ಕಡಬ: ಪೆರಾಬೆ ಗ್ರಾಮದ ಪಟ್ಟೆಗುತ್ತು ನಿವಾಸಿ, ಬಿಜೆಪಿ ಹಿರಿಯ ಕಾರ್ಯಕರ್ತ ಹರಿಶ್ಚಂದ್ರ ರೈ(81ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.5ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಹರಿಶ್ಚಂದ್ರ ರೈ ಅವರು ಜನಸಂಘ, ಆ ಬಳಿಕ ಬಿಜೆಪಿಯಲ್ಲಿ ತೊಡಗಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 30ವರ್ಷದ ಹಿಂದೆ ಆಲಂಕಾರಿನಲ್ಲಿ ಸಣ್ಣ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಅವರು ಆ ಬಳಿಕ ವ್ಯಾಪಾರ ಕೈ ಬಿಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ ಚಂದ್ರಾವತಿ, ಮುಂಬೈಯಲ್ಲಿ ಉದ್ಯಮಿಯಾಗಿರುವ ಪುತ್ರ ಪ್ರಕಾಶ್ ರೈ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ದ.ಕ.ಜಿಲ್ಲಾ ಎಸ್‌ಟಿ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಪೆರಾಬೆ-ಕುಂತೂರು ಶಕ್ತಿಕೇಂದ್ರದ ಪ್ರಮುಖ್ ಜನಾರ್ದನ ಶೆಟ್ಟಿ, ಪೆರಾಬೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮೋಹನ್‌ದಾಸ್ ರೈ, ಚಂದ್ರಶೇಖರ ರೈ ಅಗತ್ತಾಡಿ, ತಾ.ಪಂ.ಮಾಜಿ ಸದಸ್ಯೆ ಯಶೋಧ ಯು.ಕೆ.ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ಪ್ರಶಾಂತ್ ರೈ ಮನವಳಿಕೆಗುತ್ತು, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಆಲಂಕಾರು, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಸುರುಳಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮ್‌ಮೋಹನ ರೈ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.