ಶಾಸಕ ಹರೀಶ್ ಪೂಂಜರಿಂದ ಸುದ್ದಿ ಬಿಡುಗಡೆ ವರದಿಗಾರರಿಗೆ ಬೆದರಿಕೆ, ಪತ್ರಿಕೆ ಬಹಿಷ್ಕರಿಸಲು ಕರೆ-ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದ ಶಾಸಕರ ನಡೆ ಖಂಡಿಸಬೇಕು, ರಕ್ಷಣೆ ಒದಗಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗ ಆಗ್ರಹ

0

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅರಣ್ಯ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರ ಸಹಿತ ಸತ್ಯ ವರದಿ ಪ್ರಕಟಿಸಿದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರನ್ನು ನಿಂದಿಸಿ, ಬೆದರಿಕೆ ಹಾಕಿ ಪತ್ರಿಕೆಯನ್ನು ಬಹಿಷ್ಕರಿಸಲು ಸಾರ್ವಜನಿಕವಾಗಿ ಜನರಿಗೆ ಕರೆ ನೀಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿರುವ ಶಾಸಕ ಹರೀಶ್ ಪೂಂಜ ಅವರ ನಡೆಯನ್ನು ಖಂಡಿಸಬೇಕು ಮತ್ತು ನಮ್ಮ ಪತ್ರಿಕಾ ಬಳಗಕ್ಕೆ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸುದ್ದಿ ಬಿಡುಗಡೆಯ ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಆಗ್ರಹಿಸಿದ್ದಾರೆ.


ಮಂಗಳೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಐದಾರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಚಿನಡ್ಕದಲ್ಲಿ ನಿರ್ಮಾಣ ಹಂತದ ಮನೆಯೊಂದನ್ನು ಅರಣ್ಯ ಇಲಾಖೆ ತನ್ನ ಜಾಗವೆಂದು ತೆರವುಗೊಳಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲೆಯ ಬಿಜೆಪಿ ಶಾಸಕರೆಲ್ಲ ಸೇರಿ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಅವರ ಪ್ರತಿಭಟನೆಗೆ, ಸಂತ್ರಸ್ತರಿಗೆ ಬೆಂಬಲ ನೀಡಿತ್ತು. ಈಗಲೂ ನಮ್ಮ ಪತ್ರಿಕಾ ಬಳಗ ಸಂತ್ರಸ್ತರ ಪರವಾಗಿಯೇ ವರದಿಗಳನ್ನು ಪ್ರಕಟಿಸುತ್ತಿದ್ದು, ಇದಕ್ಕೆ ಶಾಸಕ ಹರೀಶ್ ಪೂಂಜರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಂತೋಷ್ ಕುಮಾರ್ ಹೇಳಿದರು.


ದಾಖಲೆ ಸಹಿತ ವರದಿ:
ಶಾಸಕ ಹರೀಶ್ ಪೂಂಜರ ಬೇಡಿಕೆಯಂತೆ ಲೋಲಾಕ್ಷ ಅವರ ಮನೆ ಇರುವ ಜಾಗ ಸಹಿತ ಕಳೆಂಜ ಗ್ರಾಮದ ಅರಣ್ಯ ಪ್ರದೇಶದ ಸರ್ವೇ ಕೆಲತಿಂಗಳ ಹಿಂದೆ ಆರಂಭಗೊಂಡಿತ್ತು. ವಿವಾದಿತ ಪ್ರದೇಶದ ಸರ್ವೇ ಆಧರಿಸಿ ಅರಣ್ಯ ಇಲಾಖೆಯು ಈ ವರ್ಷದ ಜ.12ರಂದು ಕಳೆಂಜ ಗ್ರಾಮ ಪಂಚಾಯತ್‌ಗೆ ಪತ್ರ ಬರೆದಿತ್ತು. ಅದರಲ್ಲಿ 94 ಒತ್ತುವರಿದಾರರನ್ನು ಗುರುತಿಸಿ, ಅವರಿಗೆ ಗ್ರಾಪಂನಿಂದ ನೀಡಲಾಗಿರುವ ಸವಲತ್ತುಗಳ ವಿವರವನ್ನು ಕೋರಲಾಗಿತ್ತು. ಈ ಪತ್ರದ ಮಾಹಿತಿಯನ್ನು ಫೆಬ್ರವರಿಯಲ್ಲಿ ನಡೆದ ಸಾಮಾನ್ಯ ಸಭೆಗೆ ಪಿಡಿಒ ತಿಳಿಸಿದ್ದರೂ, ಗ್ರಾಮಸ್ಥರಿಗೆ ಮಾಹಿತಿ ಇರಲಿಲ್ಲ. ಈ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯು ಮಾಹಿತಿ ಹಕ್ಕು ಮೂಲಕ ಪತ್ರವನ್ನು ಪಡೆದು, ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಪ್ರಕಟಿಸುವ ಮೊದಲು ಶಾಸಕ ಹರೀಶ್ ಪೂಂಜ ಅವರ ಅಭಿಪ್ರಾಯ ಕೇಳಿದ್ದೆವು. ಈ ಕುರಿತು ಮೊದಲು ಮಾಹಿತಿ ಪಡೆಯುತ್ತೇನೆ ಎಂದಷ್ಟೇ ಶಾಸಕರು ಉತ್ತರಿಸಿದ್ದರು. ನಾವು ಅರಣ್ಯ ಇಲಾಖೆಯು ಒತ್ತುವರಿಯೆಂದು ಗುರುತಿಸಿರುವ ಜಾಗದಲ್ಲಿ ವಾಸಿಸುತ್ತಿರುವ ಜನರನ್ನು ಮಾತನಾಡಿಸಿ, ಅವರ ಆತಂಕವನ್ನು ವರದಿಯಲ್ಲಿ ಬರೆದಿದ್ದೆವು. ಸ್ವತಃ ಲೋಲಾಕ್ಷ ಅವರ ಒತ್ತುವರಿ ಜಾಗದಲ್ಲಿ ಹಳೇ ಮನೆಯ ಕುರುಹು ಇರುವ ಕುರಿತು ಚಿತ್ರ ಸಹಿತ ವರದಿ ಮಾಡಿದ್ದೆವು ಎಂದು ಸಂತೋಷ್ ವಿವರಿಸಿದರು.


ವರದಿಗಾರರಿಗೆ ಶಾಸಕರಿಂದ ಬೆದರಿಕೆ:
ಸುದ್ದಿ ಬಿಡುಗಡೆಯ ವರದಿ ಫಲಶ್ರುತಿಯಾಗಿ ಶಾಸಕ ಹರೀಶ್ ಪೂಂಜ ಅವರು ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಸಂತ್ರಸ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡುವ ಬದಲು, ವರದಿ ಮಾಡಿದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಪತ್ರಿಕೆ ಮತ್ತು ವರದಿಗಾರರನ್ನು ಅವಾಚ್ಯವಾಗಿ ನಿಂದಿಸಿ, ಅರಣ್ಯ ಇಲಾಖೆಯ ಏಜೆಂಟ್, ರಾಜಕೀಯ ಏಜೆಂಟ್ ಎಂದೆಲ್ಲ ಆರೋಪಿಸಿದರು. ಅಲ್ಲದೆ, ಪತ್ರಿಕೆಯನ್ನು ಕಳೆಂಜ ಮಾತ್ರವಲ್ಲ, ಬೆಳ್ತಂಗಡಿ ತಾಲೂಕಿನಿಂದಲೇ ಬಹಿಷ್ಕರಿಸಬೇಕು. ಜಾಹೀರಾತು ನೀಡಬಾರದು ಎಂದು ಹೇಳಿದರು. ಈ ವೇಳೆ ಸಭೆಯಲ್ಲಿದ್ದ ಪತ್ರಿಕೆಯ ವರದಿಗಾರರು, ತಾವು ಅಧಿಕೃತ ಮಾಹಿತಿಯನ್ನು ಆಧರಿಸಿ ವರದಿ ಮಾಡಿದ್ದೇವೆ, ಈ ಕುರಿತು ಪಿಡಿಒ, ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸುವುದು ಸೂಕ್ತ ಎಂದು ತಿಳಿಸಿದರೂ ಕೇಳದೆ, ಪತ್ರಿಕೆಯ ವರದಿಗಾರರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸುವಂತೆ ಪ್ರಚೋದಿಸುವ ರೀತಿಯಲ್ಲಿ ಶಾಸಕರು ಭಾಷಣ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ಹೇಳಿದರು.


ಅತ್ಯಧಿಕ ಪ್ರಸಾರ ಅಭಿಮಾನ:
ಸುದ್ದಿ ಬಿಡುಗಡೆ ಪತ್ರಿಕೆ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ ಪ್ರಸಾರ ಹೊಂದಿರುವ ವಾರಪತ್ರಿಕೆ. ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಿಂತ 10 ಪಟ್ಟು ಹೆಚ್ಚು ಪ್ರಸರಣ ಸಂಖ್ಯೆ ನಮ್ಮ ಪತ್ರಿಕೆ ಹೊಂದಿದೆ. ಶಾಸಕರು ಜಾಹೀರಾತು ಕೊಡಬೇಡಿ, ಪತ್ರಿಕೆಯನ್ನು ಓದಬೇಡಿ ಎಂದು ಹೇಳಿರುವ ಹೊರತಾಗಿಯೂ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಜನರು ಕೈಬಿಟ್ಟಿಲ್ಲ. ಹೆಚ್ಚೆಚ್ಚು ಜನರು ಓದುತ್ತಿದ್ದಾರೆ, ಜಾಹೀರಾತು ಕೊಡುತ್ತಿದ್ದಾರೆ. ಇದು ನಮಗೆ ಅಭಿಮಾನದ ಸಂಗತಿ ಎಂದು ಸಂತೋಷ್ ಕುಮಾರ್ ಹೇಳಿದರು.
ವರದಿಗಾರ ಮಂಜುನಾಥ ರೈ ಸುದ್ದಿಗೋಷ್ಠಿಯಲ್ಲಿದ್ದರು.

ರಾಜಕೀಯ ಪಕ್ಷದ ಪರ ಅಥವಾ ವಿರೋಧ ನಾವಲ್ಲ-ಸಂತೋಷ್ ಕುಮಾರ್
ಕಳೆದ 38 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆ ವಾರಪತ್ರಿಕೆ ಪ್ರಕಟವಾಗುತ್ತಿದೆ. ಪುತ್ತೂರಿನಲ್ಲಿ ದಿನಪತ್ರಿಕೆಯಾಗಿ ಹಾಗೂ ಸುಳ್ಯದಲ್ಲಿ ವಾರಪತ್ರಿಕೆಯಾಗಿ ಸಮಾಜಮುಖಿ ವರದಿಗಳಿಂದ ಜನಮಾನಸದಲ್ಲಿ ನೆಲೆಸಿದೆ. ಮುದ್ರಣದ ಜತೆಗೆ ದೃಶ್ಯ ಹಾಗೂ ವೆಬ್ ಮಾಧ್ಯಮದಲ್ಲೂ ಸುದ್ದಿ ಸಮೂಹ ಹೆಸರು ಮಾಡಿದೆ. ಮೂರೂ ತಾಲೂಕುಗಳಲ್ಲಿ ಮಾಧ್ಯಮ ಮಿತ್ರರ ಸಹಕಾರ, ಪ್ರೋತ್ಸಾಹ ಹಾಗೂ ಓದುಗರ ಬೆಂಬಲದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ. ಹರೀಶ್ ಪೂಂಜ ಬೆಳ್ತಂಗಡಿ ಶಾಸಕರಾಗುವ ಮೊದಲು ಮತ್ತು ನಂತರವೂ ಅವರ ಅಭಿವೃದ್ಧಿಪರ ಕಾರ್ಯ ಚಟುವಟಿಕೆಗಳ ವರದಿಗಳನ್ನು ನಿರಂತರವಾಗಿ ಪತ್ರಿಕೆ ಪ್ರಕಟಿಸುತ್ತಿದೆ. ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಾಗಿ ಸುದ್ದಿ ಬಿಡುಗಡೆ ಪತ್ರಿಕೆ ಕೆಲಸ ಮಾಡುವುದಿಲ್ಲ ಎಂದು ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಸ್ಪಷ್ಟಪಡಿಸಿದರು.

ಇಲಾಖೆಯನ್ನು ಪ್ರಶ್ನಿಸಲಿ-ದಾಮೋದರ ದೊಂಡೋಲೆ
ಕಳೆಂಜದಲ್ಲಿ ಜಂಟಿ ಸರ್ವೇ ಆಗಬೇಕೆಂಬುದು ಶಾಸಕ ಹರೀಶ್ ಪೂಂಜ ಅವರದ್ದೇ ಬೇಡಿಕೆಯಾಗಿತ್ತು. ಅದರಂತೆ ಜಂಟಿ ಸರ್ವೇ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಂಟಿ ಸರ್ವೇ ಸಮರ್ಪಕವಾಗಿ ನಡೆದಿಲ್ಲವೆಂದರೆ ಅದನ್ನು ಇಲಾಖೆಯವರಲ್ಲಿ ಪ್ರಶ್ನೆ ಮಾಡಬೇಕಲ್ಲವೇ? ವರದಿ ಪ್ರಕಟಿಸಿದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪ್ರಶ್ನೆ ಮಾಡಿದರೆ ಹೇಗೆ? ನಾವು ಆರೋಗ್ಯಕರ ಟೀಕೆಯನ್ನು ಸ್ವೀಕರಿಸುತ್ತೇವೆ. ವರದಿಗಾರರಿಗೆ ಬೆದರಿಕೆ ಹಾಕುವುದನ್ನೂ ಸಹಿಸಿಕೊಳ್ಳಬೇಕೇ ಎಂದು ಸುದ್ದಿ ಸಂಪಾದಕ ಭುವನೇಂದ್ರ ಪ್ರಶ್ನಿಸಿದರು.

ಶಾಸಕರು ಪಿಡಿಒ ಮತ್ತು ಅರಣ್ಯಾಧಿಕಾರಿಗಳ ಸಭೆ ಮಾಡಬೇಕಿತ್ತು
ಅರಣ್ಯ ಇಲಾಖೆಯು 94 ಮಂದಿಯನ್ನು ಒತ್ತುವರಿದಾರರು ಎಂದು ಗುರುತಿಸಿರುವುದು ಅವರ ಪತ್ರದಲ್ಲಿ ಉಲ್ಲೇಖವಾಗಿದೆ. ಅದನ್ನು ಜನವರಿಯಲ್ಲೇ ಗ್ರಾಪಂಗೆ ಕೊಟ್ಟಿದ್ದರು. ಫೆ.21ರಂದು ಸಾಮಾನ್ಯ ಸಭೆಗೂ ಪಿಡಿಒ ಮಾಹಿತಿ ನೀಡಿದ್ದರು. ಇದೊಂದು ಗಂಭೀರ ಪತ್ರವಾಗಿದ್ದರೂ, ಜನರಿಗೆ ಮಾಹಿತಿ ಇರಲಿಲ್ಲ. ನಾವು ಮಾಹಿತಿ ಹಕ್ಕಿನಲ್ಲಿ ಪಡೆದು ಯಥಾವತ್ ವರದಿ ಮಾಡಿದ್ದೇವೆ. ಈ ಕುರಿತು ಶಾಸಕರು ಅರಣ್ಯಾಧಿಕಾರಿಗಳು ಮತ್ತು ಪಿಡಿಒ ಮತ್ತಿತರರನ್ನು ಸಭೆಗೆ ಕರೆಸಬೇಕಿತ್ತು. ಈ ಪತ್ರದ ವಿಚಾರ ಏನು? ಏಕೆ ಬರೆಯಲಾಗಿದೆ? 94 ಕುಟುಂಬಗಳಿಗೆ ಸಂಬಂಽಸಿದ ಮಾಹಿತಿಯನ್ನು ಅರಣ್ಯ ಇಲಾಖೆಗೆ ಕೊಟ್ಟರೆ ಏನಾಗಬಹುದು? ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಜನರಿಗೆ ಮನವರಿಕೆ ಮಾಡಬೇಕಿತ್ತು. ಇದು ನಮ್ಮ ಬೇಡಿಕೆ ಮಾತ್ರವಲ್ಲ, ಗ್ರಾಮಸ್ಥರ ಬೇಡಿಕೆಯೂ ಆಗಿತ್ತು. ಆದರೆ, ಶಾಸಕರು ಅದನ್ನು ಮಾಡದೆ ಸಂತ್ರಸ್ತರ ಹೆಸರಿನಲ್ಲಿ ಸಭೆ ನಡೆಸಿ ಸುದ್ದಿ ಬಿಡುಗಡೆ ಪತ್ರಿಕೆಯನ್ನು ನಿಂದಿಸುವುದು, ವರದಿಗಾರರನ್ನು ಬೆದರಿಸುವ ಕೆಲಸ ಮಾಡಿದ್ದಾರೆ ಎಂದು ಸುದ್ದಿ ಬಿಡುಗಡೆ ಚಾನಲ್ ಹೆಡ್ ದಾಮೋದರ ದೊಂಡೋಲೆ ಹೇಳಿದರು.

ಜಂಟಿ ಸರ್ವೇ ಶಾಸಕರದ್ದೇ ಬೇಡಿಕೆ
ಲೋಲಾಕ್ಷ ಅವರ ಮನೆಯನ್ನು ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾದಾಗ ಶಾಸಕ ಹರೀಶ್ ಪೂಂಜ ತಡೆದ ಸಂದರ್ಭ, ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಾದರೆ ನಾನೇ ತೆರವು ಮಾಡಿಸುತ್ತೇನೆ ಎಂದು ಸ್ವತಃ ಶಾಸಕರೇ ಹೇಳಿದ್ದರು. ಜಂಟಿ ಸರ್ವೇ ನಡೆಯಬೇಕು ಎಂದೂ ಬೇಡಿಕೆ ಇಟ್ಟಿದ್ದರು. ಇದು ಎಲ್ಲ ಮಾಧ್ಯಮಗಳಲ್ಲೂ ಅಂದು ವರದಿಯಾಗಿತ್ತು. ಈಗ 94 ಮಂದಿಯ ಲಿಸ್ಟ್ ಬಂದಾಗ ಶಾಸಕರು ನನಗೆ ಗೊತ್ತಿಲ್ಲ ಎಂದಿದ್ದಾರೆ. ಜನವರಿಯಲ್ಲಿ ಗ್ರಾಪಂಗೆ ಪತ್ರ ಬಂದರೂ ಜನರಿಗೆ ತಿಳಿಸಿರಲಿಲ್ಲ. ಸಾಮಾನ್ಯ ಸಭೆಗೆ ಗೊತ್ತಿದ್ದರೂ ಚರ್ಚೆ ಮಾಡಲಿಲ್ಲ. ನಾವು ಅದನ್ನು ಜನರ ಹಿತಾಸಕ್ತಿಗೋಸ್ಕರ ವರದಿ ಮಾಡಿದ್ದೇವೆ. ಸುದ್ದಿ ಬಿಡುಗಡೆ ವರದಿ ಸರಿಯಾಗಿದೆ, ವರದಿಯಿಂದಲೇ ಈ ಬೆಳವಣಿಗೆ ತಿಳಿಯಿತು ಎಂದು ಸಭೆಯಲ್ಲಿ ವೇದಿಕೆಯಲ್ಲಿದ್ದವರ ಸಹಿತ ಗ್ರಾಮಸ್ಥರು, ಸಂತ್ರಸ್ತರು ಅಭಿಪ್ರಾಯ ನೀಡಿರುವ ವಿಡಿಯೋ ದಾಖಲೆ ನಮ್ಮಲ್ಲಿದೆ. ಜನರ ಅಭಿಪ್ರಾಯಗಳನ್ನು ನಾವು ಪ್ರಕಟಿಸಿದ್ದೇವೆ. ನಾವು ಯಾವುದೇ ರಾಜಕೀಯ ಮಾಡಿಲ್ಲ. ಆದರೂ ಸಭೆಯಲ್ಲಿ ಪತ್ರಿಕೆಯ ವರದಿಯನ್ನು ಶಾಸಕ ಹರೀಶ್ ಪೂಂಜ ಖಂಡಿಸಿದ್ದು, ಜನರ ವಿರುದ್ಧ ಬರೆದಿದ್ದೇವೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಪತ್ರಿಕೆಯನ್ನು ಬಹಿಷ್ಕರಿಸಬೇಕೆಂದು ಶಾಸಕರು ಜನರಿಗೆ ಕರೆ ನೀಡಿದ್ದಾರೆ. ಇದರ ಹೊರತಾಗಿಯೂ ಪತ್ರಿಕೆಯ ಪ್ರಸರಣ ಸಂಖ್ಯೆ ಹೆಚ್ಚಳವಾಗಿದೆ. ಜನರು ಹರೀಶ್ ಪೂಂಜ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂತೋಷ್ ವಿವರಣೆ ನೀಡಿದರು.

ಶಾಸಕ ಹರೀಶ್ ಪೂಂಜ ಕ್ಷಮೆ ಯಾಚಿಸುವಂತೆ ಕ್ರಮಕ್ಕೆ ಆಗ್ರಹ:
ಓರ್ವ ಜನಪ್ರತಿನಿಧಿ, ಹೈಕೋರ್ಟ್ ವಕೀಲರಾಗಿದ್ದ ಶಾಸಕ ಹರೀಶ್ ಪೂಂಜ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸದೆ ವರದಿಗಾರರಿಗೆ ಬೆದರಿಕೆ ಹಾಕಿದ್ದಾರೆ. ಆ ಘಟನೆಯಿಂದಾಗಿ ವರದಿಗಾರರ ಸಹಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ಭಯವನ್ನುಂಟು ಮಾಡಿದೆ. ಶಾಸಕರ ಆಕ್ರಮಣಕಾರಿ ವರ್ತನೆಯಿಂದ ನೋವಾಗಿದೆ. ಗುಂಪು ಹಲ್ಲೆಗೆ ಪ್ರಚೋದಿಸುವಂಥ ವ್ಯವಸ್ಥಿತ ಷಡ್ಯಂತ್ರ, ವರದಿಗಾರರಿಗೆ ಬೆದರಿಕೆ ಹಾಕಿರುವುದು ಮತ್ತು ಪತ್ರಿಕೆಯನ್ನು ಬಹಿಷ್ಕರಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟಿರುವುದನ್ನು ಖಂಡಿಸಿ, ಶಾಸಕರು ಕ್ಷಮೆ ಯಾಚಿಸುವಂತೆ ಮಾಡಬೇಕು. ಸುದ್ದಿ ಬಿಡುಗಡೆ ಪತ್ರಿಕೆಯ ಎಲ್ಲ ವರದಿಗಾರರು ಮತ್ತು ಸಿಬ್ಬಂದಿಗೆ ರಕ್ಷಣೆ ಕೊಡಬೇಕು ಎಂದು ನಿರ್ಣಯ ಮಾಡಬೇಕು ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿರುವ ಮಂಜುನಾಥ ರೈ ಮತ್ತು ಜಾರಪ್ಪ ಪೂಜಾರಿ ಅವರ ಮೂಲಕ ಮನವಿ ನೀಡಲಾಗಿದೆ ಎಂದು ಸಂತೋಷ್ ತಿಳಿಸಿದರು.

ಬಹಿರಂಗ ಚರ್ಚೆಗೆ ಆಹ್ವಾನ
ಜನರಿಗೆ ಸಮಸ್ಯೆ ಆಗಬಾರದು, ಅವರಿಗೆ ರಕ್ಷಣೆ ಸಿಗಲೇಬೇಕು ಎಂದು ನಾವು ವರದಿಯಲ್ಲಿ ಹೇಳಿದ್ದೆವು. ಬಳಿಕ ಶಾಸಕರು ಸಂತ್ರಸ್ತರ ಸಭೆ ನಡೆಸಿ, ಸುಪ್ರೀಂ ಕೋರ್ಟ್ ವರೆಗೆ ಹೋಗುವುದಾದರೂ ನಾನೇ ಖರ್ಚು ಭರಿಸುತ್ತೇನೆ, ಹೋರಾಟ ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಲೋಲಾಕ್ಷ ಅವರ ಪರವಾಗಿ ಮಾತ್ರ ಇದ್ದ ಶಾಸಕರು ನಮ್ಮ ವರದಿಯ ನಂತರ ಎಲ್ಲ 94 ಸಂತ್ರಸ್ತರ ಪರವಾಗಿ ನಿಂತು, ಕಾನೂನು ಹೋರಾಟದ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಇದು ನಮ್ಮ ಪತ್ರಿಕೆಯ ವರದಿಯ ನಿಜವಾದ -ಲಶ್ರುತಿ. ನಮ್ಮ ವರದಿಗೆ ಸ್ಪಂದಿಸಿ ಸಭೆ ನಡೆಸಿರುವುದಕ್ಕೆ, ಜನರಿಗೆ ಬೆಂಬಲವಾಗಿ ನಿಂತಿರುವುದಕ್ಕೆ ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅದರ ಕ್ರೆಡಿಟ್ ಪೂಂಜರೇ ಇಟ್ಟುಕೊಳ್ಳಲಿ, ನಮಗೆ ಬೇಡ. ನಮ್ಮದು ಪತ್ರಿಕೆ, ನಾವು ಜನಪರ ವರದಿಗಳನ್ನು ಪ್ರಕಟಿಸುತ್ತೇವೆ. ರಾಜಕೀಯ ನಮಗೆ ಬೇಡ, ಅದು ಜನಪ್ರತಿನಿಧಿಗಳ ಕೆಲಸ. ಹರೀಶ್ ಪೂಂಜ ವರದಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೋ ಅಥವಾ ದುರುದ್ದೇಶ ಇಟ್ಟುಕೊಂಡು ಹೇಳಿದ್ದಾರೋ ಎಂಬುದು ನಮಗೆ ಗೊತ್ತಿಲ್ಲ. ಅವರ ಆರೋಗ್ಯಕರ ಟೀಕೆಯನ್ನು ನಾವು ಸ್ವೀಕರಿಸುತ್ತೇವೆ. ನಮ್ಮ ವರದಿಯಲ್ಲಿ ಏನು ತಪ್ಪಾಗಿದೆ ಎಂದು ತಿಳಿಸಿದರೆ ತಿದ್ದಿಕೊಳ್ಳುತ್ತೇವೆ. ನಮ್ಮ ಕಡೆಯಿಂದ ಲೋಪವಾಗಿದ್ದರೆ ಕ್ಷಮೆ ಯಾಚಿಸಲೂ ಸಿದ್ಧರಿದ್ದೇವೆ. ಬಹಿರಂಗ ಚರ್ಚೆಗೆ ಬರುವಂತೆಯೂ ಆಹ್ವಾನಿಸಿದ್ದೇವೆ. ಈಗ ಪತ್ರಕರ್ತರ ಮೂಲಕವೂ ಅದನ್ನೇ ಮನವಿ ಮಾಡುತ್ತಿದ್ದೇವೆ, ಶಾಸಕರೊಂದಿಗೆ ಸಂವಾದ ಏರ್ಪಡಿಸಿದರೆ ಅವರ ಸಂಶಯಗಳನ್ನು ನಿವಾರಿಸಲು ನಾವು ಸಿದ್ಧರಿದ್ದೇವೆ ಎಂದು ಸಂತೋಷ್ ತಿಳಿಸಿದರು.

LEAVE A REPLY

Please enter your comment!
Please enter your name here