ಮೂಲ ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಂಡು ಬಂದ ಹರಿಸೇವೆ – ಗೌಡ ಕುಟುಂಬದ ತರವಾಡು ಮನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ

0

ಪುತ್ತೂರು: ಗಣಪತಿ ಹವನ, ದುರ್ಗಾಪೂಜೆ, ಸತ್ಯನಾರಾಯಣ ಪೂಜೆ, ಶನೀಶ್ಚರ ಪೂಜೆ, ವಾಸ್ತು ಪೂಜೆ, ಸುದರ್ಶನ, ಚಂಡಿಕಾ ಹೋಮಾದಿಗಳು ವೈದಿಕರ ನೇತೃತ್ವದಲ್ಲಿ ನಡೆಯುತ್ತದೆ. ಈ ಎಲ್ಲಾ ವೈದಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ನಾವು ಭಾಗವಹಿಸಿದ್ದು ಇದೆ. ಆದರೆ ತೀರಾ ಪುರಾತನ ಕಾಲದಿಂದ ಕುಟುಂಬಕ್ಕೆ ಸೀಮಿತ ಪೂಜೆಯಾಗಿ ’ಹರಿ ಸೇವೆ’ಯು ಪ್ರತಿ ತರವಾಡು ಕುಟುಂಬದಲ್ಲಿ ನಡೆಯುತ್ತದೆಯದರೂ ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಗ್ರಾಮೀಣ ಸಂಪ್ರದಾಯದ ಸೊಗಡಿನಲ್ಲಿ ತಿರುಪತಿ ತಿಮ್ಮಪ್ಪನ ಪ್ರೀತ್ಯರ್ಥ ನಡೆಯುವ ಸಂಪ್ರದಾಯಬದ್ಧವಾದ ಸಂಭ್ರಮದ ಆಚರಣೆಯೇ ’ಹರಿಸೇವಾ ಕಾರ್ಯ’ ಇದು ಬಹಳ ವಿಶೇಷತೆ ಪಡೆದಿದೆ. ಇಲ್ಲಿ ದಾಸಯ್ಯ ಸಮುದಾಯದಾಯವರು ಹರಿಸೇವೆ ನೇತೃತ್ವ ವಹಿಸುವುವೇ ವಿಶೇಷ. ಕನಕಮಜಲು ಗ್ರಾಮದ ಕುದ್ಕುಳಿ ತರವಾಡು ಮನೆಯಲ್ಲೂ ಎ.4ರಂದು ಹರಿಸೇವೆ ನಡೆಯಿತು.


ಗೌಡ ಜನಾಂಗದವರು ಹಿಂದಿನಿಂದಲೂ ಕುಲದೇವರಾದ ಶ್ರೀ ವೆಂಕಟರಮಣ ದೇವರಿಗೆ ಈ ಹರಿಸೇವೆಯನ್ನು ಆಚರಿಸುತ್ತಾ ಬಂದಿದ್ದಾರೆ. ಗೌಡ ಜನಾಂಗದ ಪ್ರತೀ ಕುಟುಂಬಕ್ಕೂ ಐನ್‌ಮನೆ(ಮೂಲ ಮನೆ) ಎಂಬುದು ಇರುತ್ತದೆ. ಕುಟುಂಬದಿಂದ ತಿರುಮಪತಿ ಶ್ರೀ ವೆಂಕಟರಮಣದ ದೇವರಿಗೆ ಹರಿಕೆ ಹಣವನ್ನು ಮುಡುಪುನಲ್ಲಿಟ್ಟು(ಭಂಡಾರ ಪೆಟ್ಟಿಗೆ) ಬೀಗಮುದ್ರಿಸಿ ಐನ್ ಮನೆಯ ಉಪ್ಪರಿಗೆ(ಅಟ್ಟ)ಯಲ್ಲಿ ಯಾರ ಕೈಗೂ ಎಟುಕದಂತೆ ನೇತು ಹಾಕುತ್ತಾರೆ. ಇದಕ್ಕೆ ಕಾರಣ ಮುಡಿಪಿಗೆ ಮೈಲಿಗೆ ಆಗಬಾರದು, ಸೂತಕದವರು ಮುಟ್ಟಬಾರದು ಎಂಬ ಉದ್ದೇಶ. ಸದ್ರಿ ’ಮುಡಿಪು ಹಣಕ್ಕೆ’ ವರ್ಷಕ್ಕೆ ಒಮ್ಮೆ ವೈದಿಕರ ಮೂಲಕ ಪೂಜೆ ಸಲ್ಲಿಸಿ ದೇವರನ್ನು ಆರಾಧಿಸಲಾಗುತ್ತದೆ. ಪ್ರತಿ ಮೂರು ವರ್ಷ ಅಥವಾ ಐದು ವರ್ಷಕ್ಕೊಮ್ಮೆ ಕುಟುಂಬದ ತರವಾಡು ಮನೆಯಲ್ಲಿ ದೈವಗಳ ನೇಮ ನಡಾವಳಿ ನಡೆಯುವಾಗ ಮುಡಿಪು ಪೂಜೆ ಮಾಡಿ ತಿರುಪತಿಗೆ ತೆರಳಿ ಸಮರ್ಪಣೆ ಮಾಡಿ ನಂತರ ಮೂಲ ಮನೆಯಲ್ಲಿ ಮುಡಿಪು ತುಂಬಿಸುವ ’ಹರಿಸೇವೆ’ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ಹರಿಸೇವೆಯ ಬಳಿಕ ಸಂಜೆಯಿಂದ ನೇಮ ನಾಡವಳಿ ಆರಂಭಗೊಳ್ಳುತ್ತದೆ. ಹರಿಸೇವೆಯ ಕಾರ್ಯಕ್ರಮಕ್ಕೆ ಶ್ರೀ ವೆಂಕಟರಮಣ ದೇವರಿಗೆ ಪ್ರಕೃತಿಯಿಂದಲೇ ಪಡೆದ ಸುವಸ್ತುಗಳಿಂದ ಗುಂಡ ನಿರ್ಮಾಣ, ಅಲಂಕಾರ ನಡೆಯುತ್ತದೆ. ಮಡಿವಾಳ ಸಮುದಾಯದವರು ಶ್ರೀ ಗುಂಡದ ಮೇಲ್ಭಾಗದಲ್ಲಿ ಬಟ್ಟೆ(ಕೊಡಿಇಡಿ) ಕಟ್ಟುವುದು. 5 ವೀಲ್ಯದ ಎಲೆ, ಅಡಿಕೆ ಕಟ್ಟುವ ಕ್ರಮವಿದೆ. ಕುಟುಂಬದ ಐವರಿಗೆ ಮಡಿಬಟ್ಟೆ ಕೊಡುವ ಕ್ರಮವಿದೆ. ಇದರ ಜೊತೆಗೆ ಶ್ರೀ ವೆಂಕಟರಮಣ ದೇವರ ಪೂಜೆಯ ಸಂದರ್ಭ ದಾಸಯ್ಯನವರು ಶಂಖ ಊದಿ ಗೊವಿಂದ ಹೇಳಿದ ಬಳಿಕ ದರ್ಶನ ಪಾತ್ರಿ ದರ್ಶನದ ಮೂಲಕ ನಡಿಗಟ್ಟು ಹೇಳುತ್ತಾರೆ. ಕುದ್ಕುಳಿ ತರವಾಡು ಮನೆಯಲ್ಲಿ ಉಮೇಶ್ ಕಳ್ಳಪಳ್ಳಿಯವರು ದರ್ಶನ ಪಾತ್ರಿಯಾಗಿದ್ದರು. ಕುದ್ಕುಳಿ ತರವಾಡು ಕುಟುಂಬದ ಯಜಮಾನ ಶಿವರಾಮ ಮಾಸ್ಟ್ರ್, ತರವಾಡು ಮನೆಯ ಯಜಮಾನ ಶೇಷಪ್ಪ ಗೌಡ ಸಹಿತ ಕುಟುಂಬದ 14 ಮನೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ವೆಂಕಟರಮಣ ದೇವರ ಧನನಿಧಿಯಾದ ’ಮುಡಿಪು’ ಅದಕ್ಕೆ ಇನ್ನಷ್ಟು ಸೇರಿಸಿ ಮನೆಯಲ್ಲಿ ಲಕ್ಷ್ಮೀ ಅಕ್ಷಯವಾಗಿ ಬರಲಿ ಎಂದು ಕುಟುಂಬದವರು ಒಟ್ಟಿಗೆ ಸೇರಿ ವಿಷ್ಣು ಸ್ಮರಣೆ ಮಾಡುವ ಅಪರೂಪದ ಕಾರ್ಯವೇ ಹರಿಸೇವೆ. ದೇವಕಾರ್ಯ ಮಾಡಿದಾಗ ಅದು ಹರಿಸೇವೆ ಇಲ್ಲಂದ್ರೆ ಮುಡಿಪು ಪೂಜೆ ಎಂದು ಹೇಳುತ್ತಾರೆ. ಹರಿಸೇವೆ ಸಂದರ್ಭ ಮುಡಿಪಿಗೆ ಕರಿಮೆಣಸು, ನಾಣ್ಯಗಳನ್ನು ಹಾಕುತ್ತಾರೆ. ಯಾಕೆಂದರೆ ಕರಿಮೆಣಸು ಎಷ್ಟು ವರ್ಷ ಕಳೆದರೂ ಅದಕ್ಕೆ ಬೆಲೆ ಇದೆ. ಅದೆ ರೀತಿ ನಾಣ್ಯ ಎಷ್ಟು ವರ್ಷ ಕಳೆದರೂ ಕೆಡುವುದಿಲ್ಲ ಎಂಬ ಪ್ರತೀತಿ ಇದೆ.


ತಿಮ್ಮಪ್ಪನಿಗೆ ಪ್ರಕೃತಿಯ ಒಡಲ ಬಾಳೆದಂಡಿನ ಗುಂಡ
ಹರಿಸೇವೆಯ ಸಂದರ್ಭ ಶ್ರೀ ವೆಂಕಟರಮಣ ದೇವರಿಗೆ ಪ್ರಕೃತಿಯಲ್ಲಿ ಸಿಗುವ ಬಾಳೆ ದಂಡಿನ ಗುಂಡ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ಮಂಟಪ ಸಿದ್ಧದಗೊಳಿಸಲು ೧೨ ಕೋಲುಗಳು ಬೇಕು. ಗುಂಡ ನಿರ್ಮಾಣ ಮಾಡಿದ ಬಳಿಕ ಕುಟುಂಬದ ಐದು ಮಂದಿ ಗಂಗೆ ಸ್ನಾನ ಮಾಡಿ ಬರುವ ಕ್ರಮವಿದೆ. ಅದರ ಬಳಿಕ ದೇವರ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಕುಟುಂಬದ ಎಲ್ಲರಿಗೂ ನಾಮ ಹಾಕಿ ಕುಟುಂಬದ ತರವಾಡು ಮನೆಯಿಂದ ಮುಡಿಪನ್ನು ತಂದು ದೇವರ ಮುಂದೆ ಇಡಲಾಗುತ್ತದೆ. ಈ ಸಂದರ್ಭ ಪಾನಕ ಪೂಜೆ, ಹಣ್ಣುಕಾಯಿ ಪೂಜೆ ನಡೆಯುತ್ತದೆ. ಆಗ ದರ್ಶನ ಪಾತ್ರಿಗಳಿಂದ ದರ್ಶನ ಸೇವೆ ನೀಡುತ್ತಾರೆ. ಆಗ ದರ್ಶನ ಪಾತ್ರಿ ನುಡಿಗಟ್ಟು ನೀಡುತ್ತಾರೆ. ಕುಟುಂಬದವರು ಯತಾನುಶಕ್ತಿ ಮುಡಿಪಿಗೆ ನಾಣ್ಯ ಮತ್ತು ಕರಿಮೆಣಸು ಹಾಕಿ ಅದನ್ನು ತರವಾಡು ಮನೆಯಲ್ಲಿ ಕಟ್ಟಿ ಮುಸ್ಸಂಜೆ ಹೊತ್ತಿಗೆ ದೈವಗಳ ಭಂಡಾರ ತಂದು ದೈವಗಳ ನೃತ್ಯ ಸೇವೆ ನಡೆಯುತ್ತದೆ. ಕೆಲವು ಕುಟುಂಬದಲ್ಲಿ ಮೂರು ಮುಡಿಪು ಇರುತ್ತದೆ. ಎರಡು ಮುಡಿಪಿನಲ್ಲಿ ಸಬ್ಬಮ್ಮ ದೇವಿಗೆ ಮುಡಿಪು ಕಟ್ಟುವ ಪದ್ಧತಿ ಇದೆ. ಪೆರಾಜೆ, ಕಳ್ಳಪಳ್ಳಿ, ಚೆಂಬು, ಬಾಳೆಂಬಿ ಕಡೆಯಲ್ಲಿ ವೆಂಕಟರಮಣ ದೇವರಿಗೆ ಪೂಜೆ ಆದ ಬಳಿಕ ಶ್ರೀ ದೇವರ ಗದ್ದಿಗೆ ಕಾಯುವ ಬಲಗೈ ಬಂಟ ಎಂಬ ನಂಬಿಕೆಯಿರುವ ಕೆಂಚಿರಾಯನಿಗೆ ಭೇಟೆ ಕೊಡುವ ಕಾರ್ಯಕ್ರಮ ಸಂಜೆ ನಡೆಯುತ್ತದೆ. ಈ ಕ್ರಮ ಎಲ್ಲಾ ಮನೆತನದಲ್ಲಿ ಇರುವುದಿಲ್ಲ. ನಿಗದಿತ ಮನೆತನದವರಿಗೆ ಮಾತ್ರ ಕೆಂಚಿರಾಯನ ಆರಾಧನೆ ಇರುವುದು.
ದೀಪಕ್, ದಾಸಯ್ಯ

ಸಮುದಾಯದಲ್ಲಿ ಪೂಜೆ ಮಾಡುವವರು ಕಡಿಮೆ:
ತೊಡಿಕಾನ ಜಾತ್ರೆ ಸಂದರ್ಭ ಶ್ರೀ ದೇವರ ಬಲಿಯ ಸಂದರ್ಭ ಪೂರ್ವ ಹಿರಿಯರ ಕಾಲದಿಂದಲೂ ನಮಗೆ ಅಲ್ಲಿ ಶಂಖ ಸೇವೆ ನೀಡಲಿದೆ. ಹಿಂದೆ ಅಜ್ಜ ಮಾಡಿಕೊಂಡು ಬರುತ್ತಿದ್ದು, ಅದರ ಬಳಿಕ ನನ್ನ ತಂದೆ. ಈಗ ನಾನು ಆ ಕ್ರಮವನ್ನು ಮುಂದುವರಿಸಿದ್ದೇನೆ. ಸಂಪಾಜೆಯಿಂದ ಸುಳ್ಯ ತಾಲೂಕಿನ ಹಲವು ಕಡೆಗಳಿಗೆ ಹೋಗುತ್ತಿದ್ದೇವೆ. ನಮ್ಮ ಸಮುದಾಯದಲ್ಲಿ ಪೂಜೆ ಮಾಡುವವರು ಇವತ್ತು ಕಡಿಮೆ ಇದ್ದಾರೆ. ಸುಳ್ಯದಲ್ಲಿ ಒಟ್ಟು ನಾಲ್ವರು ಮಾತ್ರ ಇರುವುದು. ನಾವು ಹೊಂದಾಣಿಕೆಯಲ್ಲಿ ಸೇವೆ ನೀಡುತ್ತಿದ್ದೇವೆ.

ದೀಪಕ್ ದಾಸಯ್ಯ

LEAVE A REPLY

Please enter your comment!
Please enter your name here