ಉಪ್ಪಿನಂಗಡಿ : ಕಳೆದ ಶನಿವಾರ ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಹಲವೆಡೆ ಹಾನಿಯುಂಟಾಗಿದ್ದು, ಉಪ್ಪಿನಂಗಡಿಯ ರಾಮನಗರದಲ್ಲಿನ ಸಮುದಾಯ ಭವನದ ಬಳಿ ಅಳವಡಿಸಲಾಗಿದ್ದ ಶೀಟ್ ಛಾವಣಿ ಗಾಳಿ ಮಳೆಗೆ ಸಿಲುಕಿ ಹಾನಿಗೀಡಾಗಿದೆ.
ಸುಳಿಗಾಳಿಯಿಂದಾಗಿ ಇದೇ ಪರಿಸರದ ದೈವಸ್ಥಾನದ ಛಾವಣಿಗೂ ಹಾನಿಯುಂಟಾಗಿದೆ. ಗಾಳಿಯ ರಭಸಕ್ಕೆ ಸಿಲುಕಿ ಉಪ್ಪಿನಂಗಡಿಯ ಸೇತುವೆ ಬಳಿ, ಪುಳಿತ್ತಡಿ ಹಾಗೂ ಪೆರಿಯಡ್ಕ ಎಂಬಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಯ ಮೇಲೆ ಬಿದ್ದು, ವಿದ್ಯುತ್ ತಂತಿಗಳು ಕಡಿತಕ್ಕೊಳಗಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲು ಕಾರಣವಾಯಿತು. ಆದಾಗ್ಯೂ ಈ ಅವಘಡದಲ್ಲಿ ಯಾವುದೇ ವಿದ್ಯುತ್ ಕಂಬಗಳು ಹಾನಿಗೀಡಾಗಿರುವುದಿಲ್ಲ. ಮೆಸ್ಕಾಂ ಸಿಬ್ಬಂದಿಗಳ ಅವಿರತ ಶ್ರಮದಿಂದಾಗಿ ಮಧ್ಯ ರಾತ್ರಿಯ ಬಳಿಕ ವಿದ್ಯುತ್ ಸರಬರಾಜು ಪುನರಾರಂಭಗೊಂಡಿತ್ತು.
ಹಲವೆಡೆ ಗಾಳಿಯ ಹೊಡೆತಕ್ಕೆ ಸಿಲುಕಿ ಕೃಷಿ ಬೆಳೆಗಳೂ ಹಾನಿಗೀಡಾಗಿದ್ದು, ಯಾವುದೇ ದೂರುಗಳು ವ್ಯಕ್ತವಾಗಿಲ್ಲ.