ಪುತ್ತೂರು:ಸವಣೂರಿನಲ್ಲಿ ಸಂಬಂಧಿಕರ ಮಧ್ಯೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.ಪಂಚಾಯತ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರತಿದೂರು ದಾಖಲಾಗಿದೆ.
ಸವಣೂರು ಗ್ರಾಮದ ಪ್ರಕಾಶ ಎಂ ಎಂಬವರು ದೂರು ನೀಡಿ, ತನ್ನ ತಂದೆ ಕೃಷ್ಣಪ್ಪ ಗೌಡರಿಗೆ ಹಾಗೂ ಪ್ರಕರಣದ ಆರೋಪಿ ದಯಾನಂದರವರಿಗೆ ರಸ್ತೆಯ ವಿಚಾರದಲ್ಲಿ ತಕರಾರಿದ್ದು,ಏ.10 ರಂದು ರಾತ್ರಿ ತನ್ನ ತೋಟದಲ್ಲಿ ಹಳೇಯ ಬೋರ್ವೆಲ್ ಕೆಲಸ ಮಾಡುತ್ತಿದ್ದಾಗ, ಆರೋಪಿ ದಯಾನಂದ ಮತ್ತು ಆತನ ಪತ್ನಿ, ನನ್ನ ತಂದೆಯಲ್ಲಿ ರಸ್ತೆಯ ವಿಚಾರದಲ್ಲಿ ತಕರಾರು ಮಾಡಿ ಜೀವಬೆದರಿಕೆ ಒಡ್ಡಿರುತ್ತಾರೆ.ಆ ವೇಳೆ ಆರೋಪಿ ದಯಾನಂದ ಹಾಗೂ ಆತನ ಪತ್ನಿಯನ್ನು, ನಾನು ಮತ್ತಿತರರು ಸಮಾಧಾನಿಸಿ ಸ್ಥಳದಿಂದ ಕಳುಹಿಸಿದ್ದೆವು.ಪ್ರಕರಣ ಮುಂದುವರಿದು ಏ.11ರ ರಾತ್ರಿ ತಂದೆ ಕೃಷ್ಣಪ್ಪ ಗೌಡರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಅಲ್ಲಿಯೇ ಅಡಗಿ ಕುಳಿತಿದ್ದ ಆರೋಪಿ ದಯಾನಂದರವರು ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ.ಹಲ್ಲೆಯಿಂದ ಗಾಯಗೊಂಡ ತಂದೆಯವರನ್ನು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆಎಂದು ತಿಳಿಸಿದ್ದಾರೆ.ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 36/2024)ಕಲಂ 506.307.324.504 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಪ್ರತಿದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿ ಗ್ರಾ.ಪಂ.ಸಿಬ್ಬಂದಿ ದಯಾನಂದ(42ವ.)ರವರು ಕೃಷ್ಣಪ್ಪ ಗೌಡ ಹಾಗು ಪ್ರಕಾಶ್ರವರ ವಿರುದ್ದ ಪ್ರತಿದೂರು ನೀಡಿದ್ದಾರೆ.ಅವರು ನೀಡಿದ್ದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮೇಲಿನ ಎರಡೂ ಪ್ರಕರಣಗಳು ತನಿಖೆಯಲ್ಲಿರುತ್ತವೆ ಎಂದು ಬೆಳ್ಳಾರೆ ಪೊಲೀಸರು ಮಾಹಿತಿ ನೀಡಿದ್ದಾರೆ.