ಕೊನೆಗೂ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆ-ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸ್ವಾಗತ-ಶೀಘ್ರ ಪುತ್ತೂರಿನಲ್ಲಿ ಸಮಾವೇಶ

0

ವಿಧಾನಸಭೆ ಚುನಾವಣೆ ಬಳಿಕದ ಸಂಘರ್ಷ ಅಂತ್ಯ
ದ.ಕ.ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ಬೆನ್ನಲ್ಲೇ ನಡೆದ ದಿಢೀರ್ ಬೆಳವಣಿಗೆ


ಪುತ್ತೂರು:ದ.ಕ.ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಸೇನಾಧಿಕಾರಿ ಕ್ಯಾ|ಬ್ರಿಜೇಶ್ ಚೌಟ ಅವರು ಆಯ್ಕೆಯಾದ ಬೆನ್ನಲ್ಲೇ ನಡೆದಿರುವ ಮಾತುಕತೆ ಫಲಪ್ರದವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಿಂದ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವೆ ಇದ್ದ ಸಂಘರ್ಷ ಈ ಮೂಲಕ ಅಂತ್ಯವಾಗಿದೆ.

ಮಾ.೧೪ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿವಾಸದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೂಗುಚ್ಚ ನೀಡುವ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿರುವ ಮಾಜಿ ಸಚಿವ ವಿ.ಸುನಿಲ್ ಕುಮಾರ್, ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್,ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್, ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ,ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ,ಪರಿವಾರದ ರವಿ ಕುಮಾರ್ ರೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಆರಂಭದಲ್ಲಿ ಬಿಜೆಪಿ ಕಚೇರಿ ಭೇಟಿ: ಬಿಜೆಪಿ ಮತ್ತು ಪುತ್ತಿಲ ಪರಿವಾರದ ಪ್ರಮುಖರು ಆರಂಭದಲ್ಲಿ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಒಂದು ಹಂತದಲ್ಲಿ ಮಾತುಕತೆ ನಡೆಸಿದರು.ಬಳಿಕ ಎಲ್ಲರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿವಾಸ ಱಧವಳಗಿರಿೞಗೆ ಭೇಟಿ ನೀಡಿದರು.ಸುನಿಲ್ ಕುಮಾರ್ ಅವರ ಕಾರಿನಲ್ಲಿಯೇ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಕಚೇರಿಯಿಂದ ಬಿ.ವೈ.ವಿಜಯೇಂದ್ರ ಅವರ ನಿವಾಸಕ್ಕೆ ತೆರಳಿದರು.ಆ ಸಂದರ್ಭ ಬಿ.ವೈ.ವಿಜಯೇಂದ್ರ ಅವರು ಅಲ್ಲಿರಲಿಲ್ಲ.ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮುಖಂಡರ ಮಾತುಕತೆ ನಡೆಯಿತು.ಅಯೋಧ್ಯೆಯಿಂದ ಆಗಮಿಸಿದ್ದ ಪೇಜಾವರಶ್ರೀಗಳ ಕಾರ್ಯಕ್ರಮ ಮುಗಿಸಿ ದೆಹಲಿಯಿಂದ ತಮ್ಮ ನಿವಾಸಕ್ಕೆ ಬಂದ ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರು ಮತ್ತು ಪುತ್ತಿಲ ಪರಿವಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.ಬಳಿಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಹೂಗುಚ್ಚ ನೀಡಿ ಬಿಜೆಪಿಗೆ ಸ್ವಾಗತಿಸಿದರು.ಅದಾದ ಬಳಿಕ ಅಲ್ಲಿ ಉಭಯ ಕುಶಲೋಪರಿ ಮುಗಿಸಿ ಎಲ್ಲರೂ ನಿರ್ಗಮಿಸಿದರು.
ಇಂದು ಮಂಗಳೂರುನಲ್ಲಿ ಜಂಟಿ ಸುದ್ದಿ ಗೋಷ್ಠಿ:ಬೆಂಗಳೂರುನಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಮಾ.೧೫ರಂದು ಸಂಜೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.ಕೆಲವೇ ದಿನಗಳ ಬಳಿಕ ಪುತ್ತೂರಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶವೊಂದು ನಡೆಯಲಿದೆ.ಈ ಸಮಾವೇಶದ ಕುರಿತು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ.

ಇದು ಹಿನ್ನೆಲೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಮತ್ತು ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ದೊರೆಯದೇ ಇದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅರುಣ್ ಕುಮಾರ್ ಪುತ್ತಿಲ ಅವರು ಹಿಂದುತ್ವದ ಸಿದ್ದಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಚುನಾವಣೆಯಲ್ಲಿ ಅವರು ಪರಾಜಿತರಾದರೂ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ವಿರೋಚಿತ ಸೋಲು ಕಂಡಿದ್ದರು.ಇಲ್ಲಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.ಆ ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಅರುಣ್ ಕುಮಾರ್ ನಡುವೆ ಸಂಘರ್ಷ ಆರಂಭಗೊಂಡಿತ್ತು.ರಾಜಕೀಯವಾಗಿ ಬಿಜೆಪಿಯಿಂದ ದೂರವಾದ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಬಳಿಕ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ಬಂದು ಒಂದು ರೀತಿಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯುವ ರೀತಿಯ ಕೆಲಸ ಕಾರ್ಯಗಳು ನಡೆಯುತ್ತಿದ್ದವು.ಕೆಲವೊಂದು ಗ್ರಾಮ ಪಂಚಾಯತ್ ಉಪಚುನಾವಣೆ, ನಗರಸಭೆ ಉಪಚುನಾವಣೆಯಲ್ಲಿಯೂ ಪುತ್ತಿಲ ಪರಿವಾರ ಸ್ಪರ್ಧೆ ಮಾಡಿತ್ತು.ಒಂದು ಗ್ರಾ.ಪಂ.ನಲ್ಲಿ ಗೆಲುವನ್ನೂ ಪಡೆದುಕೊಂಡಿತ್ತು.

ಸೇರ್ಪಡೆ ಮಾತುಕತೆ ನಿರಂತರ ಪ್ರಕಟವಾಗದ ನಿರ್ಧಾರ: ನಂತರದ ಬೆಳವಣಿಗೆಯಲ್ಲಿ, ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಯಾಗುವುದು ಮತ್ತು ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ,ಸಂಘ ಪರಿವಾರ ಮತ್ತು ಪುತ್ತಿಲ ಪರಿವಾರದ ಪ್ರಮುಖರ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆದಿತ್ತು.ಆದರೂ ಯಾವುದೇ ನಿರ್ಧಾರ ಪ್ರಕಟವಾಗಿರಲಿಲ್ಲ.ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷತೆ ನೀಡುವುದಾದರೆ ಮಾತ್ರ ಅವರು ಬಿಜೆಪಿಗೆ ಸೇರ್ಪಡೆಯಾಗಿ ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಕುರಿತು ಪುತ್ತಿಲ ಪರಿವಾರದ ಕಾರ್ಯಕರ್ತರು ಸಮಾಲೋಚನಾ ಸಮಾವೇಶದಲ್ಲಿ ತೀರ್ಮಾನ ಕೈಗೊಂಡಿದ್ದರು.ಪಕ್ಷಕ್ಕೆ ಬೇಷರತ್ ಆಗಿ ಬರುವುದಾದರೆ ಸ್ವಾಗತ.ಪಕ್ಷದ ಹುದ್ದೆ ನೀಡುವ ವಿಚಾರ ಏನಿದ್ದರೂ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ಪ್ರಮುಖರು ಸ್ಪಷ್ಟಪಡಿಸಿದ್ದರು.

ಪುತ್ತಿಲ ಸ್ಪರ್ಧೆ ಘೋಷಣೆ: ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವುದು ಸೇರಿದಂತೆ ತಮ್ಮ ಷರತ್ತುಗಳಿಗೆ ಬಿಜೆಪಿಯಿಂದ ಯಾವುದೇ ನಿರ್ಧಾರ ಪ್ರಕಟವಾಗದೇ ಇದ್ದುದರಿಂದ, ಪುತ್ತಿಲ ಪರಿವಾರದ ಪ್ರಮುಖರು ಮುಂದೆ ಬಿಜೆಪಿಯೊಂದಿಗೆ ಯಾವುದೇ ಮಾತುಕತೆಗೆ ಹೋಗದೇ ಇರುವ ನಿರ್ಧಾರಕ್ಕೆ ಬಂದಿದ್ದರು.ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಅರುಣ್ ಕುಮಾರ್ ಪುತ್ತಿಲ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಮತ್ತು ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ದ.ಕ.ಜಿಲ್ಲೆಯಲ್ಲಿ ಪುತ್ತಿಲ ಪರಿವಾರದ ಸ್ಪರ್ಧೆ ಇರಲಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಹಿರಂಗವಾಗಿ ಘೋಷಿಸಿದ್ದರು.
ಬಿಜೆಪಿಗೆ ಸೇರ್ಪಡೆಗೆ ಪುತ್ತಿಲ ಒಪ್ಪಿಗೆ: ದ.ಕ.ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರೇ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿದ್ದವು.ಆದರೆ,ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಸೇನಾಧಿಕಾರಿ ಬ್ರಿಜೇಶ್ ಚೌಟ ಅವರು ಆಯ್ಕೆಯಾದುದರಿಂದ ಪುತ್ತಿಲ ಪರಿವಾರದ ನಡೆ ಏನು ಎನ್ನುವ ಕುತೂಹಲ ಸೃಷ್ಟಿಯಾಗಿತ್ತು.ಈ ಕುರಿತು ಪ್ರತಿಕ್ರಿಯಿಸಿದ್ದ ಅರುಣ್ ಕುಮಾರ್ ಪುತ್ತಿಲ, ನಮ್ಮ ಪರಿವಾರದ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು ಹೇಳಿದ್ದರು.ಇದೀಗ, ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಮಾತುಕತೆ ಫಲಪ್ರದವಾಗಿದ್ದು ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಳೆದೊಂದು ವರ್ಷದಿಂದ ಬಿಜೆಪಿ-ಪುತ್ತಿಲ ನಡುವಿನ ಸಂಘರ್ಷವೊಂದು ಅಂತ್ಯಗೊಂಡಿದೆ

ಮೋದಿಯವರ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡ್ತೇವೆ
ಮುಂದಿನ ಲೋಕಸಭಾ ಚುನಾವಣೆಯಲ್ಲಿ, ಈ ರಾಷ್ಟ್ರದ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿಯರ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬಿಸುವ ಯೋಚನೆಯಡಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳ ಜೊತೆಗೆ ಬಿಜೆಪಿ ಪರಿವಾರ ಮತ್ತು ಪುತ್ತಿಲ ಪರಿವಾರ ಜೊತೆಯಾಗಿ ಕೆಲಸ ಮಾಡುವ ಮೂಲಕ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ದೊಡ್ಡ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸುತ್ತೇವೆ- ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಬಳಿಕ ಪ್ರಥಮ ಪ್ರತಿಕ್ರಿಯೆ

ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನ ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತೇವೆ
ಈ ಹಿಂದೆ ಹೇಳಿರುವಂತೆ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಿದೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರ ಜೊತೆಯಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಒಟ್ಟು ಸೇರಿ ಕೆಲಸ ಮಾಡಲಿzವೆ.ಇನ್ನು ಪುತ್ತಿಲ ಪರಿವಾರ ಬಿಜೆಪಿ ಪರಿವಾರ ಎನ್ನುವ ಬದಲು ನಾವೆಲ್ಲರೂ ಒಂದೇ ಪರಿವಾರದವರಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುವ ಮೂಲಕ ಪ್ರಧಾನಿ ಮೋದಿಯವರ ಕೆಲಸ ಕಾರ್ಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿzವೆ- ಸಾಜ ರಾಧಾಕೃಷ್ಣ ಆಳ್ವ,ಅಧ್ಯಕ್ಷರು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ

ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಅರುಣ್ ಕುಮಾರ್ ಪುತ್ತಿಲ?
ಅರುಣ್ ಕುಮಾರ್ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಮಾತ್ರ ಬಿಜೆಪಿ ಸೇರ್ಪಡೆಗೆ ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಷರತ್ತು ವಿಧಿಸಿದ್ದರು.ಆದರೆ ಪಕ್ಷಕ್ಕೆ ಬೇಷರತ್ ಆಗಿ ಸೇರುವಂತೆ ಪಕ್ಷದ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಸಹಿತ ಪಕ್ಷದ ನಾಯಕರು ಸೂಚಿಸಿದ್ದರಲ್ಲದೆ, ಪಕ್ಷದ ಹುದ್ದೆ ನೀಡುವ ವಿಚಾರ ಮುಂದೆ ನಿರ್ಧರಿಸುವುದಾಗಿ ತಿಳಿಸಿದ್ದರು.ಇದೀಗ ಬಿಜೆಪಿಗೆ ಸೇರ್ಪಡೆಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಆರಂಭದಲ್ಲಿ ದ.ಕ.ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿ ಸ್ಥಾನ ನೀಡಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ.ಜಿಲ್ಲೆಯಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷತೆಗೆ ಇನ್ನೂ ನೂತನ ಅಧ್ಯಕ್ಷರ ನೇಮಕವಾಗದೇ ಇರುವುದರಿಂದ ಮುಂದಿನ ದಿನಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ನಾಳೆಯಿಂದಲೇ ಪುತ್ತಿಲ ಬಿಜೆಪಿ ಪರ ಕೆಲಸ
ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ಆಗ್ತಾ ಇದೆ.ದೇಶಕ್ಕೆ ನರೇಂದ್ರ ಮೋದಿಯವರೇ ಬೇಕು ಎಂದು ತುಂಬಾ ಜನ ಬಿಜೆಪಿ ಸೇರ್ತಾ ಇದ್ದಾರೆ.ಅರುಣ್ ಕುಮಾರ್ ಪುತ್ತಿಲ ಕೆಲ ಕಾರಣಗಳಿಗೆ ಬೇರೆ ಆಗಿದ್ರು,ಪುತ್ತಿಲ ಪರಿವಾರ ಮೋದಿ ಪರಿವಾರದ ಜೊತೆ ಕೆಲಸ ಮಾಡಲು ರೆಡಿಯಾಗಿದ್ದಾರೆ.ಈಗ ರಾಜ್ಯಾಧ್ಯಕ್ಷರನ್ನ ಭೇಟಿಯಾಗಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಅವರು ನಾಳೆಯಿಂದಲೇ ಬಿಜೆಪಿ ಪರ ಕೆಲಸ ಮಾಡುತ್ತಾರೆ-
ವಿ.ಸುನಿಲ್ ಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

LEAVE A REPLY

Please enter your comment!
Please enter your name here