ಮೊಟ್ಟೆತ್ತಡ್ಕ ಗೇರು ನಿರ್ದೇಶನಾಲಯದಲ್ಲಿ ಗೇರು ದಿನೋತ್ಸವ-ಹೊಸ ತಳಿ, ಹೊಸ ಉತ್ಪನ್ನ, ಪುಸ್ತಕಗಳ ಬಿಡುಗಡೆ

0

ಕೃಷಿಯಲ್ಲಿ ದುಡುಕಿನ ನಿರ್ಧಾರ ಸರಿಯಲ್ಲ-ಡಾ.ದಿನಕರ ಅಡಿಗ

ಪುತ್ತೂರು: ತೋಟಗಾರಿಕಾ ಬೆಳೆಗಳಲ್ಲಿ ಮಾರುಕಟ್ಟೆ ದರಗಳ ಏರಿಳಿತಗಳಿಂದ ಕೃಷಿಕರು ಗೊಂದಲಕ್ಕೊಳಗಾಗಿ ಬೆಳೆ ಹಾಗೂ ಬೇಸಾಯ ಪದ್ಧತಿಗಳನ್ನು ಆಗಾಗ ಬದಲಾಯಿಸುವಂತಹ ಪರಿಪಾಠ ಸಾಮಾನ್ಯವಾಗಿದೆ. ಆದರೆ ಇಂತಹ ತಾತ್ಕಾಲಿಕ ವ್ಯತಾಸಗಳಿಂದ ಗೊಂದಲಕ್ಕೊಳಗಾಗಿ ರೈತರು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವತ್ತೂ ಸರಿಯಲ್ಲವೆಂದು ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ದಿನಕರ ಅಡಿಗ ಅವರು ಹೇಳಿದರು.

ಮೊಟ್ಟೆತ್ತಡ್ಕದ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾ.16 ರಂದು ನಡೆದ ವಾರ್ಷಿಕ ಗೇರು ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಯಲ್ಲಿ ಮಿಶ್ರ ಬೆಳೆಯನ್ನು ಹೊಂದಿರಬೇಕು. ಗೇರು ಬೆಲೆ ವಿಸ್ತರಣೆ ಆಗಬೇಕು. ಬೆಳೆ ಸುಸ್ಥಿರವಾಗವೇಕಾದರೆ ಇಳುವರಿ ಹೆಚ್ಚು ಆಗಬೇಕು. ಹೊಸ ತಂತ್ರಜ್ಞಾನ ಬಳಸಿಕೊಂಡು ಅಧಿಕ ಇಳುವರಿ ಪಡೆಯಬಹುದು. ಹಲವು ಉದ್ದೇಗಳಿಂದ ಗೇರಿನ ಹೊಸ ತಳಿ ಅನ್ವೇಷಣೆ ಮಾಡಲಾಗಿದೆ. ಆರೋಗ್ಯ ಕರ ದೃಷ್ಟಿಯಿಂದ ಹೊಸ ಫ್ರುಟ್‌ಬಾರ್, ಬಿಸ್ಕೆಟ್ ಉತ್ಪನ್ನಗಳ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಮುಂದೆ ಡಯಾಬಿಟಿಸ್ ಪೂರಕವಾಗಿ ತಯಾರಿಸುವ ಯೋಜನೆಯಿದೆ. ಗೇರು ಹಣ್ಣಿಗೂ ಮೌಲ್ಯವರ್ದನೆ ಬಹು ಆವಶ್ಯಕ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಟ್ಲ ಸಿಪಿಸಿಆರ್‌ಐ ಪ್ರಾದೇಶಿಕ ಸಂಸ್ಥೆಯ ಮುಖ್ಯಸ್ಥ ಡಾ.ರಾಜೇಶ್ ಎಂ.ಕೆ ಮಾತನಾಡಿ, ಅಡಿಕೆ ಬೆಳೆಯ ವಿಸ್ತರಣೆಯಂತೆ ಇತರ ವಾಣಿಜ್ಯ ಬೆಳೆಗಳ ಬಗ್ಗೆ ಗಮನ ಹರಿಸಬೇಕು. ಗೇರು ಬೆಳೆಗೆ ಬೇಡಿಕೆಯಿದೆ. ಆದರೆ ಬೇಕಾದಷ್ಟು ಸರಬರಾಜು ಆಗುತ್ತಿಲ್ಲ. ಗೇರು ಬೆಳೆಯಲ್ಲಿ ಕಡಿಮೆ ವೆಚ್ಚ ಹಾಗೂ ಕನಿಷ್ಠ ನಿರ್ವಹಣೆಯಲ್ಲಿ ಅತೀ ಹೆಚ್ಚು ಇಳುವರಿ ಪಡೆಯಬಹುದು. ಅಡಿಕೆಯಷ್ಟು ನೀರಿನ ಆವಶ್ಯಕತೆಯಿಲ್ಲ. ಗೇರು ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೇರು ಹಣ್ಣಿನ ಹೊಸ ಉತ್ಪನ್ನ ಮಾಡಲಾಗುವುದು. ಅಡಿಕೆಯಂತೆ ಗೇರು ಬೆಳೆಯ ವಿಸ್ತರಣೆ ವೃದ್ಧಿಯಾಗಲಿ. ಯುವ ಜನತೆ ತೊಡಗಿಸಿಕೊಳ್ಳಬೇಕು ಎಂದರು.

ಚಿತ್ರದುರ್ಗದ ಚಲ್ಲಕೆರೆಯ ಪ್ರಗತಿ ಪರ ಗೇರು ಕೃಷಿಕ ರಾಮ್ ಕುಮಾರ್ ರಾಜರತ್ನಂ ಮಾತನಾಡಿ, ನಾನು ಅನಿರೀಕ್ಷಿತವಾಗಿ ಗೇರು ಕೃಷಿಕನಾಗಿದ್ದೇನೆ. ಡಿಸಿಆರ್ ಮೂಲಕ ಉತ್ತಮ ಮಾಹಿತಿ ಪಡೆದು ಇಲ್ಲಿನ ಎಲ್ಲಾ ತಳಿ ಮತ್ತು ಸಂಪನ್ಮೂಲಗಳನ್ನು ಮಾಡಿಕೊಂಡು ನೆಟ್ಟು ಬೆಳೆಸಲಾಗಿದೆ. ಈಗ ಉತ್ತಮ ಇಳುವರಿ ಪಡೆಯುತ್ತಿರುವುದಾಗಿ ಅವರು ತಿಳಿಸಿದರು.

ಹೊಸ ತಳಿ, ಉತ್ಪನ್ನ, ಪುಸ್ತಕಗಳ ಬಿಡುಗಡೆ:
ಕಾರ್ಯಕ್ರಮದಲ್ಲಿ ಹೊಸ ಗೇರಿನ ತಳಿ, ನೇತ್ರ ಜಂಬೋ-2 ನ್ನು ಬಿಡುಗಡೆ ಮಾಡಲಾಯಿತು. ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಾದ ಹಣ್ಣಿನ ಬಾರ್ ಮತ್ತು ಕುಕ್ಕೀಸ್‌ಗಳನ್ನು ಪರಿಚಯಿಸಿ ಬಿಡುಗಡೆಗೊಳಿಸಲಾಯಿತು. ಗೇರು ಬೆಳೆಯ ಭಿತ್ತಿ ಪತ್ರಿಕೆಗಳನ್ನು ಹಾಗೂ ಹನ್ನೊಂದು ಭಾಷೆಗಳಲ್ಲಿ ರಚಿಸಲಾಗಿರುವ ಸೌಖ್ಯಾ ಮೋಹನ್‌ರವರ ಗೇರು ಹಣ್ಣಿನ ಪಾಕ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಕೃಷಿ ಸಲಕರಣೆಗಳ ವಿತರಣೆ:
ಪ.ಜಾತಿ, ಪ.ಪಂಗಡ ಉಪಯೋಜನೆಯಲ್ಲಿ ಪ.ಜಾತಿ, ಪ.ಪಂಗಡದ ರೈತರಿಗೆ ಕೃಷಿ ಉಪಯೋಗಿ ಸಲಕರಣೆಗಳಾದ ಚೈನ್ ಸಾ ಹಾಗೂ ಬ್ರಶ್ ಕಟರ್ ವಿತರಿಸಲಾಯಿತು.

ಸನ್ಮಾನ:
ಗೇರು ಕೃಷಿಯಲ್ಲಿ ಸಾಧನೆ ಮಾಡಿದ ಚಿತ್ರದುರ್ಗದ ಚಲ್ಲಕೆರೆಯ ಪ್ರಗತಿ ಪರ ಗೇರು ಕೃಷಿಕ ರಾಮ್ ಕುಮಾರ್ ರಾಜರತ್ನಂರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಗೇರು ಸಂಶೋಧನಾ ಕೇಂದ್ರ, ಕೇರಳ ಕೃಷಿ ವಿಶ್ವವಿದ್ಯಾಲಯ, ಮಡಕ್ಕತರ, ಇದರ ಮುಖ್ಯಸ್ಥೆಯಾದ ಡಾ. ಜಲಜ ಎಸ್ ಮೆನನ್ ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ. ವೀಣಾ ಜಿ ಎಲ್. ಇವರು ಗೇರು ಹಣ್ಣಿನಲ್ಲಿ ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ರೈತರಿಗೆ ವಿವಿದ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದರು ಮತ್ತು ಅದರಿಂದ ಆದಾಯವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ವಿಜ್ಞಾನಿ ಡಾ. ಈರದಾಸಪ್ಪ ಸ್ವಾಗತಿಸಿದರು. ವಿಜ್ಞಾನಿ ಡಾ. ಭಾಗ್ಯ ವಂದಿಸಿದರು. ತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ.ಭಟ್ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here