ನೂತನ ಕಟ್ಟಡಕ್ಕೆ ಕಾದಿರಿಸಲಾದ ರೂ.2 ಕೋಟಿ ಇತರ ಅಭಿವೃದ್ದಿ ಕಾಮಗಾರಿಗೆ ಹಂಚಿಕೆ?-ಪುತ್ತೂರು ನಗರಸಭೆಗೆ ನೂತನ ಕಟ್ಟಡ ಮರೀಚಿಕೆಯಾಯಿತೆ ?

0

ಪುತ್ತೂರು: ಪುತ್ತೂರು ನಗರಸಭೆಗೆ ನೂತನ ಕಟ್ಟಡ ಸಂಕೀರ್ಣ ನಿರ್ಮಿಸುವ 4 ವರ್ಷಗಳ ಹಿಂದಿನ ಯೋಜನೆ ಈಗ ಮರೀಚಿಕೆಯಾಗಿದೆ. ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಟ್ಟಡಕ್ಕೆ ಮೂಲಧನವಾಗಿ ಕಾದಿರಿಸಲಾಗಿದ್ದ 2 ಕೋಟಿ ರೂಪಾಯಿಗಳನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಲಾಗಿದ್ದು, ಈ ಮೂಲಕ ಕಟ್ಟಡ ನಿರ್ಮಾಣದ ಕನಸು ಕನಸಾಗಿಯೇ ಉಳಿಯುವಂತಾಗಿದೆ.

ಸಂಜೀವ ಮಠಂದೂರು ಶಾಸಕರಾಗಿದ್ದ ಅವಧಿಯಲ್ಲಿ ನಗರಸಭೆಗೆ ನೂತನ ಕಟ್ಟಡ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿತ್ತು.ಇದಕ್ಕಾಗಿ 14 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ, ಲೋಕೋಪಯೋಗಿ ಇಲಾಖೆ ಮೂಲಕ ನಕಾಶೆ ಸಿದ್ಧಪಡಿಸಲಾಗಿತ್ತು. 2020ರಲ್ಲಿ ಅಂದಿನ ಸಚಿವ ನಾರಾಯಣ ಗೌಡ ಪುತ್ತೂರಿಗೆ ಬಂದು ಹಳೆ ಪುರಸಭಾ ಆಡಳಿತ ಕಚೇರಿ ಕಟ್ಟಡದ ಜಾಗದಲ್ಲಿ ಶಿಲಾನ್ಯಾಸ ಮಾಡಿದ್ದರು. ಇದಕ್ಕಾಗಿಯೇ ಪುರಸಭೆಯ ಹಳೆಯ ಆಡಳಿತ ಕಚೇರಿಯನ್ನು ನೆಲಸಮ ಮಾಡಲಾಗಿತ್ತು.

ಸರಕಾರದಿಂದ ವಿಶೇಷವಾಗಿ ತರಿಸಲಾಗಿದ್ದ 5 ಕೋಟಿ ರೂ. ಅನುದಾನದಲ್ಲಿ 2 ಕೋಟಿ ರೂ.ಗಳನ್ನು ಕಟ್ಟಡ ಯೋಜನೆಗೆ ಮೀಸಲಿರಿಸಲಾಗಿತ್ತು. ಇದಲ್ಲದೆ ಹಿಂದಿನ ನಗರೋತ್ಥಾನ ಯೋಜನೆಯಲ್ಲಿ ಕಾದಿರಿಸಿದ್ದ 1 ಕೋಟಿ ರೂಪಾಯಿಯನ್ನೂ ಇದಕ್ಕೆ ನಿಗದಿ ಮಾಡಲಾಯಿತು. ಜತೆಗೆ ನಗರಸಭೆ ಸ್ವಂತ ನಿಧಿಯಿಂದ 1 ಕೋಟಿ ರೂ. ಬಳಸುವುದೆಂದು ನಿರ್ಧರಿಸಲಾಗಿತ್ತು. ಒಟ್ಟು 4 ಕೋಟಿ ರೂ. ಮೊತ್ತ ಸಿದ್ಧವಾಗಿತ್ತು. ಉಳಿದ 10 ಕೋಟಿ ರೂ.ಗಳನ್ನು ಸರಕಾರದಿಂದ ವಿಶೇಷ ಅನುದಾನ ರೂಪದಲ್ಲಿ ತರಲು ಸಂಜೀವ ಮಠಂದೂರು ಪ್ರಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಹೀಗಾಗಿ ಸೂಕ್ತ ಅನುದಾನದ ಲಭ್ಯತೆಯಿಲ್ಲದ ಕಾರಣ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿರಲಿಲ್ಲ. ಶಿಲಾನ್ಯಾಸ ನಡೆದು ವರ್ಷಗಳು ಉರುಳಿದರೂ ಕಾಮಗಾರಿ ಆರಂಭವಾಗಿರಲಿಲ್ಲ. 2004-05ರ ಅವಧಿಯಲ್ಲಿ ಆಗಿನ ಪುತ್ತೂರು ಪುರಸಭೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಎಡಿಬಿ ಯೋಜನೆಯಲ್ಲಿ ಚಾಲನೆ ನೀಡಲಾಗಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿದ್ದ ವಾರದ ಸಂತೆಯನ್ನು ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಕಳೆದ ಒಂದೂವರೆ ದಶಕದಿಂದ ಈ ಕಟ್ಟಡದಲ್ಲಿ ಪುತ್ತೂರು ಪುರಸಭೆ (ಈಗಿನ ನಗರಸಭೆ) ಕಾರ್ಯ ನಿರ್ವಹಿಸುತ್ತಿದೆ. ಇದರ ಹೊರತಾಗಿಯೂ ಇನ್ನೊಂದು ನೂತನ ಕಟ್ಟಡಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಅಶೋಕ್ ಕುಮಾರ್ ರೈ ಶಾಸಕರಾದ ಮೇಲೆ ಶಿಲಾನ್ಯಾಸ ನಡೆದ ಜಾಗವನ್ನು ಶಾಸಕರ ಕಚೇರಿಯ ಪಾರ್ಕಿಂಗ್ ಜಾಗವಾಗಿ ಬಳಸಿಕೊಂಡಿದ್ದಾರೆ. ಹಿಂದಿನ ಶಾಸಕರ ಅನುದಾನದ ಮೂಲಕ ಕಟ್ಟಡ ನಿಽಗೆಂದು ಮೀಸಲಿಟ್ಟಿದ್ದ ೨ ಕೋಟಿಯನ್ನು ನಗರಸಭಾ ವ್ಯಾಪ್ತಿಯ ನಾನಾ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದು, 4 ದಿನಗಳ ಹಿಂದೆ ಶಿಲಾನ್ಯಾಸ ಮಾಡಲಾಗಿದೆ.

ಎಸ್ ಎಫ್ ಸಿ ಅನುದಾನವಾಗಿದ್ದ 2 ಕೋಟಿ ರೂಪಾಯಿಗಳನ್ನು ನಗರಸಭೆ ನೂತನ ಕಟ್ಟಡಕ್ಕೆ ಮೀಸಲಿರಿಸಲಾಗಿತ್ತು. ಹಾಲಿ ಶಾಸಕರು ಈ ಮೊತ್ತವನ್ನು ಬದಲಾವಣೆ ಮಾಡಿದ್ದು, ನಗರಸಭೆಯ 45 ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ.
ಮಧು ಎಸ್. ಮನೋಹರ್, ಪುತ್ತೂರು ನಗರಸಭೆ ಪೌರಾಯುಕ್ತರು

  • ನಗರಸಭೆಯ ಕಟ್ಟಡ ಯೋಜನೆ ಈಗ ರದ್ದುಗೊಂಡಿರುವುದು ಗೊತ್ತಾಗುತ್ತಿದೆ. ಈ ರೀತಿ ಅನುದಾನ ಬದಲಾವಣೆ ಮಾಡುವಾಗ ಶಾಸಕರು ಕನಿಷ್ಠ ಪಕ್ಷ ಕೌನ್ಸಿಲರ್‌ಗಳ ಗಮನಕ್ಕೆ ತರಬೇಕಿತ್ತು. ಏಕಾಏಕಿ ಮಾಡಿದ್ದು ಸರಿಯಲ್ಲ.
  • -ಜೀವಂಧರ ಜೈನ್, ನಗರಸಭೆಯ ನಿಕಟಪೂರ್ವ ಅಧ್ಯಕ್ಷರು

LEAVE A REPLY

Please enter your comment!
Please enter your name here