ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಆಗಮಿಸುವ ಸಂದರ್ಭದಲ್ಲಿ ಶಾಲೆಯ ಯಕ್ಷಗಾನ ತಂಡ ಯಕ್ಷಪ್ರದೀಪ ಇದರ ವಿದ್ಯಾರ್ಥಿಗಳಿಂದ ‘ವಿದ್ಯುನ್ಮತಿ ಕಲ್ಯಾಣ – ದ್ರೌಪದಿ ಪ್ರತಾಪ’ ಎಂಬ ಪೌರಾಣಿಕ ಕಥಾನಕಗಳನ್ನು ಪ್ರದರ್ಶಿಸಲಾಯಿತು.
ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡುತ್ತಿರುವ ಸುಮಾರು 80 ಮಕ್ಕಳ ಪೈಕಿ 65 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾತ್ರಧಾರಿಗಳಾಗಿ ತಮ್ಮ ಯಕ್ಷಪ್ರತಿಭೆಯನ್ನು ಸೇರಿದ್ದ ವೀಕ್ಷಕರ ಮುಂದೆ ಪ್ರಸ್ತುತಪಡಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ ದೀಪ ಬೆಳಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿವಿಧ ತಂಡಗಳಿಂದ ಕುಣಿತ ಭಜನೆ, ಭರತನಾಟ್ಯ ಮುಂತಾದ ಚಟುವಟಿಕೆಗಳು ನೆರವೇರಿದವು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಇವರ ಮಾರ್ಗದರ್ಶನದಲ್ಲಿ ಜರಗಿದ ಶ್ರೀ ದೇವರ ಕಟ್ಟೆಪೂಜೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ, ಆಡಳಿತ ಮಂಡಳಿ ಸದಸ್ಯರು, ಪೋಷಕರು ಹಾಗೂ ಯಕ್ಷಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.