ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿ ಹೊಟೇಲ್ ಉದ್ಯಮಿ ಬೆಳಿಯಪ್ಪ ಗೌಡ (86) ಕೊಡೆಂಕೀರಿ ಕನಕಮಜಲುರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಎ.7ರಂದು ನಿಧನರಾದರು. ಇವರು ಕಳೆದ 50 ವರ್ಷಗಳಿಂದ ಪೆರ್ಲಂಪಾಡಿಯಲ್ಲಿ ತರಕಾರಿ ಹೊಟೇಲ್ ನಡೆಸುತ್ತಿದ್ದರು. ಯಕ್ಷಗಾನ ಕಲಾವಿದರೂ, ವೇಷಧಾರಿಯೂ ಜನಮನ್ನಣೆ ಗಳಿಸಿದ್ದವರು. ಪೆರ್ಲಂಪಾಡಿಯಲ್ಲಿ ಯಕ್ಷಗಾನ ಕಲಾ ಕೂಟವನ್ನು ಆರಂಭಿಸುವ ಮೂಲಕ ಯಕ್ಷಗಾನ ತಾಳಮದ್ದಳೆ ಕಲಿಸುತ್ತಿದ್ದರು.
ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಇವರು ದಿ.ಅಂತಪ್ಪ ಶೆಟ್ಟಿಯವರ ಕಾಲದಿಂದಲೇ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿದ್ದು ಪಕ್ಷದ ಮೀಟಿಂಗ್,ಸಭೆ ಇವರ ಹೊಟೇಲ್, ಮನೆಯಲ್ಲಿ ನಡೆಯುತ್ತಿತ್ತು. ಬೆಳ್ಳಿಯಪ್ಪ ಗೌಡ ರವರು ಪಂಚಾಂಗ ಶಾಸ್ತ್ರದಲ್ಲಿಯೂ ಪರಿಣತರಾಗಿದ್ದರು.
ಮೃತರು ಪತ್ನಿ ತಾರಾವತಿ, ಪುತ್ರರಾದ ಗುರುಪ್ರಸಾದ್ ಮತ್ತು ನಿವೃತ್ತ ಸೈನಿಕ, ಪ್ರಸ್ತುತ ಪೊಲೀಸ್ ಆಗಿರುವ ಹರಿಪ್ರಸಾದ್, ಸೊಸೆಯಂದಿರಾದ ಶ್ರೀದೇವಿ,ವನಿತಾ ಮತ್ತು ಮೊಮ್ಮಕ್ಕಳು ಹಾಗೂ ಸಹೋದರರಾದ ಶೀನಪ್ಪ ಮತ್ತು ಕೂಸಪ್ಪ, ಸಹೋದರಿಯರಾದ ಶೇಷಮ್ಮ ಮತ್ತು ಪಾರ್ವತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.