





ಉಪ್ಪಿನಂಗಡಿ: ಎ.19ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪಿಲಿಕುಡೇಲು ಎಂಬಲ್ಲಿ ನೇತ್ರಾವತಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ದಾಳಿಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು ಮರಳು ಹಾಗೂ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಉಪ್ಪಿನಂಗಡಿ ಪೊಲೀಸ್ ಠಾಣೆ ಪಿಎಸ್‌ಐ ಅವಿನಾಶ್ ಹೆಚ್. ಅವರು ಸಿಬ್ಬಂದಿಗಳ ಜೊತೆ ದಾಳಿ ನಡೆಸಿದ್ದು ದಾಳಿಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಚಿತ್ರ ಕುಮಾರ್ ಮತ್ತು ಧನಂಜಯ ಎಂಬವರು ಓಡಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಯಾವುದೇ ಪರವಾನಿಗೆ ಪಡೆಯದೇ ಹೊಳೆಯಿಂದ ಮರಳನ್ನು ಕಳವು ಮಾಡುತ್ತಿದ್ದ ಬಗ್ಗೆ ಸದ್ರಿ ಆರೋಪಿಗಳ ವಿರುದ್ಧ ಹಾಗೂ ಸದ್ರಿ ಕಳವು ಮಾಡಿದ ಮರಳನ್ನು ಆನಂದ ನಾಯ್ಕ ಎಂಬವರ ಜಾಗದಲ್ಲಿ ಶೇಖರಿಸಿರುವ ಹಿನ್ನೆಲೆಯಲ್ಲಿ, ಆನಂದ ನಾಯ್ಕರವರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಿಂದ ಕಳವು ಮಾಡಲು ಉಯೋಗಿಸಿದ ಪ್ಲಾಸ್ಟಿಕ್ ಬುಟ್ಟಿಗಳು, ಹಾರೆಗಳು ಹಾಗೂ ಕಳವು ಮಾಡಿ ರಾಶಿ ಹಾಕಿದ ಒಟ್ಟು ಸುಮಾರು 12,200 ರೂ. ಮೌಲ್ಯದ ಮರಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕಲಂ: 379 ಜೊತೆಗೆ 34 ಭಾ.ದಂ.ಸಂ.ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.













