ಪುತ್ತೂರು: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಿರುದ್ಧ ಶ್ರೀರಂಗಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಹಾಜರಾಗಲು ಮತ್ತು ಪ್ರಕರಣ ನಡೆಸಲು ಹಿರಿಯ ವಕೀಲ ಎಸ್.ಬಾಲಕೃಷ್ಣನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ಕರ್ನಾಟಕ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಎ.8ರಂದು ತಡೆಯಾಜ್ಞೆ ನೀಡಿದೆ.
ತನ್ನ ವಿರುದ್ಧ ದಾಖಲಾಗಿರುವ ಕೇಸ್ನಲ್ಲಿ ವಕೀಲ ಎಸ್.ಬಾಲಕೃಷ್ಣನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಡಾ. ಪ್ರಭಾಕರ ಭಟ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅರ್ಜಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿ ಬಾಲಕೃಷ್ಣನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಿ ಸರಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹೈಕೋರ್ಟ್ನಲ್ಲಿ ಹಿರಿಯ ನ್ಯಾಯವಾದಿ ಅರುಣ್ಶ್ಯಾಮ್ ಪುತ್ತೂರು ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್ ಹೇರಳೆ ಪುತ್ತೂರು ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು.