ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ,ಬೆದರಿಕೆ-ನಗರ ಠಾಣೆಯಲ್ಲಿ ಪ್ರಕರಣ ದಾಖಲು

0

ಪುತ್ತೂರು:ಮನೆ ಮನೆಗೆ ಮತ ಪತ್ರ ನೀಡಲು ಹೋಗಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆಯೋರ್ವರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಲ್ಲೆಗೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆ,ಸೂತ್ರಬೆಟ್ಟು ದಿ.ವೇದವ್ಯಾಸ ರಾವ್ ಅವರ ಪತ್ನಿ ಶ್ರೀಮತಿ ಜಯಶ್ರೀ(56 ವ.)ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ‘ರೋಟರಿಪುರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ತಾನು ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಲೋಕ ಸಭಾ ಚುನಾವಣಾ ಪ್ರಯುಕ್ತ 130ನೇ ವಾರ್ಡ್‌ನಲ್ಲಿ ಬಿ.ಎಲ್.ಒ ಆಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದು ಏ.16ರಂದು ಮನೆಯಿಂದ ರೋಟರಿಪುರ ಅಂಗನವಾಡಿ ಕೇಂದ್ರಕ್ಕೆ ಹೋಗುವರೇ ರೋಟರಿಪುರದ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪರಿಚಯದ ರೋಟರಿಪುರ ವಾಸಿ ಅಮೀನಾ ಎಂಬವರು ಅವರ ಮನೆಯ ಬಳಿ ಕಾಣ ಸಿಕ್ಕಿ ‘ನಿಮಗೆ ನೀರು ಬಂದಿರುತ್ತದೆಯೇ?’ ಎಂದು ನನ್ನಲ್ಲಿ ಕೇಳಿದಾಗ ‘ನೀರು ಬಂದಿರುತ್ತದೆ’ ಎಂದು ಹೇಳಿದ್ದೆ.ಅವರ ಮನೆಯ ಒಳಗೆ ಇದ್ದ ಅಮೀನಾ ಅವರ ಮಗಳು ಫಾತಿಮಾ ನನ್ನ ಬಳಿ ಬಂದು, ‘ನಿಮ್ಮ ಮನೆಗೆ ಹೋಗುವ ನೀರಿನ ಪೈಪ್‌ನ ಗೇಟ್ ವಾಲ್ ನಮ್ಮ ಮನೆ ಬಳಿ ಯಾಕೆ ಇಟ್ಟಿದ್ದೀರಾ?’ ಎಂದು ಕೇಳಿದಳು.‘ಗೊತ್ತಿಲ್ಲ’ ಎಂದು ತಿಳಿಸಿ ನಾನು ಅಲ್ಲಿಂದ ಹೊರಟು ಬಂದಾಗ ನನ್ನ ಹಿಂದಿನಿಂದ ಬಂದು ಫಾತಿಮಾ ನನ್ನ ಕೈಯನ್ನು ಹಿಡಿದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಆಕೆಯ ಕೈಗಳಿಂದ ನನ್ನ ಭುಜಕ್ಕೆ, ಮುಖಕ್ಕೆ, ಬೆನ್ನಿಗೆ ಹೊಡೆದು, ಕೂದಲನ್ನು ಹಿಡಿದು ನೆಲಕ್ಕೆ ದೂಡಿ ಹಾಕಿರುತ್ತಾರೆ.ಆ ಸಮಯ ಫಾತಿಮಾಳ ತಾಯಿ ಅಮೀನಾ ಅಲ್ಲಿಗೆ ಬಂದು ಫಾತಿಮಾಳನ್ನು ಕರೆದುಕೊಂಡು ಹೋಗುತ್ತಿರುವಾಗ ಫಾತಿಮಾ ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದಾರೆ.ಆ ವೇಳೆಗೆ ನನ್ನ ಬೊಬ್ಬೆಯನ್ನು ಕೇಳಿ ಘಟನೆಯನ್ನು ನೋಡುತ್ತಿದ್ದ ವಿದ್ಯಾ ಸರಸ್ವತಿ ಎಂಬವರು ನನ್ನ ಮಗ ಶ್ರೇಯಸ್ ಮತ್ತು ಅಂಗನವಾಡಿ ಸಹಾಯಕಿ ಗೀತಾ ಎಂಬವರಿಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿದರು.ಬಳಿಕ ಅಲ್ಲಿಗೆ ಬಂದ ಮಗ ಶ್ರೇಯಾಸ್ ಮತ್ತು ಅಂಗನವಾಡಿ ಸಹಾಯಕಿ ಗೀತಾರವರು ವಿಚಾರಿಸಿ ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಜಯಶ್ರೀ ಅವರು ದೂರಿನಲ್ಲಿ ತಿಳಿಸಿದ್ದಾರೆ.ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣಾ (ಅ.ಕ್ರ: 34/2024) ಪೊಲೀಸರು ಕಲಂ 341,323, 504,353 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here