ಬಿಜೆಪಿಯ ಕ್ಯಾ| ಬ್ರಿಜೇಶ್ ಚೌಟ, ಕಾಂಗ್ರೆಸ್ನ ಪದ್ಮರಾಜ್, ಕೆಆರ್ಎಸ್ನ ರಂಜಿನಿ, ಕರುನಾಡ ಸೇವಕರ ಪಾರ್ಟಿಯ ದುರ್ಗಾಪ್ರಸಾದ್, ಜೆಡಿಯುನ ಸುಪ್ರೀತ್, ಉತ್ತಮ ಪ್ರಜಾಕೀಯ ಪಾರ್ಟಿಯ ಮನೋಹರ್, ಸ್ವತಂತ್ರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೋ ನಾಮಪತ್ರ ಸಲ್ಲಿಕೆ
ಪುತ್ತೂರು: ಎಪ್ರಿಲ್ 26ರಂದು ನಡೆಯಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಕ್ಯಾ| ಬ್ರಿಜೇಶ್ ಚೌಟ, ಕಾಂಗ್ರೆಸ್ನ ಪದ್ಮರಾಜ್ ಆರ್., ಕೆಆರ್ಎಸ್ನ ರಂಜಿನಿ ಎಂ, ಕರುನಾಡ ಸೇವಕರ ಪಾರ್ಟಿಯ ದುರ್ಗಾಪ್ರಸಾದ್, ಜೆಡಿಯು ಮತ್ತು ಜನಹಿತ ಪಕ್ಷದ ಸುಪ್ರಿತ್ ಕುಮಾರ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಇ. ಮನೋಹರ್ ಮತ್ತು ಸ್ವತಂತ್ರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೋ ನಾಮಪತ್ರ ಸಲ್ಲಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿಗಳೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಎಪ್ರಿಲ್ 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಎ.8 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ನಾಮಪತ್ರ ಸಲ್ಲಿಸಿದವರಲ್ಲಿ ಪದ್ಮರಾಜ್ ಹಿರಿಯರು – ದುರ್ಗಾಪ್ರಸಾದ್ ಕಿರಿಯರು:
ದ.ಕ. ಕ್ಷೇತ್ರದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಕಾಂಗ್ರೆಸ್ನ ಪದ್ಮರಾಜ್ರವರು ಹಿರಿಯ ವ್ಯಕ್ತಿಯಾಗಿದ್ದಾರೆ. ಕರುನಾಡ ಸೇವಕರ ಪಾರ್ಟಿಯ ಅಭ್ಯರ್ಥಿಯಾಗಿರುವ ಮಂಗಳೂರು ತಾಲೂಕು ಕೆಂಜಾರು ಕರೋಡಿಯ ದುರ್ಗಾಪ್ರಸಾದ್ರವರು ಕಿರಿಯವರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಂಗಳೂರು ರಥಬೀದಿಯ ಮಹಮ್ಮಾಯ ದೇವಸ್ಥಾನದ ಬಳಿಯ ಸೋನಾರ್ ಅಪಾರ್ಟ್ಮೆಂಟ್ನ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ 42 ವರ್ಷವಾಗಿದೆ. ಮಂಗಳೂರು ಕಂಕನಾಡಿಯ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಕಪಿತಾನಿಯೋ ಶಾಲಾ ಬಳಿಯ ಲಲಿತ್ರಾಮ್ ನಿವಾಸಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ ಅವರಿಗೆ 53 ವರ್ಷವಾಗಿದೆ. ಕೆಎಆರ್ಎಸ್ನ ಅಭ್ಯರ್ಥಿಯಾಗಿರುವ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಮೊಟ್ಟೆಮನೆಯ ರಂಜಿನಿ ಎಂ. ಅವರಿಗೆ 39 ವರ್ಷವಾಗಿದೆ. ಕರುನಾಡ ಸೇವಕರ ಪಾರ್ಟಿಯ ಅಭ್ಯರ್ಥಿಯಾಗಿರುವ ಮಂಗಳೂರು ತಾಲೂಕು ಕೆಂಜಾರು ಕರೋಡಿಯ ದುರ್ಗಾಪ್ರಸಾದ್ರವರಿಗೆ 33 ವರ್ಷವಾಗಿದೆ. ಜನತಾದಳ(ಸಂಯುಕ್ತ) ಮತ್ತು ಜನಹಿತ ಪಕ್ಷದ ಅಭ್ಯರ್ಥಿಯಾಗಿರುವ ಮಂಗಳೂರು ಕಾವೂರಿನ ಸುಪ್ರೀತ್ ಕುಮಾರ್ ಪೂಜಾರಿ ಕಟೀಲ್ ಅವರಿಗೆ 47 ವರ್ಷವಾಗಿದೆ. ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿಯಾಗಿರುವ ಕೆ.ಇ. ಮನೋಹರ್ ಅವರು ಬಂಟ್ವಾಳ ತಾಲೂಕಿನ ಅಳಿಕೆಯ ಮಡಿಯಾಳ ನಿವಾಸಿಯಾಗಿದ್ದು ಇವರಿಗೆ 47 ವರ್ಷ ವಯಸ್ಸಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿರುವ ಮಂಗಳೂರು ಉಳ್ಳಾಲದ ಪೆರ್ಮನ್ನೂರು ಹೊಸಗುಡ್ಡೆ ನಿವಾಸಿ ದೀಪಕ್ ರಾಜೇಶ್ ಕುವೆಲ್ಲೋರವರಿಗೆ 49 ವರ್ಷವಾಗಿದೆ.