ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಬಾಲಕ-ಬಾಲಕಿಯರಿಗೆ ಹಗ್ಗಜಗ್ಗಾಟ, ಬಾಲಕರಿಗೆ ಹಾಗೂ ತರುಣರಿಗೆ ಸಾಂಪ್ರದಾಯಿಕ ತಪ್ಪಂಗಾಯಿ ಸ್ಪರ್ಧೆ ನಡೆಯಿತು. ಬೆಳಿಗ್ಗೆ ಶ್ರೀ ದೇವರಿಗೆ ಕಣಿ ಅರ್ಪಿಸಲಾಯಿತು. ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಬಳಿಕ ಸಾಂಪ್ರದಾಯಿಕ ತಪ್ಪಂಗಾಯಿ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಅವರು ವೈದಿಕ ವಿಧಿ ವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾತ್ರೆಯ ಲೆಕ್ಕಚಾರ ಮಂಡನೆ:
ದೇವಸ್ಥಾನದ ಸ್ವಾಭಿಮಾನ ಕಲ್ಯಾಣ ಮಂಟಪದಲ್ಲಿ ವಾರ್ಷಿಕ ಜಾತ್ರೋತ್ಸವದ ಲೆಕ್ಕಚಾರ ಮಂಡನೆ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಮಾತನಾಡಿ, ಅಚ್ಚುಕಟ್ಟಾಗಿ ನಡೆದ ಜಾತ್ರೋತ್ಸವದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಶಾಂತರಾಮ ಬೇಂಗದಪಡ್ಪು ವರದಿ ಮಂಡಿಸಿದರು. ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಮಾತನಾಡಿದರು. ಉತ್ಸವ ಸಮಿತಿ ಪದಾಧಿಕಾರಿಗಳಾದ ಸಂಜೀವ ಗೌಡ ಕೊನೆಮಜಲು, ವಿನಯಕುಮಾರ್ ರೈ ಕೊಯಿಲ ಪಟ್ಟೆ ಉಪಸ್ಥಿತರಿದ್ದರು. ಹಗ್ಗ ಜಗ್ಗಾಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅನ್ನದಾನ ಸೇವಾಕರ್ತರದ ಸುಚಿತಾ ಸುರೇಶ್ ಪಲ್ಲಡ್ಕ ಅವರನ್ನು ಗೌರವಿಸಲಾಯಿತು. ಉತ್ಸವ ಸಮಿತಿ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ ಬಡಿಲ ಸ್ವಾಗತಿಸಿದರು. ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಭವಾನಿಶಂಕರ್ ಪರಂಗಾಜೆ ವಂದಿಸಿದರು. ಶಿಕ್ಷಕ ಪರಮೇಶ್ವರ ಸಬಳೂರು ನಿರೂಪಿಸಿದರು.
ತಪ್ಪಾಂಗಾಯಿ ಸ್ಪರ್ದೆ ವಿಶೇಷ:
ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಮುಗಿದ ಬಳಿಕ ದೇವಳದಲ್ಲಿ ವಿಷು ಆಚರಣೆ ಸಂದರ್ಭ ಬಾಲಕರಿಗೆ ಹಾಗೂ ತರುಣರಿಗೆ ಪ್ರತ್ಯೇಕವಾಗಿ ತಪ್ಪಂಗಾಯಿ ಸ್ಪರ್ಧೆ ಪ್ರತಿವರ್ಷ ನಡೆಯುತ್ತದೆ. ಮಹಾಪೂಜೆಯ ಬಳಿಕ ಅರ್ಚಕರು ಪೂಜಿಸಿದ ತೆಂಗಿನಕಾಯಿಯೊಂದನ್ನು ದೇವಸ್ಥಾನದ ಧ್ವಜಕಂಬದ ಬಳಿ ಮೇಲಕ್ಕೆ ಆರಿಸಿ ಬಿಡುತ್ತಾರೆ. ಇದನ್ನು ಸ್ಪರ್ಧಿಗಳು ಹಾರಿ ಹಿಡಿದು ದೇವಳಕ್ಕೆ ಒಂದು ಸುತ್ತು ಹಾಕಿ ದೇವಳದ ಮುಂಭಾಗದ ಮೆಟ್ಟಿಲಿಗೆ ಒಡೆಯುವುದು ಸ್ಪರ್ಧೆಯ ನಿಯಮ. ನಿಗದಿತ ಸ್ಪರ್ಧಾಳುಗಳ ಸಂಖ್ಯೆ ಅನ್ವಯವಿಲ್ಲ. ಸ್ಪರ್ಧೆಯಲ್ಲಿ ಗೆದ್ದವರನ್ನು ಆಡಳಿತ ಸಮಿತಿಯಿಂದ ಗೌರವಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತೆಂಗಿನ ಕಾಯಿ ಹಿಡಿಯಲು ಪ್ರಯತ್ನಿಸುತ್ತಾರೆ ಮತ್ತು ಹಿಡಿದವನಿಂದ ತನ್ನ ವಶಕ್ಕೆ ಪಡೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಾರೆ. ಜಾತ್ರೋತ್ಸವ ಮುಗಿದು ಬಳಿಕ ಊರಿನ ಬಾಲಕರಿಗೆ, ತರುಣರಿಗೆ ಸಾಂಪ್ರದಾಯಿಕವಾಗಿ ನಡೆದು ಬಂದ ಸ್ಪರ್ಧೆಯಾಗಿದೆ ಎನ್ನುತ್ತಾರೆ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ.