ಉಪ್ಪಿನಂಗಡಿ: ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಿದರೂ ಕೆರೆಯ ನೀರು ಬತ್ತಿ ಹೋಗಿ ಅದರಲ್ಲಿ ಸಾಕಲಾಗುತ್ತಿದ್ದ ಸಾವಿರಾರು ಮೀನು ಮರಿಗಳು ಸತ್ತು ಹೋದ ಘಟನೆ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಮಠ ಎಂಬಲ್ಲಿರುವ ಕೆರೆಮೂಲೆಯಲ್ಲಿ ನಡೆದಿದೆ.
ಮಠದ ಹಿರ್ತಡ್ಕ ಬಳಿ ಅನಾದಿ ಕಾಲದಿಂದ ಸಾರ್ವಜನಿಕ ಕೆರೆಯೊಂದಿತ್ತು. ಆದ್ದರಿಂದ ಅಲ್ಲಿಗೆ ಕೆರೆಮೂಲೆ ಎಂದೇ ಹೆಸರಾಗಿತ್ತು. ಆಗ ಇಲ್ಲಿಂದ ಹಳೆಗೇಟುವರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿ ಭತ್ತದ ಗದ್ದೆಗಳೇ ಇದ್ದವು. ಆ ಸಂದರ್ಭದಲ್ಲಿ ಈ ಕೆರೆ ವರ್ಷ ಪೂರ್ತಿ ತುಂಬಿಕೊಂಡಿತ್ತು. ಆದರೆ ಕಾಲ ಕ್ರಮೇಣ ಈ ಭೂಭಾಗದಲ್ಲಿ ಭತ್ತದ ಗದ್ದೆಗಳು ನಾಶವಾಗಿ ಫ್ಲಾಟ್‌ಗಳು, ಮನೆಗಳು ತಲೆಯೆತ್ತಿಕೊಂಡವು. ಇನ್ನೊಂದೆಡೆ ಈ ಕೆರೆಯು ಹೂಳು ತುಂಬಿಕೊಂಡಿತ್ತು. ಸುಮಾರು ಎಂಟು- ಒಂಬತ್ತು ವರ್ಷಗಳ ಹಿಂದೆ ಸರಕಾರ ಸಾರ್ವಜನಿಕ ಕೆರೆಗಳ ಅಭಿವೃದ್ಧಿಗೆ ಆದೇಶಿಸಿದಾಗ ಆಗಿನ ಶಾಸಕರು 25 ಲಕ್ಷ ರೂಪಾಯಿ ಇದರ ತಡೆಗೋಡೆಗೆ ಮಂಜೂರುಗೊಳಿಸಿದ್ದರು. ಆಗ ಇದರ ಹೂಳೆತ್ತಿ ತಡೆಗೋಡೆ ಕಾಮಗಾರಿ ನಡೆದಿತ್ತು. ಆ ಬಳಿಕ 2022-23ನೇ ಅವಧಿಯಲ್ಲಿ ಅಮೃತ ಸರೋವರ ಯೋಜನೆಯಡಿ ಉದ್ಯೋಗ ಖಾತ್ರಿ ಮೂಲಕ ಉಪ್ಪಿನಂಗಡಿ ಗ್ರಾ.ಪಂ. 25 ಲಕ್ಷ ರೂ. ವೆಚ್ಚದಲ್ಲಿ ಇದರ ಹೂಳೆತ್ತುವ ಕಾಮಗಾರಿ ನಡೆಸಿತ್ತು.
ಕಳೆದ ಮಳೆಗಾಲದಲ್ಲಿ ಕರೆಯಲ್ಲಿ ಸಮೃದ್ಧವಾಗಿ ನೀರು ತುಂಬಿಕೊಂಡಿತ್ತು. ಪ್ರತಿಯೋರ್ವರ ಮನೆಯಲ್ಲಿ ನೀರಿಗೆ ಕೊಳವೆ ಬಾವಿ ಸೇರಿದಂತೆ ಪರ್ಯಾಯ ಮಾರ್ಗೋಪಾಯಗಳಿದ್ದ ಕಾರಣ ಈ ಕೆರೆಯ ನೀರು ಯಾವುದಕ್ಕೂ ಬಳಕೆಯಾಗುತ್ತಿರಲಿಲ್ಲ. ಈ ಕರೆಯಲ್ಲಿ ಸಮೃದ್ಧ ಜಲರಾಶಿಯನ್ನು ಕಂಡ ಸ್ಥಳೀಯರಾದ ಅಬ್ದುರ್ರಹ್ಮಾನ್ ಅವರು ಗ್ರಾ.ಪಂ.ನಿಂದ ಅನುಮತಿ ಪಡೆದು ಇದರಲ್ಲಿ ಮೀನು ಸಾಕಾಣಿಕೆಗೆ ಮುಂದಾದರು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಕುವ ಮೀನನ್ನು ಬಿಟ್ಟರು. ಆದರೆ ಈಗ ಎಪ್ರಿಲ್ ಆಗುವಷ್ಟರಲ್ಲೇ ಈ ಕೆರೆಯ ನೀರು ಬತ್ತಿ ಹೋಗಿದ್ದು, ಇದ್ದ ಸ್ವಲ್ಪ ನೀರು ಬಿಸಿಲಿಗೆ ಕಾದು ಇದ್ದ ಮೀನುಗಳೆಲ್ಲಾ ಸತ್ತು ಹೋಗಿ ಸಾವಿರಾರು ರೂಪಾಯಿ ಅವರಿಗೆ ನಷ್ಟವಾಗುವಂತಾಗಿದೆ.
ಈ ಕೆರೆಯಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ನೇತ್ರಾವತಿ ನದಿಯಿದ್ದು, ಅದರಲ್ಲಿ ಈಗ ಹಿನ್ನೀರು ತುಂಬಿಕೊಂಡಿದೆ. ಆದರೆ ಅದರ ಹಿನ್ನೀರಿನ ಪ್ರಭಾವ ಈ ಕೆರೆಯಲ್ಲಿ ಒರತೆಯನ್ನು ಸೃಷ್ಟಿಸಿಲ್ಲ. ಮರ-ಗಿಡ, ಭತ್ತದ ಗದ್ದೆಗಳ ನಾಶದಿಂದ ತೇವಾಂಶ ಬತ್ತಿ ಹೋಗಿ ನಮ್ಮ ಭೂಮಿ ಯಾವ ರೀತಿ ಕಾದು ಹೋಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಾಗಿದೆ.