ಕಾಣಿಯೂರು: ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಬಿಸು ಕಣಿ ಮತ್ತು ಸೌರಮಾನ ಯುಗಾದಿಯಯನ್ನು ಆದಿತ್ಯವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬಿಸು ಹಬ್ಬದ ಅಂಗವಾಗಿ ಕುಕ್ಕೆ ದೇವಳದಲ್ಲಿ ಆರಂಭದಲ್ಲಿ ಬಿಸು ಕಣಿಯನ್ನು ಶ್ರೀ ದೇವರಿಗೆ ದರ್ಶನ ಮಾಡಲಾಯಿತು. ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಥೋತ್ಸವ ನಡೆಯಿತು. ರಥೋತ್ಸವ ವೇಳೆ ದೇವಸ್ಥಾನದ ಆನೆ ಯಶಸ್ವಿ ಉತ್ಸವದಲ್ಲಿ ಹೆಜ್ಜೆ ಹಾಕಿತು. ಬೆಳಗ್ಗಿನ ನಿತ್ಯ ಪೂಜೆ ಮತ್ತು ಸೇವಾಧಿಗಳು ಉತ್ಸವದ ಬಳಿಕ ನಡೆಯಿತು.
ವಿಷುಕಣಿ ದರ್ಶನ:
ಮುಂಜಾನೆ ಶ್ರೀ ದೇವಳದ ಗರ್ಭಗೃಹದ ಮುಂಭಾಗದಲ್ಲಿ ವಿಷು ಕಣಿಯನ್ನು ಇಡಲಾಯಿತು. ನಂತರ ಶ್ರೀ ದೇವರಿಗೆ ವಿಷುಕಣಿ ದರ್ಶನ ನಡೆದು, ಶ್ರೀ ದೇವರ ಹೊರಾಂಗಣ ಉತ್ಸವ ನಡೆಯಿತು. ಬಳಿಕ ರಾಜಬೀದಿಯಲ್ಲಿ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಚಿಕ್ಕರಥೋತ್ಸವ ನೆರವೇರಿತು. ರಥೋತ್ಸವದ ಬಳಿಕ ಶ್ರೀ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು. ಪ್ರತಿದಿನ ಮುಂಜಾನೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ನಡೆಯುವ ನಿತ್ಯಪೂಜೆ ಮತ್ತು ಬೆಳಗಿನ ಮಹಾಪೂಜೆ ಮತ್ತು ಸೇವಾಧಿಗಳು ಉತ್ಸವದ ಬಳಿಕ ನಡೆಯಿತು. ಶನಿವಾರ ರಾತ್ರಿ ಮಹಾಪೂಜೆಯ ನಂತರ ವಿಷು ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪಾಲಕಿ ಮತ್ತು ಬಂಡಿ ರಥೋತ್ಸವ ನೆರವೇರಿತು. ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.