ತುಳು ಅಕಾಡೆಮಿಯ ಸದಸ್ಯರಾಗಿ ಕುಂಬ್ರ ದುರ್ಗಾ ಪ್ರಸಾದ್ ರೈ ನೇಮಕ

0

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ನ್ಯಾಯವಾದಿಯಾಗಿ ತುಳು ಸಾಹಿತಿ, ತುಳು ನಾಟಕ ರಚನೆಕಾರರಾಗಿ, ನಟರಾಗಿ, ತುಳು ಸಂಘಟಕರಾಗಿ ಗುರುತಿಸಿಕೊಂಡಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರು ಈ ಹಿಂದೆ 3 ವರ್ಷಗಳ ಕಾಲ ತುಳು ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ತುಳು ಕೂಟದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಕಾವು, ಪರ್ಪುಂಜ, ಕುಂಬ್ರ ಮತ್ತು ಪುತ್ತೂರುನಲ್ಲಿ ತುಳು ಸಮ್ಮೇಳನವನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಸವಣೂರುನಲ್ಲಿ ನಡೆದ ವಿಶ್ವ ತುಳುವೆರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುತ್ತೂರು ತಾಲೂಕಿನ ಸ್ವಾಗತ ಸಮಿತಿಯ ಪದಾಧಿಕಾರಿಯಾಗಿ, ಒಡಿಯೂರು ತುಳು ತೇರ್ ಒಯಿಪುಗ ಇದರ ಪುತ್ತೂರು ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಇವರ ಕಾಲೇಜು ದಿನಗಳಲ್ಲಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ತುಳು ಕೂಟ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ತುಳು ಸಂಘಟನೆಗಳಲ್ಲಿ ಅಲ್ಲದೆ ಇತರ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರು, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ, ಬಂಟರ ಮಾತೃ ಸಂಘದ ನಿರ್ದೇಶಕರಾಗಿ, ರಾಮಕೃಷ್ಣ ಕ್ರೆಡಿಟ್ ಕೋಅಪರೇಟಿವ್ಯ ಸೊಸೈಟಿಯ ಸದಸ್ಯರಾಗಿ, ರಾಮಕೃಷ್ಣ ಪ್ರೌಢಶಾಲಾ ಆಡಳಿತ ಮಂಡಳಿಯ ಸದಸ್ಯರಾಗಿ, ಕುಂಬ್ರ ಕೆಪಿಎಸ್ ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ, ಮಾಜಿ ಕಾರ್ಯಾಧ್ಯಕ್ಷರಾಗಿ, ಫಿಲೋಮಿನಾ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾಗಿ, ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾಗಿ, ಬಾಂದಪಲ್ಲು ಜನಸೇವಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿ, ಜೇಸಿ ವಲಯ ಅಧಿಕಾರಿಯಾಗಿ, ಒಳಮೊಗ್ರು ಕುಕ್ಕುಮುಗೇರ್ ಇರ್ವೆರ್ ಉಳ್ಳಾಕುಲು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.


ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಾದ ಪುಣಚ ಪರಿಯಾಲ್ತಡ್ಕದಲ್ಲಿ ಹಾಗೇ ಪ್ರೌಢ ಶಿಕ್ಷಣವನ್ನು ಪುಣಚ ದೇವಿನಗರ ಮತ್ತು ಪುತ್ತೂರು ಫಿಲೋಮಿನಾದಲ್ಲಿ, ಪಿಯುಸಿ ಶಿಕ್ಷಣವನ್ನು ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದಾರೆ. ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಪೂರೈಸಿದ್ದಾರೆ. 1988 ರಿಂದ ವಕೀಲ ವೃತ್ತಿ ಆರಂಭಿಸಿದ ಇವರು ಆರಂಭದಲ್ಲಿ ಸುಳ್ಯದಲ್ಲಿ ವಕೀಲ ವೃತ್ತಿ ಆರಂಭಿಸಿ ಬಳಿಕ ಪುತ್ತೂರಿನಲ್ಲಿ ಮುಂದುವರಿಸಿದ್ದಾರೆ.ಪ್ರಸ್ತುತ ಪುತ್ತೂರಿನಲ್ಲಿ ರೈ ಆಂಡ್ ಎಸೋಸಿಯೇಟ್ಸ್ ಎಂಬ ಕಛೇರಿಯನ್ನು ಹೊಂದಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಪತ್ನಿ ಹೀರಾ ಡಿ.ರೈ, ಪುತ್ರಿಯರಾದ ವಿಭಾ ರೈ ಮತ್ತು ಯಶ ರೈ ಜೊತೆ ಕುಂಬ್ರ ತರವಾಡು ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ತುಳು ನಾಟಕಗಳ ರಚನೆಕಾರ
ಕುಂಬ್ರ ದುರ್ಗಾಪ್ರಸಾದ್ ರೈಯವರು ಓರ್ವ ಅದ್ಭುತ ನಾಟಕ ರಚನೆಕಾರರಾಗಿದ್ದಾರೆ. ಇವರ ಸ್ವಾತಿದ ಬರ್ಸ, ಮುಗುರು ತೆಲಿಕೆ, ಕಾಕಜಿ ಬತ್ತ್ಂಡ್, ಮುಂಡಾಸ್ ಮುಂಡಪ್ಪೆ ಹಾಗೂ ಡೊಂಬರಾಟ ಪ್ರಸಿದ್ದ ತುಳು ನಾಟಕಗಳಾಗಿವೆ. ಇದರಲ್ಲಿ ಮುಗುರು ತೆಲಿಕೆ ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಹಾಗೆ ಕಾಕಜಿ ಬತ್ತ್ಂಡ್ ನಾಟಕಕ್ಕೆ ಅಂತರ್ ಜಿಲ್ಲಾ ಮಟ್ಟದ ನಾಟಕೋತ್ಸವದಲ್ಲಿ ಪ್ರಶಸ್ತಿ ಲಭಿಸಿದೆ. ಇದಲ್ಲದೆ ದುರ್ಗಾಪ್ರಸಾದ್‌ರವರಿಗೆ ಉತ್ತಮ ನಾಟಕ ರಚನೆ, ನಿರ್ದೇಶಕ ಹಾಗೇ ಉತ್ತಮ ನಟ ಪ್ರಶಸ್ತಿಯೂ ದೊರೆತಿದೆ. ಪ್ರಸಿದ್ದ ನಾಟಕಕಾರ ಶೇಕ್ಸ್‌ಫಿಯರ್‌ರವರ ಮರ್ಚೆಂಟ್ ಆಫ್ ವೆನಿಸ್ ಎಂಬ ಇಂಗ್ಲೀಷ್ ನಾಟಕವನ್ನು ‘ ಅಂತೋನಿ ಪುರ್ಬುಲೆ ಕಂತ್‌ದ ಬೇರ’ ಎಂಬ ತುಳುವಿಗೆ ಅನುವಾದಿಸಿದ್ದು ಇದು ಪೂವರಿ ತುಳು ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ. ಇದಲ್ಲದೆ ದೂರದರ್ಶನದಲ್ಲಿ ಪ್ರಸಾರಗೊಂಡ ರೈಟ್‌ಪೋಯಿ ಎಂಬ ತುಳು ಧಾರಾವಾಹಿಯ ನಿರ್ಮಾಣ ಸಹಾಯಕರಾಗಿ, ನಟರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಬಲೆ ತೆಲಿಪುಗ ಹಲವು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಹಲವು ಕಡೆಗಳಲ್ಲಿ ಸನ್ಮಾನಗಳು ಲಭಿಸಿದೆ.

LEAVE A REPLY

Please enter your comment!
Please enter your name here