ಪುತ್ತೂರು:ಸ್ಕೂಟರೊಂದು ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದು ಸಹಸವಾರ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಪೆರುವಾಜೆ ಬೋರಡ್ಕ ಎಂಬಲ್ಲಿ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಪೆರುವಾಜೆ ನಿವಾಸಿ ಜಬ್ಬಾರ್ ಕೆ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ಏ.11ರಂದು ರಾತ್ರಿ ನನ್ನ ಬಾಬ್ತು ಕೆ.ಎ.21 ಇಎ-2558ನೇ ಸ್ಕೂಟರಿನಲ್ಲಿ,ಸಂಬಂಧಿಕರಾದ ಮಹಮ್ಮದ್ ಮುಸಾಬ್ ಸವಾರನಾಗಿ ಹಾಗೂ ಮಹಮ್ಮದ್ ರಾಜೀಕ್‌ರವರು ಸಹಸವಾರನಾಗಿ ಪ್ರಯಾಣಿಸುತ್ತಾ, ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಬೋರಡ್ಕ ಎಂಬಲ್ಲಿಗೆ ತಲುಪಿದಾಗ, ಮಹಮ್ಮದ್ ಮುಸಾಬ್ ಸ್ಕೂಟರನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಸದ್ರಿ ಸ್ಕೂಟರ್ ರಸ್ತೆಬದಿಯ ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು.ಸ್ಕೂಟರ್‌ನ ಹಿಂದಿನಿಂದ ಬರುತ್ತಿದ್ದ ನಾನು ಕಾರನ್ನು ನಿಲ್ಲಿಸಿ, ಸ್ಕೂಟರ್‌ನ ಬಳಿಗೆ ಹೋಗಿ ನೋಡಿದಾಗ, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಈರ್ವರಿಗೂ ಗಾಯವಾಗಿದ್ದು,ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ, ಮಹಮ್ಮದ್ ರಾಜಿಕ್ ಮೃತಪಟ್ಟಿದ್ದು, ಮಹಮ್ಮದ್ ಮುಸಾಬ್‌ನನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ ಎಂದು ಜಬ್ಬಾರ್‌ರವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಳ್ಳಾರೆ ಪೊಲೀಸರು ಮಾಹಿತಿ ನೀಡಿದ್ದರು.ಸ್ಕೂಟರ್‌ಗೆ ಕಾಡು ಹಂದಿ ಡಿಕ್ಕಿಯಾಗಿ ಘಟನೆ ನಡೆದಿತ್ತು ಎಂದು ಆರಂಭದಲ್ಲಿ ಸುದ್ದಿಯಾಗಿತ್ತು.ಆದರೆ, ಸ್ಕೂಟರ್ ಮರಕ್ಕೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.