ಪುತ್ತೂರು: ಮದಕ ಆರಾಧ್ಯ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೇವರ ಸಾರ್ವಜನಿಕ ಆರಾಧ್ಯ ಕಟ್ಟೆಯು ಏ.18 ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಏ.14 ಹಾಗೂ 15 ರಂದು ಧಾರ್ಮಿಕ ಶ್ರದ್ಧಾ ಕಾರ್ಯಕ್ರಮಗಳು ಸಾರ್ವಜನಿಕ ಆರಾಧ್ಯ ಕಟ್ಟೆಯ ಅಧ್ಯಕ್ಷ ಎನ್.ಕರುಣಾಕರ್ ರೈ ದೇರ್ಲರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ರವರ ನೇತೃತ್ವದಲ್ಲಿ ಪುಣ್ಯವಾಚನ, ಸಪ್ತಶುದ್ಧಿ, ವಾಸ್ತು ಹೋಮ, ಗಣಪತಿ ಹೋಮ, ಮುಗುಳಿ ಪ್ರತಿಷ್ಠೆಯ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು.
ವಾಸ್ತು ತಜ್ಞ ಪಿ.ಜಿ ಜಗನ್ನೀವಾಸ್ ರಾವ್ ರವರ ನಿರ್ದೇಶನದಲ್ಲಿ ಬರೀ ಕೆಂಪು ಕಲ್ಲಿನಲ್ಲಿ ಅತ್ಯಾಕರ್ಷಕವಾಗಿ ಶ್ರೀ ದೇವರ ಕಟ್ಟೆಯು ಮೂಡಿ ಬಂದಿದೆ. ಮದಕ ಆರಾಧ್ಯ ಲೇಔಟ್ ನಲ್ಲಿ ಶ್ರೀ ದೇವರ ಕಟ್ಟೆಯನ್ನು ನಿರ್ಮಿಸುತ್ತೇವೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯಲ್ಲಿದ್ದ ದೇರ್ಲ ಕರುಣಾಕರ್ ರೈಯವರು ಪ್ರಸ್ತಾಪವಿತ್ತಿದ್ದರು. ಪ್ರಸ್ತುತ ವರ್ಷ ದೇವರ ಅನುಗ್ರಹದಂತೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶ್ರೀ ದೇವರ ಕಟ್ಟೆ ದೇವರ ಪೂಜೆಗೆ ಸಿದ್ಧವಾಗಿ ನಿಂತಿದೆ.
ಏ.18 ರಂದು ಪ್ರಥಮ ಪೂಜೆ..
ವರ್ಷಂಪ್ರತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮವು ವಿಜ್ರಂಭಣೆಯಿಂದ ಜರಗುತ್ತಿದ್ದು ಪ್ರತಿದಿನ ಶ್ರೀ ದೇವರ ಕಟ್ಟೆ ಪೂಜೆ ನಡೆಯುತ್ತಿದೆ. ಏ.18 ರಂದು ದರ್ಬೆ ಮೂಲಕ ದೇವರ ಪೇಟೆ ಸವಾರಿ ಹೊರಡುತ್ತಿದ್ದು ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಮದಕದಲ್ಲಿನ ಸಾರ್ವಜನಿಕ ಆರಾಧ್ಯ ಕಟ್ಟೆಯಲ್ಲಿ ಪ್ರಥಮವಾಗಿ ಪೂಜಾ ಕಾರ್ಯಕ್ರಮಗಳು ನಡೆಯಲಿರುವುದು.
ಕನಸು ನನಸಾಗಿದ್ದು ಸಂತಸ..
12 ವರ್ಷದ ಹಿಂದೆ ಮದಕದಲ್ಲಿ ಆರಾಧ್ಯ ಲೇಔಟ್ ಸುಸಜ್ಜಿತವಾಗಿ ನಿರ್ಮಾಣಗೊಂಡಿತ್ತು ಮಾತ್ರವಲ್ಲ ಈ ಭಾಗದಲ್ಲಿ ಸಾರ್ವಜನಿಕ ಆರಾಧ್ಯಕಟ್ಟೆ ನಿರ್ಮಾಣ ಮಾಡಬೇಕೆನ್ನುವುದು ನಮ್ಮ ಅದಮ್ಯ ಕನಸಾಗಿತ್ತು. ಈಗ ಇಲ್ಲಿ ಶ್ರೀ ದೇವರ ಕಟ್ಟೆ ನಿರ್ಮಾಣಗೊಂಡಿರುವುದು ನಮಗೆ ಅತೀವ ಸಂತಸ ತಂದಿದೆ. ಈ ಲೇಔಟ್ ನಲ್ಲಿ 25 ಮನೆಗಳು ಸೇರಿದಂತೆ ಮದಕ ಸುತ್ತಮುತ್ತಲು ಒಟ್ಟು 150 ಮನೆಗಳು ವಾಸವಿದ್ದು ಎಲ್ಲರ ಸಂಪೂರ್ಣ ಸಹಕಾರ ನಮಗೆ ದೊರೆತಿದೆ.
-ಎನ್.ಕರುಣಾಕರ್ ರೈ ದೇರ್ಲ, ಅಧ್ಯಕ್ಷರು, ಸಾರ್ವಜನಿಕ ಆರಾಧ್ಯ ಕಟ್ಟೆ, ಮದಕ