ಪಟ್ಲ ಟ್ರಸ್ಟ್‌ನಿಂದ ರೂ.12 ಕೋಟಿ ಅಶಕ್ತ ಕಲಾವಿದರಿಗೆ ಸಹಾಯಹಸ್ತ-ಪಟ್ಲ ಸತೀಶ್ ಶೆಟ್ಟಿ
ಪುತ್ತೂರು: ಯಕ್ಷಧ್ರುವ ಟ್ರಸ್ಟ್ ಯಕ್ಷಾಭಿಮಾನಿಗಳ ಆಶೀರ್ವಾದದಿಂದ ಬೆಳೆಯುತ್ತಿದ್ದು, ಸಹೃದಯಿ ದಾನಿಗಳ ನೆರವಿನಿಂದ ಈಗಾಗಲೇ ಪಟ್ಲ ಫೌಂಡೇಷನ್ ನಿಂದ ಸುಮಾರು ರೂ.12 ಕೋಟಿ ಹಣ ಅಶಕ್ತ ಕಲಾವಿದರಿಗೆ ಸಹಾಯಹಸ್ತ ನೀಡಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಏ.19 ರಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಜರಗಿದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 7ನೇ ವಾರ್ಷಿಕ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಇತ್ತೀಚೆಗೆ ಆಮೇರಿಕಾದಲ್ಲಿನ ಸಹೃದಯಿಯೋರ್ವರು ನಮ್ಮ ಜೊತೆ ಕೈ ಜೋಡಿಸಿದ್ದು ಉಡುಪಿ ಸಮೀಪ ಒಂದು ಕೋಟಿ ವೆಚ್ಚದ ಜಾಗದಲ್ಲಿ 20 ಮನೆಗಳನ್ನು ನಿರ್ಮಾಣ ಮಾಡಲಿದ್ದೇವೆ. ದೈವಾರಾಧನೆ, ನಾಟಕ, ಯಕ್ಷಗಾನದ ಕಲಾವಿದರಿಗೆ ಟ್ರಸ್ಟ್ ನಿಂದ ವಿಮಾ ಯೋಜನೆ, ನಾಲ್ಕು ಸಾವಿರ ಮಂದಿಗೆ ಯಕ್ಷ ಶಿಕ್ಷಣದ ಮೂಲಕ ಶಿಕ್ಷಣ ಟ್ರಸ್ಟ್ ನೀಡುತ್ತಿದ್ದು ಕಲಾವಿದರಿಗೆ ಸೇವೆ ಮಾಡುತ್ತಿರುವವರಿಗೆ ಜನರ ಆಶೀರ್ವಾದವಿರಲಿ ಎಂದರು.
ಟ್ರಸ್ಟ್‌ನಿಂದ ಮಾನವೀಯ ಮೌಲ್ಯಗಳಿಗೆ ಬೆಲೆ-ಸವಣೂರು ಸೀತಾರಾಮ ರೈ:
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಳೆದ ಆರು ವರ್ಷ ಜೈರಾಜ್ ಭಂಡಾರಿರವರ ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಅಧ್ಯಕ್ಷ ಕರುಣಾಕರ್ ರೈ ದೇರ್ಲರವರ ಅಧ್ಯಕ್ಷತೆಯಲ್ಲಿ ಏಳನೇ ವರ್ಷವನ್ನು ಆಚರಿಸುತ್ತಿದೆ. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುತ್ತಾ ಬಂದಿರುವ ಈ ಟ್ರಸ್ಟ್ ಎಲ್ಲೆಡೆ ಮನೆಮಾತಾಗಿದೆ. ಪಟ್ಲ ಸತೀಶ್ ಶೆಟ್ಟಿರವರ ಸೇವೆ ದೇಶ-ವಿದೇಶಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದು ಇದೊಂದು ಉತ್ತಮ ಸಂಘಟನೆ ಎಂಬುದಾಗಿ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಅಶಕ್ತ ಕಲಾವಿದರಿಗೆ ಸಹಾಯಹಸ್ತ ಚಾಚುವ ಮೂಲಕ ಸ್ಪಂದನೆ-ಮಲ್ಲಿಕಾ ಪಿ.ಪಕ್ಕಳ:
ರಾಜ್ಯ ಸರಕಾರದ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರಬೀಡು ಮಾತನಾಡಿ, ಪಟ್ಲ ಸತೀಶ್ ಶೆಟ್ಟಿರವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅನ್ನು ಸ್ಥಾಪಿಸಿ ಅಶಕ್ತ ಕಲಾವಿದರಿಗೆ ಸಹಾಯಹಸ್ತ ಚಾಚುವ ಮೂಲಕ ಸ್ಪಂದಿಸುತ್ತಾ ಬಂದಿದ್ದಾರೆ. 26 ಮಂದಿ ಅಶಕ್ತ ಕಲಾವಿದರಿಗೆ ಈ ಟ್ರಸ್ಟ್ ಮೂಲಕ ಸೂರನ್ನು ಕಲ್ಪಿಸಿಕೊಟ್ಟಿದ್ದಾರೆ ಜೊತೆಗೆ ವಿದ್ಯಾರ್ಥಿಗಳಿಗೆ ಕಲಿಯಲು ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಟ್ರಸ್ಟ್‌ನಿಂದ ಕಲಾವಿದರಿಗೆ ಬದುಕು ಕಟ್ಟಿಕೊಡುವ ಕಾಯಕ-ಜಯಂತ್ ನಡುಬೈಲು:
ಅಕ್ಷಯ ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಪಟ್ಲ ಸತೀಶ್ ಶೆಟ್ಟಿರವರು ಯಕ್ಷಗಾನ ರಂಗದ ಅಶಕ್ತ ಕಲಾವಿದರಿಗೆ ನೆರವಿನ ಹಸ್ತ ಚಾಚುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಒಂದರ್ಥದಲ್ಲಿ ಕಲಾವಿದರಿಗೆ ಬದುಕು ಕಟ್ಟಿಕೊಡುವ ಕಾಯಕದಲ್ಲಿ ಅವರು ನಿರತರಾಗಿದ್ದಾರೆ. ಯಾರೇ ಆಗಲಿ, ಜೀವನದಲ್ಲಿ ಯಾರು ಒಳ್ಳೆಯ ಕೆಲಸವನ್ನು ಮಾಡುತ್ತಾರೋ ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ ಮಾತ್ರವಲ್ಲ ದೇವರು ಆಶೀರ್ವದಿಸುತ್ತಾನೆ. ಇತ್ತೀಚೆಗೆ ಬಡ ಕುಟುಂಬವೊಂದಕ್ಕೆ ಪಟ್ಲ ಫೌಂಡೇಶನ್‌ನಿಂದ ಮನೆ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಅದೇ ಕುಟುಂಬದ ವಿದ್ಯಾರ್ಥಿನಿಗೆ ನಮ್ಮ ಅಕ್ಷಯ ಕಾಲೇಜು ಉಚಿತವಾಗಿ ವಿದ್ಯಾಭ್ಯಾಸವನ್ನು ಕಲ್ಪಿಸುತ್ತದೆ. ಈಗಾಗಲೇ ಆ ವಿದ್ಯಾರ್ಥಿನಿ ಅಕ್ಷಯ ಕಾಲೇಜಿನಲ್ಲಿ ದಾಖಲಾತಿ ಪಡೆದಿರುತ್ತಾಳೆ ಎಂದರು.
ಪಟ್ಲ ಸತೀಶ್‌ರವರು ದೇಶ-ವಿದೇಶದಲ್ಲಿ ಹೆಸರು ಗಳಿಸಿದವರು-ಕರುಣಾಕರ್ ರೈ ದೇರ್ಲ:
ಯಕ್ಷಧ್ರುವ ಪಟ್ಲ ಫೌಂಡೇಷನ್ ಪುತ್ತೂರು ಘಟಕದ ಅಧ್ಯಕ್ಷ ಎನ್.ಕರುಣಾಕರ್ ರೈರವರು ಸ್ವಾಗತಿಸಿ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿರವರು ಈಗಾಗಲೇ ದೇಶ-ವಿದೇಶದಲ್ಲಿ ಹೆಸರು ಗಳಿಸಿದವರು. ಪುತ್ತೂರಿನ ಜಾತ್ರೋತ್ಸವ ವಿಜ್ರಂಭಣೆಯಿಂದ ಆರಂಭಗೊಂಡು ಇದೀಗ ಒಂಭತ್ತು ದಿನಗಳಾಗಿದೆ. ಪುತ್ತೂರಿನ ಈ ಜಾತ್ರೆಗೆ ತಾಲೂಕು, ಜಿಲ್ಲೆ, ರಾಜ್ಯದಿಂದ ಭಕ್ತರು ಆಗಮಿಸಿ ಜಾತ್ರೆಯ ಕಳೆಯನ್ನು ಇಮ್ಮಡಿಗೊಳಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಬೆಂಗಳೂರು ಘಟಕದ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ, ಸದಸ್ಯ ಉದಯ ವೆಂಕಟೇಶ್, ಡಾ.ರಾಜೇಶ್ ಬೆಜ್ಜಂಗಳ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸಮಿತಿ ಸದಸ್ಯ ಸುಬ್ಬಪ್ಪ ಕೈಕಂಬ ವಂದಿಸಿದರು. ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿ ದತ್ತಾತ್ರೇಯ ರಾವ್ ಸಹಿತ ಸಮಿತಿ ಸದಸ್ಯರುಗಳು, ಗೌರವ ಸಲಹೆಗಾರರು, ಟ್ರಸ್ಟಿಗಳು ಮತ್ತೀತರರು ಉಪಸ್ಥಿತರಿದ್ದರು.
ತ್ರಿಜನ್ಮ ಮೋಕ್ಷ ಪ್ರಸಂಗ..
ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಜನಪ್ರಿಯ ಪ್ರಸಂಗ “ತ್ರಿಜನ್ಮ ಮೋಕ್ಷ” ಪೌರಾಣಿಕ ಪುಣ್ಯ ಕಥಾನಕವನ್ನು ಆಡಿ ತೋರಿಸಲಾಯಿತು. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿ, ಚೆಂಡೆಮದ್ದಳೆಯಲ್ಲಿ ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ, ಸಂಗೀತ ಪೂರ್ಣೇಶ್ ಆಚಾರ್ಯ, ಸ್ತ್ರೀ ಪಾತ್ರದಲ್ಲಿ ಅಕ್ಷಯ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು, ಹಾಸ್ಯ ಪಾತ್ರದಲ್ಲಿ ಮವ್ವಾರು ಬಾಲಕೃಷ್ಣ ಮಣಿಯಾಣಿ, ಸಂದೇಶ್ ಮಂದಾರ, ಪುರುಷ ಪಾತ್ರದಲ್ಲಿ ರಾಧಾಕೃಷ್ಣ ನಾವಡ ಮಧೂರು, ಮಾನ್ಯ ಸಂತೋಷ್, ಮೋಹನ್ ಬೆಳ್ಳಿಪ್ಪಾಡಿ, ಲೋಕೇಶ್ ಮುಚ್ಚೂರು, ಜಯಕೀರ್ತಿ ಜೈನ್ ಮಾಳ, ಭುವನ್ ಮೂಡುಜೆಪ್ಪು, ದಿವಾಣ ಶಿವಶಂಕರ ಭಟ್, ರಾಕೇಶ್ ರೈ ಅಡ್ಕ, ಮನೀಶ್ ಪಾಟಾಳಿ ಎಡನೀರು, ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿ, ರೋಹಿತ್ ಮಳಲಿ, ಮನ್ವಿತ್ ನಿಡ್ಯೋಡಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಡಿ.ಮಾಧವ ಬಂಗೇರ ಕೊಳ್ತಮಜಲು, ಸಚಿನ್ ಅಮೀನ್ ಉದ್ಯಾವರ, ರಮೇಶ್ ಪಟ್ರಮೆ, ಲಕ್ಷ್ಮಣ ಪೆರ್ಮುದೆ, ದಿವಾಕರ್ ಕಾಣಿಯೂರು, ಮಧುರಾಜ್ ಪೆರ್ಮುದೆರವರು ಅಭಿನಯಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ..
ಕಳೆದ ಎಂಟು ವರ್ಷಗಳಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ‘ಪಟ್ಲಯಾನ, ಧ್ರುವಪ್ರಭ’ದ ಮೆಲುಕು ಹಾಕುವ ‘ಯಕ್ಷಧ್ರುವ ಪಟ್ಲ ಸಂಭ್ರಮ’ವು ಮೇ 26 ರಂದು ಮಂಗಳೂರು ಆಡ್ಯಾರು ಇಲ್ಲಿನ ಆಡ್ಯಾರ್ ಗಾರ್ಡನ್‌ನಲ್ಲಿ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ವೇದಿಕೆಯಲ್ಲಿ ಅತಿಥಿ ಗಣ್ಯರು ಅನಾವರಣಗೊಳಿಸಿದರು.