ಪುತ್ತೂರು: ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.21ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಗ್ರಾಮದ ಎಲ್ಲಾ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮಾ.31ರಂದು ಆಮಂತ್ರಣ ವಿತರಣೆಯ ಮನೆ ಮನೆ ಸಂಪರ್ಕಿಸುವ ಮಹಾ ಅಭಿಯಾನ ನಡೆಯಲಿದೆ ಎಂದು ಸಿದ್ದತಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯು ಮಾ.26ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಆಮಂತ್ರಣ ವಿತರಣೆಯ ಕುರಿತು ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಮುಕ್ತಾಯದ ಹಂತ ತಲುಪುತ್ತಿದೆ. ಗ್ರಾಮದ ದೇವಸ್ಥಾನದ ಬ್ರಹ್ಮಕಲಶದಲ್ಲಿ ಪ್ರತಿ ಮನೆಯವರನ್ನು ಜೋಡಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮದ ಪ್ರತಿ ಮನೆಗಳಿಗೂ ಆಮಂತ್ರಣ ತಲುಪಿಸಲಾಗುವುದು. ಆಮಂತ್ರಣ ಪತ್ರಿಕೆಯು ಇನ್ನೆರಡು ದಿನದಲ್ಲಿ ತಲುಪಲಿದೆ. ಆಮಂತ್ರಣ ನೀಡಿದ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುವುದು. ವಿತರಣೆಗೆ ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ. ಆಯಾ ವಲಯಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸಲಾಗುವುದು ಎಂದ ಅವರು ದೇವಸ್ಥಾನದ ಹೊರಾಂಗಣಕ್ಕೆ ಇಂಟರ್ ಲಾಕ್ ಅಳವಡಿಸಬೇಕು ಎಂದು ಅಭಿಪ್ರಾಯ ಬಂದಿದ್ದು ಭಕ್ತಾದಿಗಳು ಆರ್ಥಿಕ ನೆರವು, ಸಹಕಾರ ಯಾಚಿಸಿದರು.
25 ಕಡೆಗಳಲ್ಲಿ 25 ತಂಡಗಳಲ್ಲಿ ವಿತರಣೆ:
ಆಮಂತ್ರಣ ಪತ್ರಿಕೆಯನ್ನು ಗ್ರಾಮದಲ್ಲಿ ಪ್ರತಿ ಮನೆಗಳಿಗೆ ತಲುಪಿಸಲು ಗ್ರಾಮದ ಪ್ರಮುಖ 25 ಕಡೆಗಳಲ್ಲಿ 25 ತಂಡಗಳ ಮೂಲಕ ಆಮಂತ್ರಣ ವಿತರಣೆಯ ಮಹಾ ಅಭಿಯಾನ ಮೂಲಕ ಮನೆ ಮನೆಗಳನ್ನು ಸಂಪರ್ಕಿಸಲಾಗುವುದು. ದೇಣಿಗೆ ನೀಡಿದವರ ನಿರ್ವಹಣೆಗೆ ಹಾಗೂ ದೇಣಿಗೆ ಸಲ್ಲಿಸುವವರಿಗಾಗಿ ದೇವಸ್ಥಾನದ ಕಾರ್ಯಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಶಾಮಿಯಾನ, ಸೌಂಡ್ಸ್, ಲೈಟಿಂಗ್, ಅಡುಗೆ ಕೆಲಸ ಮೊದಲಾದವುಗಳನ್ನು ಕೊಟೇಶನ್ ಪಡೆದುಕೊಂಡು ಕಡಿಮೆ ದರ ಹಾಗೂ ಗುಣಮಟ್ಟಕ್ಕೆ ಹೊಂದಿಕೊಡು ನೀಡಲಾಗಿದ್ದು ಎಲ್ಲವೂ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದರು.ಬ್ರಹ್ಮಕಲಶೋತ್ಸವದ ಮುಂದಿನ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಉಪ ಸಮಿತಿಗಳ ಜವಾಬ್ದಾರಿ ಬಗ್ಗೆ ತಿಳಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಸತೀಶ್ ಎ.ಪಿ., ಸಂಜೀವ ಪೂಜಾರಿ ಕೂರೇಲು, ಕೋಶಾಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ರಾಮ ಭಟ್ ಮಚ್ಚಿಮಲೆ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಸಂಚಾಲಕ ಸುಧಾಕರ ರಾವ್ ಆರ್ಯಾಪು, ವೈದಿಕ ಸಮಿತಿ ಸಂಚಾಲಕ ಸಂದೀಪ್ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ವಂದಿಸಿದರು.