ನೆಲ್ಯಾಡಿ: ಕಾಲು ಹಾಗೂ ಕುತ್ತಿಗೆಗೆ ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿ ಮೃತಪಟ್ಟ ಹೋರಿಯೊಂದು ಶಿರಾಡಿಯಲ್ಲಿ ಎ.20ರಂದು ಬೆಳಿಗ್ಗೆ ಪತ್ತೆಯಾಗಿದೆ.
ಶಿರಾಡಿ ನಿವಾಸಿ ರವಿಚಂದ್ರ ಎಸ್.ಎ. ಎಂಬವರು ತಮ್ಮ ಅಡಿಕೆ ತೋಟಕ್ಕೆ ನೀರು ಬಿಡಲೆಂದು ಹೋಗುತ್ತಿದ್ದ ವೇಳೆ ಶಿರಾಡಿಯಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದ ಜಾಗದ ಒಳ ರಸ್ತೆಯ ಬದಿಯಲ್ಲಿ, ಒಂದು ಹೋರಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೋರಿಯ ಕಾಲು ಮತ್ತು ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿರುವುದು ಕಂಡು ಬಂದಿದೆ. ಸದ್ರಿ ಹೋರಿಯನ್ನು ಎ.19ರ ಸಂಜೆಯಿಂದ ಎ.20ರ ಬೆಳಗ್ಗಿನ ಅವಧಿಯಲ್ಲಿ, ಯಾರೋ ದುಷ್ಕರ್ಮಿಗಳು, ಎಲ್ಲಿಂದಲೋ ಕಳ್ಳತನ ಮಾಡಿ, ಮಾಂಸಕ್ಕಾಗಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಸಾವನ್ನಪ್ಪಿರಬಹುದಾಗಿದ್ದು, ಸದ್ರಿ ಹೋರಿಯನ್ನು ಹೆದ್ದಾರಿ ಬಳಿ ಬಿಸಾಡಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ರವಿಚಂದ್ರ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 45/2024, ಕಲಂ: 379 IPC U/s- 5,7,ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ: 11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.