ಪುತ್ತೂರು: ಜಾತ್ಯಾತೀತ ಪಕ್ಷವಾದ ಜೆಡಿಎಸ್ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿದರೂ ನಾವು ಸುಮ್ಮನಿದ್ದೆವು. ಆದರೆ ಇತ್ತೀಚೆಗೆ ಜೆಡಿಎಸ್ನ ರಾಷ್ಟ್ರ ಮತ್ತು ರಾಜ್ಯ ನಾಯಕರ ಹೇಳಿಕೆಗಳಿಂದ ನಮಗೆ ಬಹಳಷ್ಟು ನೋವಾಗಿದೆ. ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ನೆಮ್ಮದಿಯ ವ್ಯವಸ್ಥೆ ಇಲ್ಲ. ಪಕ್ಷದಲ್ಲಿ ಈಗ ನಮಗೆ ಉಸಿರುಗಟ್ಟಿದ ವಾತಾವರಣ ಬರುತ್ತಿದೆ. ಹಾಗಾಗಿ ನಾವೆಲ್ಲ ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡುವ ನಿರ್ಧಾರ ಮಾಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದೇವೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿರುವ ಇಬ್ರಾಹಿಂ ಗೋಳಿಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನು ಪುತ್ತೂರು ತಾಲೂಕು ಅಧ್ಯಕ್ಷರಾಗಿ ಜಿಲ್ಲಾ ಪತ್ರಿಕಾ ವಕ್ತರನಾಗಿ, ರಾಜ್ಯ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ದುಡಿದಿದ್ದೇನೆ. ನನ್ನ ಮಿತ್ರರೂ ಆದ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಹಾರೂನ್ ರಶೀದ್ ಮತ್ತು ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಕೀಂ ವಾಮಂಜೂರು ಹಾಗೂ ಪಿ.ಎಂ ಇಬ್ರಾಹಿಂ ಪರ್ಪುಂಜ ತಾಲೂಕು ಉಪಾಧ್ಯಕ್ಷರು ಮತ್ತು ಮಹ್ಮಮದ್ ಗೋಳಿಕಟ್ಟೆ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರು ನಾವುಗಳು ಮೂರು ದಶಕಗಳಿಂದ ಈ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಅನೇಕ ಜವಾಬ್ದಾರಿ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಜೊತೆ ಸವಾಝ್ ಬಂಟ್ವಾಳ ಜಿಲ್ಲಾ ಯುವ ಕಾರ್ಯದರ್ಶಿಯಾಗಿದ್ದಾರೆ. ಜ್ಯಾತ್ಯಾತೀತ ತತ್ವ ಅನುಸರಿಸಿಕೊಂಡು ಬರುವ ಅನೇಕ ನಾಯಕರಿಗೆ ಜೆಡಿಎಸ್ ರಾಷ್ಟ್ರ ಮತ್ತು ರಾಜ್ಯ ನಾಯಕರ ಹೇಳಿಕೆಗಳು ನಮಗೆ ಬಹಳಷ್ಟು ನೋವನ್ನು ತಂದಿದೆ. ಈ ನಿಟ್ಟಿನಲ್ಲಿ ನಮ್ಮ ನಿಲುವು ಏನೆಂಬುದನ್ನು ಈ ಹಿಂದೆಯೇ ಹೇಳಬೇಕಾಗಿತ್ತು. ಆದರೆ ನಾವು ನಮ್ಮ ತಾಳ್ಮೆಯಿಂದ ಇದ್ದೆವು. ಆದರೆ ಜಾತ್ಯಾತೀತ ಪಕ್ಷವು ಬಿಜೆಪಿಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ನಾವು ಆ ಪಕ್ಷದ ಜೊತೆಯಲ್ಲಿ ಸುಮ್ಮನಾದರೂ ಇರೊನ ಎಂಬ ಭಾವನೆ ಇತ್ತು. ಇತ್ತೀಚೆಗೆ ಕೋಮುವಾದಿ ಪಕ್ಷವಾಗಿರುವ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿದ ನಂತರ ಜೆಡಿಎಸ್ ಪಕ್ಷದ ನಾಯಕರ ಹೇಳಿಕೆ ನೋಡಿದಾಗ ಮುಂದೆ ಅಧಿಕಾರಕ್ಕಾಗಿ ಪಕ್ಷದಲ್ಲಿ ದುಡಿದ ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ನೆಮ್ಮದಿಯ ವ್ಯವಸ್ಥೆ ಇಲ್ಲ. ಪಕ್ಷದಲ್ಲಿ ಈಗ ನಮಗೆ ಉಸಿರುಗಟ್ಟಿದ ವಾತಾವರಣ ಬರುತ್ತಿದೆ. ಆದ್ದರಿಂದ ನಮ್ಮ ನಿಲುವಿನಲ್ಲಿ ಜೆಡಿಎಸ್ ಪಕ್ಷದಲ್ಲಿ ಇದ್ದು ಕೊಂಡೆ ನಾವು ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಜವಾಬ್ದಾರಿಯನ್ನು ಇಲ್ಲಿಗೆ ಕೊನೆಗೊಳಿಸಿ. ಇವತ್ತು ಮುಂದಿನ ಈ ಚುನಾವಣೆಯಲ್ಲಿ ಜಾತ್ಯಾತೀತ ನಿಲುವನ್ನು ಹೊಂದಿರುವ ಕಾಂಗ್ರಸ್ ಪಕ್ಷಕ್ಕೆ ನಮ್ಮ ಬೆಂಬಲ ನೀಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಹಾರೂನ್ ರಶೀದ್, ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಕೀಂ ವಾಮಂಜೂರು, ತಾಲೂಕು ಉಪಾಧ್ಯಕ್ಷ ಪಿ.ಎಂ ಇಬ್ರಾಹಿಂ ಪರ್ಪುಂಜ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಮಹ್ಮಮದ್ ಗೋಳಿ ಕಟ್ಟೆ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಸವಾಝ್ ಬಂಟ್ವಾಳ ಉಪಸ್ಥಿತರಿದ್ದರು.
ಬಿಜೆಪಿಯನ್ನು ಸೋಲಿಸುವುದೇ ಗುರಿ:
ಇನ್ನು ಮುಂದೆ ಜಾತ್ಯಾತೀತ ತತ್ವವನ್ನು ಉಳಿಸಿಕೊಂಡಿರುವ ಪಕ್ಷ ನಮ್ಮ ಮುಂದೆ ಇರುವುದು ಕಾಂಗ್ರೆಸ್ ಪಕ್ಷ ಮಾತ್ರ. ಇವತ್ತು ರಾಜ್ಯದ ಚುಕ್ಕಾಣಿ ಹಿಡಿದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ರವರ ಆಡಳಿತದಿಂದ ಬಡ ಜನರಿಗೆ ಸಿಗುತ್ತಿರುವ ಗ್ಯಾರಂಟಿ ಯೋಜನೆಗಳು ಹಾಗೂ ಈ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಲು ಪಣತೊಟ್ಟ ನಿಂತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಇವರನ್ನು ಬೆಂಬಲಿಸುವುದು ನಮಗೆ ಅತೀ ಅಗತ್ಯವಾಗಿದೆ. ಆದುದರಿಂದ ಈ ಇಡೀ ಜಿಲ್ಲೆಯಲ್ಲಿ ನಮ್ಮ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ಮುಖ್ಯ ನಮ್ಮ ಗುರಿ. ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪಕ್ಷ ಈಗ ತೆಗೆದುಕೊಂಡಿರುವ ಬಿಜೆಪಿಯ ಜೊತೆ ಹೊಂದಾಣಿಕೆಯ ನಿಲುವನ್ನು ಖಂಡಿಸಿ ದೂರ ನಿಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಇಬ್ರಾಹಿಂ ಗೋಳಿಕಟ್ಟೆ ವಿನಂತಿಸಿದರು.