ನೆಲ್ಯಾಡಿ: ಪೆರಿಯಶಾಂತಿ-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಗೆ ಸೇರಿದ, ರಾಷ್ಟ್ರೀಯ ಹೆದ್ದಾರಿ ಬದಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಸೈನ್ ಬೋರ್ಡ್ಗಳನ್ನು ಪಿಕಪ್ ವಾಹನವೊಂದಕ್ಕೆ ತುಂಬಿಸಿ ಸಾಗಾಟ ಮಾಡಲು ಮುಂದಾಗಿದ್ದ ಮೂವರು ಆರೋಪಿಗಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಯ ಸಿಬ್ಬಂದಿಯೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಎ.4ರಂದು ರಾತ್ರಿ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ಆಲೂರು ಹೊಸಹಳ್ಳಿಯ ಪುಟ್ಟಸ್ವಾಮಿ ಎಂಬವರ ಪುತ್ರ ಜ್ಯೋತಿಷ್(25ವ.), ನಿಂಗರಾಜು ಎಂಬವರ ಪುತ್ರ ಮೋಹನ್ಕುಮಾರ್(23ವ.)ಹಾಗೂ ಆಲೂರು ತೊರಗರವಳ್ಳಿ ನಿವಾಸಿ ಪಾಪಯ್ಯ ಎಂಬವರ ಪುತ್ರ ಗಣೇಶ (23ವ.) ಕಳವಿಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ.


ಇವರು ಎ.4ರಂದು ರಾತ್ರಿ 8 ಗಂಟೆಗೆ ಅಡ್ಡಹೊಳೆಯಲ್ಲಿ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದ್ದ 3 ಸೈನ್ ಬೋರ್ಡ್ಗಳನ್ನು ಕಳವುಗೈದು ಮಹೀಂದ್ರ ಪಿಕ್ಅಪ್ (ಕೆಎ02 ಎಸಿ 9426)ವಾಹನಕ್ಕೆ ಲೋಡ್ ಮಾಡುತ್ತಿದ್ದ ವೇಳೆ ರೌಂಡ್ಸ್ನಲ್ಲಿದ್ದ ಪೆರಿಯಶಾಂತಿ-ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಎಸ್.ಎಂ ಔತಾಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಅಡ್ಮಿನ್ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ನಿವಾಸಿ ಸಂಗಮ್ನಾಥ್ ಹಾಗೂ ಸಿಬ್ಬಂದಿ ಸಂಚಿತ್ ಪವಾರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಮೂವರು ಆರೋಪಿಗಳನ್ನು ಅವರ ವಾಹನ ಹಾಗೂ ಕಳವು ಮಾಡಿದ 3 ಸೈನ್ ಬೋರ್ಡ್ಗಳನ್ನು ಔತಾಡ್ ಸಂಸ್ಥೆಯ ಸಿಬ್ಬಂದಿಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಕಳವಿಗೆ ಯತ್ನಿಸಿದ್ದ 3 ಸೈನ್ ಬೋರ್ಡ್ ಗಳ ಮೌಲ್ಯ 9 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಕಲಂ: 379,511 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

