಿರುವ ಪತ್ನಿ ಶುಭಲತಾ ಕೆ.,ಮಕ್ಕಳು ಜಯವರ್ಧನ್, ಹರ್ಷವರ್ಧನ ಅವರೊಂದಿಗೆ ಬನ್ನೂರಿನ ಜೋಡುಕಟ್ಟೆಯಲ್ಲಿ ವಾಸ್ತವ್ಯವಿದ್ದಾರೆ.

ಉದ್ಯಮಿ ನಿಹಾಲ್ ಪಿ.ಶೆಟ್ಟಿ: ಸದಸ್ಯನಾಗಿ ನಾಮನಿರ್ದೇಶನಗೊಂಡಿರುವ ನಿಹಾಲ್ ಪಿ.ಶೆಟ್ಟಿಯವರು ಯಶಸ್ವಿ ಉದ್ಯಮಿಯಾಗಿದ್ದಾರೆ.ಕಲ್ಲಾರೆಯಲ್ಲಿ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಯ ಪಾಲುದಾರರಾಗಿರುವ ಇವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ನಳಿನಿ ಪುಷ್ಪರಾಜ್ ಶೆಟ್ಟಿಯವರ ಮಗನಾಗಿರುವ ಇವರು ಸಾಮೆತ್ತಡ್ಕ ಱಜನನಿ ಹೌಸ್‌ೞ ನಿವಾಸಿ.

ಲ್ಯಾನ್ಸಿ ಮಸ್ಕರೇನ್ಹಸ್: ಸದಸ್ಯನಾಗಿ ನಾಮನಿರ್ದೇಶನಗೊಂಡಿರುವ ಲ್ಯಾನ್ಸಿ ಮಸ್ಕರೇನ್ಹಸ್ ಅವರು ಈ ಹಿಂದೆ ಪುರಸಭೆಯ ಸದಸ್ಯನಾಗಿ,ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು.ನಗರ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕ್ರೈಸ್ತ ಸಮುದಾಯದ ಸಂಘಟನೆಗಳಲ್ಲಿಯೂ ಇವರು ಸಕ್ರಿಯರಾಗಿದ್ದಾರೆ.ಇವರು ಸಾಮೆತ್ತಡ್ಕ ನಿವಾಸಿ.

ಅನ್ವರ್ ಕಾಸಿಂ: ಅನ್ವರ್ ಕಾಸಿಂ ಅವರು ಈ ಹಿಂದೆ ಪುರಸಭೆ, ನಗರಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.ಕಾಂಗ್ರೆಸ್ ಪಕ್ಷದಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಇವರು ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ.ಇವರು ಸಾಲ್ಮರ ನಿವಾಸಿ.

LEAVE A REPLY

Please enter your comment!
Please enter your name here