ಮಂಗಳೂರಿನಲ್ಲಿ ಮೋದಿ ರೋಡ್ ಶೋ – ಲೇಡಿಹಿಲ್‌ನಿಂದ ನವಭಾರತ ವೃತ್ತದ ತನಕ ರೋಡ್ ಶೋ – ಸಾವಿರಾರು ಮಂದಿ ಭಾಗಿ

0

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ದ.ಕ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಅವರು ಎ.14ರಂದು ರಾತ್ರಿ ಮಂಗಳೂರು ನಗರದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಸುಮಾರು 2ಕಿ.ಮೀ ತನಕ ಸಾಗಿದ ರೋಡ್ ಶೋ ವೇಳೆ ರಸ್ತೆಯುದ್ದಕ್ಕೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ಬಿಜೆಪಿ ಬಾವುಟ ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.

ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಸಮಾವೇಶದಲ್ಲಿ ಭಾಗಿಯಾಗಿ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದ ವಿಶೇಷ ವಾಹನದ ಮೂಲಕ ನಿಗದಿತ ಅವಽಗೆ 9 ನಿಮಿಷ ಮುಂಚಿತವಾಗಿ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರುವೃತ್ತಕ್ಕೆ ಆಗಮಿಸಿದ್ದರು. ಸರಿಯಾಗಿ 7.36ಕ್ಕೆ ನಾರಾಯಣ ಗುರುವೃತ್ತದ ಬಳಿ ಆಗಮಿಸಿದ್ದ ಪ್ರಧಾನಿ ಅವರು 7.39ಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಗೆ ಹಾರಾರ್ಪಣೆ ಮಾಡಿ ರೋಡ್ ಶೋಗೆ ಸಿದ್ಧಪಡಿಸಲಾಗಿದ್ದ ವಾಹನ ಏರಿದರು. ನಾರಾಯಣ ಗುರು ವೃತ್ತದ ಬಳಿ ಮೋದಿ ಆಗಮನಕ್ಕೂ ಮುನ್ನ ವಿಪ್ರರಿಂದ ಮಂತ್ರ ಪಠಣ ಹಾಗೂ ಕೊಂಬು, ಕಹಳೆ, ಚೆಂಡೆ ತಂಡವು ಶಂಖ ನಾದವನ್ನು ಹೊರ ಹೊಮ್ಮಿಸಿತು. ಭಜನೆಯೂ ನಡೆಯಿತು.
ನಾರಾಯಣ ಗುರು ವೃತ್ತದಿಂದ ಅಲಂಕೃತ ವಿಶೇಷ ವಾಹನದಲ್ಲಿ ರೋಡ್ ಶೋ ಆರಂಭಿಸಿದರು. ವಾಹನದಲ್ಲಿ ಬಿಜೆಪಿಯ ದ.ಕ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಯವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಎಡ ಹಾಗೂ ಬಲಭಾಗದಲ್ಲಿ ನಿಂತಿದ್ದರು. ನಾರಾಯಣ ಗುರು ವೃತ್ತದಿಂದ ಲಾಲ್‌ಬಾಗ್, ಬಳ್ಳಾಲ್‌ಬಾಗ್, ಪಿವಿಎಸ್ ಮೂಲಕ ನವಭಾರತ್ ವೃತ್ತದ ತನಕ ರೋಡ್ ಶೋ ಕಾರ್ಯಕ್ರಮ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ ಸಾಗಿದ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಮೋದಿಗೆ ಪುಷ್ಪವೃಷ್ಟಿ:
ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ನಗು ಬೀರುತ್ತಾ, ಅಭಿಮಾನಿಗಳತ್ತ ಕೈ ಬೀಸುತ್ತಾ ಸಾಗಿದ ಪ್ರಧಾನಿ ಮೋದಿಯವರು ಕರಾವಳಿಯ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದರು. ಕೈಯಲ್ಲಿ ಹೊಳೆಯುವ ಕಮಲದ ಚಿಹ್ನೆ ಹಿಡಿದುಕೊಂಡಿದ್ದ ನರೇಂದ್ರ ಮೋದಿ ಅವರು ಹಸನ್ಮುಖರಾಗಿ ಎಲ್ಲರತ್ತ ಕೈ ಬೀಸುತ್ತಾ ಸಾಗಿದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಿರಂತರ ಪುಷ್ಪ ವೃಷ್ಟಿಗೈದರು. ಮೋದಿ ಅವರು ಕೆಲವು ಬಾರಿ ಜನರತ್ತ ಹೂವಿನ ಎಸಳುಗಳನ್ನು ಎಸೆದು ಸಂಭ್ರಮ ಮೂಡಿಸಿದರು.

ಸಾಂಸ್ಕೃತಿಕ ವೈಭವ:
ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಅಲ್ಲಲ್ಲಿ ನಡೆದ ಸಾಂಸ್ಕೃತಿಕ ವೈಭವವೂ ಗಮನ ಸೆಳೆಯಿತು. ಕರಾವಳಿಯ ವಿಶೇಷ ವಾದ್ಯಗಳು, ಯಕ್ಷಗಾನ, ಹುಲಿ ವೇಷ, ಚಂಡೆ ಮೇಳಗಳು, ಕಂಬಳದ ಪ್ರತಿಕೃತಿ, ದೈವಾರಾಧನೆ ವೀಡಿಯೋಗಳು ರೋಡ್ ಶೋದ ವೈಭವ ಹೆಚ್ಚಿಸಿದವು. ಮಕ್ಕಳು, ವೃದ್ದರು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ರಸ್ತೆಯುದ್ದಕ್ಕೂ ನಿಂತು ರೋಡ್ ಶೋ ಕಣ್ತುಂಬಿಸಿಕೊಂಡರು. ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಜೈ ಶ್ರೀರಾಮ್, ನರೇಂದ್ರ ಮೋದಿ ಕಿ ಜೈ ಘೋಷಣೆಯನ್ನು ಕೂಗಿ ಸಂಭ್ರಮ ಪಟ್ಟರು. ನವಭಾರತ ವೃತ್ತಕ್ಕೆ ರಾತ್ರಿ 8.44ಕ್ಕೆ ತಲುಪಿದ್ದು ರೋಡ್ ಶೋ ಸಮಾಪ್ತಿಗೊಂಡಿತು. ಬಳಿಕ ನರೇಂದ್ರ ಮೋದಿ ವಾಹನದಿಂದ ಇಳಿದು ಜನರ ಬಳಿ ತೆರಳಿ ಜನರಿಗೆ ವಂದಿಸಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದರು.

ಪುತ್ತೂರು, ಕಡಬ ತಾಲೂಕಿನಿಂದ ಸಾವಿರಾರು ಮಂದಿ ಭಾಗಿ:
ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಸಿದ ರೋಡ್ ಶೋದಲ್ಲಿ ಪುತ್ತೂರು, ಕಡಬ ತಾಲೂಕಿನ ಸಾವಿರಾರು ಬಿಜೆಪಿ ಕಾರ್ಯಕರ್ತರು, ಮೋದಿಯವರ ಅಭಿಮಾನಿಗಳು ಪಾಲ್ಗೊಂಡಿದ್ದರು. ಉಭಯ ತಾಲೂಕಿನ ಸಾವಿರಾರು ಮಂದಿ ಮಧ್ಯಾಹ್ನವೇ ಬಸ್ಸು ಹಾಗೂ ಇತರೇ ವಾಹನಗಳಲ್ಲಿ ಮಂಗಳೂರಿಗೆ ತೆರಳುತ್ತಿರುವುದು ಕಂಡುಬಂದಿದೆ.

ರೋಡ್ ಶೋ ಕಾರ್ಯಕ್ರಮದಲ್ಲಿ ಪುತ್ತೂರಿನಿಂದ ಸಾವಿರಾರು ಮಂದಿ ಭಾಗವಹಿಸಿದ್ದರು. ಪುತ್ತೂರಿನಿಂದ ತೆರಳಿದ ಕಾರ್ಯಕರ್ತರು ನರೇಂದ್ರ ಮೋದಿಯವರಿಗೆ ರೋಡ್ ಶೋ ವೇಳೆ ಪುಷ್ಪವೃಷ್ಟಿ ಸಮರ್ಪಣೆ ಮಾಡಿದರು. ಸಂಜೆ ಪುತ್ತೂರು ಬಿಜೆಪಿ ಕಚೇರಿಯಿಂದ ಎರಡು ಬಸ್‌ನಲ್ಲಿ ಕಾರ್ಯಕರ್ತರು ಸೇರಿಕೊಂಡು ಮಂಗಳೂರಿಗೆ ತೆರಳಿದರು. ಅದೇ ರೀತಿ ಗ್ರಾಮಾಂತರ ಪ್ರದೇಶದಿಂದ ಅಲ್ಲಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸೇರಿಕೊಂಡು ಮಂಗಳೂರಿಗೆ ತೆರಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಲೋಕಸಭಾ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಾಹಣ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಸಹ ಸಂಚಾಲಕ ಉಮೇಶ್ ಕೋಡಿಬೈಲು, ಮುಖಂಡ ಅರುಣ್ ಕುಮಾರ್ ಪುತ್ತಿಲ, ಮೂಡಬಿದ್ರೆ ಉಸ್ತುವಾರಿ ಚಂದ್ರಶೇಖರ್ ರಾವ್ ಬಪ್ಪಳಿಗೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರವೀಣ್ ತಿಂಗಳಾಡಿ ಸಹಿತ ಸಾವಿರಾರು ಮಂದಿ ಮಂಗಳೂರಿಗೆ ತೆರಳಿದರು. ಪ್ರಮುಖರಿಗೆ ಬಿಜೆಪಿ ಕಚೇರಿಯ ಬಳಿ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಾರಾಯಣ ಗುರು ಪ್ರತಿಮೆ ಬಳಿಕ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು. ಪ್ರವೀಣ್ ನೆಟ್ಟಾರು ಅವರ ತಾಯಿ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ ಸಹಿತ ಕೆಲವರಿಗೆ ನರೇಂದ್ರ ಮೋದಿ ಅವರನ್ನು ಬೀಳ್ಕೊಡುವ ಮತ್ತು ಸ್ವಾಗತಿಸುವ ಅವಕಾಶ ಕಲ್ಪಿಸಲಾಗಿತ್ತು.

ಅಭೂತ ಪೂರ್ವ ಸ್ಪಂದನೆ – ಬ್ರಿಜೇಶ್ ಚೌಟ
ಮಂಗಳೂರಿನ ಜನತೆಗೆ ಹೊಸ ವರ್ಷದ ಸಂದರ್ಭದಲ್ಲಿ ಮೋದಿಯವರ ಆಗಮನ ಹೊಸ ಹುರುಪು ನೀಡಿದೆ. ಮಂಗಳೂರಿನ ಜನತೆ ಎಂದಿನಂತೆ ಮೋದಿಯವರ ಬಗ್ಗೆ ಗೌರವ ತೋರಿಸಿದ್ದಾರೆ ನಮಗೆ ನಮ್ಮ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ್ದಾರೆ ಎಂದು ರೋಡ್ ಶೋ ಬಳಿಕ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾಧ್ಯಮ ಪ್ರತಿನಿಽಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here