ರಥ ಮಂದಿರದಿಂದ ಬ್ರಹ್ಮರಥ ಹೊರತರುವ ಮುಹೂರ್ತದೊಂದಿಗೆ ಪುತ್ತೂರು ಜಾತ್ರೆಗೆ ಮುನ್ಸೂಚನೆ – ರಥ ಕಟ್ಟುವ ಸ್ಥಳದಲ್ಲಿ ಬಿಲ್ವಪತ್ರೆ ಭೂಸ್ಪರ್ಶ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.18ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ. ಪ್ರತಿ ವರ್ಷದಂತೆ ರಥ ಕಟ್ಟುವ ಸ್ಥಳದಲ್ಲಿ ಬಿಲ್ವಪತ್ರೆ ಭೂಸ್ಪರ್ಶ ಮಾಡಿದೆ. ಈ ನಡುವೆ ಗರುಡವೊಂದು ಬಾನೆತ್ತರದಲ್ಲಿ ಹಾರುವ ಮೂಲಕ ಶುಭ ಸೂಚನೆ ನೀಡಿದೆ.

ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ, ಕಮಲವನ್ನು ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೇಶವಪ್ರಸಾದ್ ಮುಳಿಯ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ದೇವಳದ ನೌಕರರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ದೇವಳದ ನೌಕರರು ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಿದರು. ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು. ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಮಾಜಿ ಸದಸ್ಯ ಬಿ.ಐತ್ತಪ್ಪ ನಾಯ್ಕ್, ಉದ್ಯಮಿ ರಂಜಿತ್ ಬಂಗೇರ, ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ.ಗಣೇಶ್, ಕಚೇರಿ ಸಹಾಯಕ ಪದ್ಮನಾಭ, ನಿತ್ಯ ಕರಸೇವಕ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here