ಪುತ್ತೂರು:ಧರ್ಮದ ರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ದೇವರ ಆರಾದನೆ ದೇವಸ್ಥಾನದಲ್ಲಿ ಮಾತ್ರವಲ್ಲ. ಪ್ರತಿ ಮನೆಯಲ್ಲಿ ನಡೆಯಬೇಕು. ಧರ್ಮದ ರಕ್ಷಣೆಯೇ ಉಪಾಸನೆಯ ಅಂಗ. ಯಾವುದೇ ಕ್ಷೇತ್ರದಲ್ಲಿ ನಷ್ಟವಾದ ಚೈತನ್ಯ ತುಂಬಿಸುವುದೇ ಬ್ರಹ್ಮಕಲಶ. ಬ್ರಹ್ಮಕಲಶದ ಬಳಿಕ ಚೈತನ್ಯ ಬೆಳಗಲಿದೆ. ಧರ್ಮದ ಆಚರಣೆ ಮಾಡಿದಾಗ ಮನುಷ್ಯ ಜನ್ಮ ಸಾರ್ಥಕ. ಉತ್ತಮ ಕಾರ್ಯಗಳು, ಉತ್ತಮ ಸ್ಥಾನ ಲಭಿಸಲಿದೆ ಎಂದು ಕೆಮ್ಮಿಂಜೆ ಕಾರ್ತಿಕ ತಂತ್ರಿಯವರು ಹೇಳಿದರು.
ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಎ.26ರಂದು ಸಂಜೆ ನಡೆದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಭಗವಂತನ ಚೈತನ್ಯ ಪ್ರತಿ ವಸ್ತುವಿನಲ್ಲಿದೆ. ಏಕಾಂತದಿಂದ ಆರಾದನೆ ಮಾಡಲು ದೇವಸ್ಥಾನಗಳ ನಿರ್ಮಾಣವಾಗುತ್ತಿದೆ ಎಂದು ಶಾಸ್ತ್ರದಲ್ಲಿದೆ. ಸರ್ವ ವ್ಯಾಪಿಯಾಗಿರುವ ಭಗವಂತ ಆರಾಧನೆಗಾಗಿ ಕ್ಷೇತ್ರ ನಿರ್ಮಿಸುವುದು ಹಿಂದು ಧರ್ಮದ ವಿಶೇಷತೆ. ದೇವಸ್ಥಾನಗಳು ಮನುಷ್ಯ ಸ್ಥೂಲವಾದ ಶರೀರ ಇದ್ದಂತೆ. ಎಲ್ಲಾ ಅಂಗಾಂಗಗಳು ಸರಿಯಿದ್ದಾಗ ಮಾತ್ರ ಆರೋಗ್ಯವಾಗಿರುವಂತೆ ಕ್ಷೇತ್ರ ಪರಿಶುದ್ದವಾಗಿದ್ದಾಗ ಪ್ರತಿ ಫಲ ಪಡೆಯಲು ಸಾಧ್ಯ. ಬ್ರಹ್ಮಕಲಶ ನಂತರ ಕ್ಷೇತ್ರದಲ್ಲಿ ಎಲ್ಲಾ ಸತ್ಕರ್ಮಗಳು ಆರಂಭವಾಗುತ್ತಿದ್ದು ದೇವರ ಕಾರ್ಯವನ್ನು ಎಲ್ಲರೂ ಒಟ್ಟು ಸೇರಿ ನೆರವೇರಿಸಿದಾಗ ಸಾನಿಧ್ಯ ವೃದ್ಧಿಯಾಗಿ ಪುಣ್ಯ ಪ್ರಾಪ್ತಿಯಾಗಲಿದೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರದ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಲ ಮಾತನಾಡಿ, ಭಗವಂತನನ್ನು ನಾಶ ಪಡಿಸಲು ಸಾಧ್ಯವಿಲ್ಲ. ಶಾಶ್ವತವಾದ ಸ್ಥಾನ ಪಡೆಯಲು ಭಗವತ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವಸ್ಥಾನದಲ್ಲಿ ಶಿಸ್ತು ಇರಬೇಕು. ದೀಪಾರದನೆ, ನಾಮಸ್ಮರಣೆ, ಕ್ಷೇತ್ರದ ನಿಯಮಗಳನ್ನು ಪಾಲಿಸಿದಾಗ ಮಹಾಕ್ಷೇತ್ರವಾಗಿ ಬೆಳೆಯಲಿದೆ ಎಂದ ಅವರು ಕಾರ್ಪಾಡಿಯಲ್ಲಿ ದೇವಸ್ಥಾನಕ್ಕೆ ಆವಶ್ಯಕವಾದ ಜಾಗವನ್ನು ಪೂರೈಸುವ ಮೂಲಕ ನೀಡಿದ ಮಾತನ್ನುನೆರವೇರಿಸಿರುವು ಸನ್ಮಾನಿಕಿಂತ ದೊಡ್ಡ ಗೌರವ ದೊರೆತಿದೆ. ಪ್ರಾಮಾಣಿಕತೆಯಿಂದ ಮಾಡಿದ ಸೇವೆಗೆ ದೇವರ ಅನುಗ್ರಹ ಪ್ರಾಪ್ತಿಯಾಗಿರುವುದಕ್ಕೆ ಕಾರ್ಪಾಡಿ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದರು.
ಮಂಗಳೂರಿನ ಆರ್ಥೋಪೆಡಿಕ್ ಸರ್ಜನ್ ಡಾ.ಸಚ್ಚಿದಾನಂದ ರೈ ಮಾತನಾಡಿ, ಭಕ್ತರ ಶ್ರಮದ ಫಲವಾಗಿ ದೇವಸ್ಥಾನ ನಿರ್ಮಾಣವಾಗಿದೆ. ಕಾರ್ಪಾಡಿಯ ದೇವಸ್ಥಾನವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಷ್ಟೇ ಕಾರಣಿಕ ಕ್ಷೇತ್ರವಾಗಿ ಮೂಡಿಬರಲಿ ಎಂದರು. ದೇವಸ್ಥಾನಗಳು ಕೇವಲ ಪ್ರಾರ್ಥನ ಮಂದಿರವಾಗಿದೆ ದೇವಾಲಯಗಳು ಜ್ಞಾನ, ಅನ್ನ, ಭಕ್ತಿ, ಸಂಸ್ಕಾರ ಕೊಡುವ ಕೇಂದ್ರಗಳಾಗಿವೆ. ಇಂತಹ ದೇವಸ್ಥಾನ ನಿರ್ಮಾಣಗೊಂಡು ಲಾಭ ಬರುವಾಗ ಸರಕಾರದ ತೆಕ್ಕೆಗೆ ಪಡೆಯುವುದು ವಿಪರ್ಯಾಸವಾಗಿದೆ ಎಂದರು.
ಪ್ರಗತಿಪರ ಗೇರು ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಯೋಗವು ಭಾಗ್ಯವಾಗಿ ಪರಿವರ್ತನೆ ಆದಾಗ ಏನಾಗಬಹುದು ಎನ್ನುವ ಕಾರ್ಪಾಡಿಯಲ್ಲಿ ಪವಾಡ ನಿರ್ಮಾವಾಗಿದೆ. ಭಕ್ತರ ಸಂಖ್ಯೆ ಕಡಿಮೆಯಾದಾಗ ಚೈತನ್ಯ ಕುಂಠಿತವಾಗಲಿದೆ. ಎ ಗ್ರೇಡ್ ದೇವಸ್ಥಾನಗಳಲ್ಲಿ ಸಲ್ಲಿಸುವ ಸೇವೆಯೇ ಮುಖ್ಯವಲ್ಲ. ಸಿ ಗ್ರೇಡ್ ದೇವಸ್ಥಾನಗಳಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಕ್ಷೇತ್ರದ ವೈಭವದಿಂದ ಮೆರೆಸುವ ಜವಾಬ್ದಾರಿ ಭಕ್ತರ ಮೇಲಿದೆ ಎಂದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಮಾತನಾಡಿ, ಮನಸ್ಸಿನಲ್ಲಿ ಯೋಚಿಸುವುದೇ ಬದುಕು. ಭವಿಷ್ಯತ್ ಅದರಲ್ಲಿದೆ. ಬದುಕ ಸ್ವರ್ಗವಾಗಬೇಕಾದರೆ ಮನಸ್ಸಿನಲ್ಲಿ ಉತ್ತಮ ಚಿಂತನೆಗಳು ಮುಖ್ಯ. ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆದ ಕಾರ್ಪಾಡಿ ದೇವಸ್ಥಾನ ಊರಿನ ಭಕ್ತರ ಬದುಕಿಗೆ ಹೊಸ ಆಯಾಮ ನೀಡಲಿ. ಮನಸ್ಸು ಉತ್ತಮವಾಗಿರಲಿ ಎಂದರು. ದೇವಸ್ಥಾನ ನಿರ್ಮಾಣ ಸಣ್ಣ ಕೆಲಸ ಅಲ್ಲ. ಎಲ್ಲರೂ ಒಟ್ಟು ಸೇರಿ ಮಾಡಿರುವುದಕ್ಕೆ ದೇಗುಲ ನಿರ್ಮಾದಲ್ಲಿ ಶ್ರಮಿಸಿದ ತಂಡಕ್ಕೆ ಅಬಿನಂದನೆ ಸಲ್ಲಿಸಿದರು.
ಕೃಷಿಕ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಕಾರ್ಪಾಡಿ ಕ್ಷೇತ್ರದಲ್ಲಿ ಅದ್ಭುತ ಬದಲಾವಣೆಯಾಗಿದೆ. ನಂಬಿಕೆ, ಶ್ರದ್ಧೆ, ಭಕ್ತಿಯಿಂದ ಶ್ರಮದಿಂದ ಯಾವುದೇ ಪಲಾಪೇಕ್ಷೆಯಿಲ್ಲದೆ ಸಲ್ಲಿಸಿದ ಸೇವೆಯ ಫಲವಾಗಿ ಸುಂದರ ದೇಗುಲ ನಿರ್ಮಾಣವಾಗಿದೆ. ಕಾರ್ಪಾಡಿ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯದಷ್ಟೇ ಆಕರ್ಷಣೆಯ ತಾಣವಾಗೆ ಬೆಳೆಯಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಸುಸೂತ್ರವಾಗಿ ನಡೆದಿದೆ. ನಮಗೆ ನೀಡಿದ ಜವಾಬ್ದಾರಿಯುತ ಸ್ಥಾನವನ್ನು ತಂಡದ ಮೂಲಕ ನಿರ್ವಹಿಸಲಾಗಿದೆ. ಇಲ್ಲಿ ರಕ್ತವನ್ನು ಬೆವರಾಗಿ ಮಾಡಿದ ನೂರಾರು ಮಂದಿ ಸ್ವಯಂ ಸೇವಕರ ಸೇವೆಯಿಂದ ಜೀರ್ಣೋದ್ಧ್ದಾರ ಹಾಗೂ ಬ್ರಹ್ಮಕಲಶ ನೆರವೇರಿರುತ್ತದೆ. ನೂರಾರು ಮಂದಿ ದಾನಿಗಳು ವಿವಿಧ ರೂಪದಲ್ಲಿ ಸಹಕರಿಸಿದ್ದಾರೆ. 14 ತಿಂಗಳಲ್ಲಿ ಭವ್ಯ ದೇಗುಲ ನಿರ್ಮಾಣವಾಗಿದೆ. ದೇವರ ದೃಢಕಲಶದ ದಿನ ಸಹಕರಿಸಿದ ಎಲ್ಲಾ ಸ್ವಯಂ ಸೇವಕರು, ದಾನಿಗಳನ್ನು ಗೌರವಿಸಲಾಗುವುದು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುಧಾಕರ ರಾವ್ ಆರ್ಯಾಪು ಮಾತನಾಡಿ, ಕಳೆದ ವರ್ಷದ ದೇವರ ಜಾತ್ರೆಯ ಬಳಿಕ ದೇವರನ್ನು ಬಾಲಲಯದಲ್ಲಿ ಪ್ರತಿಷ್ಠಾಪಿಸಿದ ಮರುದಿನದಿಂದಲೇ ಜೀಣೋದ್ಧಾರ ಪ್ರಾರಂಭಗೊಂಡಿದೆ. ನಂತರ ನಿರಂತರವಾಗಿ ಒಂದು ವರ್ಷ ಎರಡು ತಿಂಗಳ ಕಾಲ ನಡೆದ ಜೀರ್ಣೋದ್ಧಾರದ ಕಾರ್ಯದಲ್ಲಿ ಹಗಲು-ರಾತ್ರಿ ದುಡಿದ ಕರಸೇವಕರ ಶ್ರಮದ ಫಲವಾಗಿ ಭವ್ಯವಾದ ದೇವಾಲಯ ನಿರ್ಮಾಣಗೊಂಡು ಬ್ರಹ್ಮಕಲಶ ನೆರವೇರುತ್ತಿದೆ. ಇಲ್ಲಿ ಎಲ್ಲವೂ ದೇವರ ಲೀಲೆಯಂತೆ ನಡೆದಿದೆ. ಕರಸೇವಕರು, ಭಕ್ತರು, ದಾನಿಗಳು ಈ ಮಹಾಕಾರ್ಯದಲ್ಲಿ ನಮ್ಮ ಜೊತೆಯಾಗಿ ಪಾಲ್ಗೊಂಡು ಊರಿಗೆ ನೆಮ್ಮದಿಯ ಫಲ ನೀಡಿದ್ದಾರೆ. ಜೊತೆಗೆ ವಿವಿಧ ಮನೆತನಗಳು, ನೆರೆಯ ಹಲವು ಗ್ರಾಮದ ಭಕ್ತಾದಿಗಳು ಸಹಕಾರ ನೀಡಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಜಾತ ಶ್ಯಾಮ್ಪ್ರಸಾದ್ ಭಟ್ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡು ಜೀವನ ಸಾರ್ಥಕತೆಯನ್ನು ಕಂಡಿದ್ದಾರೆ. ದೇವಸ್ಥಾನ ನಿರೀಕ್ಷೆಗಿಂತ ಸುಂದರವಾಗಿ ಮೂಡಿಬಂದಿದ್ದು ಕಾರ್ಪಾಡಿ ಸುಬ್ರಹ್ಮಣ್ಯನ ಕ್ಷೇತ್ರವು ಶಕ್ತಿಯುತವಾದ ಸ್ಥಳವಾಗಿದೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬಂಗಾರಡ್ಕ ವಿಶ್ವೇಶ್ವರ ಭಟ್, ಡಾ.ಹರಿಕೃಷ್ಣ ಪಾಣಾಜೆ, ರಾಮಚಂದ್ರ ರಾವ್ ಸುಂದರವನ ಬೆಂಗಳೂರು, ಸಂದೀಪ್ ಕಾರಂತ ಕಾರ್ಪಾಡಿ, ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ್ ಸಂದರ್ಭೋಚಿತವಾಗಿ ಮಾತನಾಡಿದರು. ರತ್ನಾಕರ ರೈ ಕೆದಂಬಾಡಿ ಗುತ್ತು, ಪಂಬೆತ್ತಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೇರು, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಗಣೇಶ್ ಎ.ಎನ್ ಕಲ್ಲರ್ಪೆ, ಬೆಂಗಳೂರಿನ ಉದ್ಯಮಿ ಪ್ರಭಾಕರ ವಾಗ್ಲೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕ್ಷೇತ್ರದ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಲ, ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು ಹಾಗೂ ಸುಧಾಕರ ರಾವ್ ಆರ್ಯಾಪು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ್ ಮರಿಕೆ, ಭಾರತಿ ಸಾಂತಪ್ಪ ಪೂಜಾರಿ, ವನಿತಾ ನಾಯಕ್, ವಿನಯ ನಾಯ್ಕ ಕೊಟ್ಲಾರು, ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕ್ಷೇತ್ರದ ಜೀಣೋದ್ಧಾರದ ಸಂದರ್ಭದಲ್ಲಿ ಅಡುಗೆ ಕೆಲಸದಲ್ಲಿ ಸಹಕರಿದ ಚಂದ್ರಕಲಾ ಜಗದೀಶ್, ಕಚೇರಿ ನಿರ್ವಹಣೆಯಲ್ಲಿ ವ್ಯವಸ್ಥಾಪಕರಾಗಿ ಮಹೇಶ್ ಕಿರಣ್ ಶೆಟ್ಟಿ ಮಲಾರ್, ನಿವೃತ್ತ ಯೋಧ ಬಾಲಕೃಷ್ಣ ಎನ್. ಕಲ್ಲರ್ಪೆ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಡಿಂಪಲ್ ಶೆಟ್ಟಿ, ಪಾಕತಜ್ಞ ಕೃಷ್ಣಪ್ರಸಾದ್ ಭಟ್ ಕೆಯ್ಯೂರು, ಸುಸಜ್ಜಿತ ಸಭಾಂಗಣ ನಿರ್ಮಿಸಿದ ಇರ್ದೆ ಫ್ರೆಂಡ್ಸ್ ಸೌಂಡ್ಸ್& ಶಾಮಿಯಾನದ ರಾಧಾಕೃಷ್ಣ ಬೋರ್ಕರ್ರವರನ್ನು ಸನ್ಮಾನಿಸಲಾಯಿತು.
ಹೇಮಲತಾ ಹಾಗೂ ಮೋಕ್ಷ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುಧಾಕರ ರಾವ್ ಆರ್ಯಾಪು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಯಂತ ಶೆಟ್ಟಿ ಕಂಬಳತ್ತಡ್ಡ, ಅಂಬಿಕಾ ರಮೇಶ್, ವಿಜಯ ಬಿ.ಎಸ್., ದಾಮೋದರ ರೈ ತೊಟ್ಲ, ಹರೀಶ್ ನಾಯಕ್ ವಾಗ್ಲೆ, ರೋಹಿತ್ ಬರೆಮೇಲು, ಕುಶಾಲಪ್ಪ ಸುವರ್ಣ ಮರಿಕೆ, ಸೂರ್ಯ ಮಣಿಯಾಣಿ ಕಲ್ಲರ್ಪೆ, ಪವನ್ ಶೆಟ್ಟಿ ಕಂಬಳತ್ತಡ್ಡ, ಕೇಶವ ಗೌಡ ಕುಕ್ಕಾಡಿ, ಯೋಗೀಶ್ ನಾಯ್ಕ ದೊಡ್ಡಡ್ಕ, ಪ್ರಸಾದ್ ಕುಮಾರ್ ದೊಡ್ಡಡ್ಕ, ಸತೀಶ್ ಗೌಡ ದೊಡ್ಡಡ್ಕ, ರಾಮು ಸಂಟ್ಯಾರ್, ವಿಶ್ವನಾಥ ಗೌಡ ಪರನೀರು, ಕೀರ್ತನ್ ರೈ ತೊಟ್ಲ, ಭರತ್ ರೈ ಮೇರ್ಲ, ಸತೀಶ್ ರೈ ನೀರ್ಪಾಡಿ, ಪ್ರಜನ್ ರೈ ತೊಟ್ಲ, ಧನುಷ್ ಹೊಸಮನೆ, ಕಿರಣ್ ರೈ ಪುಂಡಿಕಾಯಿ, ವಿಠಲ ರೈ ಮೇರ್ಲ ಅತಿಥಿಗಳಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸೀತಾರಾಮ ರೈ ಕೈಕಾರ ಸನ್ಮಾನಿತರ ಪರಿಚಯ ಮಾಡಿದರು. ಸುದೇಶ್ ರೈ ತೊಟ್ಲ, ಹರಿಣಿ ಪುತ್ತೂರಾಯ ಹಾಗೂ ಉಮೇಶ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು.