ಮೇ.4: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಹಾಸಭೆ-ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ತಾಲೂಕು ಸಂಘದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗು ಸಂಘದ ವಾರ್ಷಿಕ ಮಹಾಸಭೆಯು ಮೇ.4ರಂದು ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಐತ್ತಪ್ಪ ನಾಯ್ಕ್ ಅವರು ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಈ ಬಾರಿ ಸ್ವರ್ಣ ಸಾಧನಾ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ. 15ಸಾವಿರ ನಗದು, ಫಲಕ, ಸ್ಮರಣಿಕೆ ಫಲಪುಷ್ಪವನ್ನೊಳಗೊಂಡಿರುತ್ತದೆ. ಕಾರ್ಯಕ್ರಮವನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕ ಕೆ.ಪ್ರಮೋದ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ| ಹೆಚ್.ಜಿ.ಶ್ರೀಧರ್ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದವರು ಹೇಳಿದರು.


ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಸಾಧನ ಸಲಕರಣೆಯ ಮೂಲಕ ಪ್ರಸಿದ್ಧಿ ಪಡೆದ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು. ಅದೆ ರೀತಿ ಎನ್‌ಸಿಸಿ ವಿಭಾಗದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಕು.ತೇಜಸ್ವಿನಿ ವಿ ಶೆಟ್ಟಿ, ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರತಿನಿಧಿಸಿದ ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆಯರಾದ ಕು.ಸ್ವಾತಿ ಎನ್ ವಿ, ಕು.ಶಮಾ ಚಂದುಕೂಡ್ಲು, ಕು.ಪ್ರಣಮ್ಯ ಅವರನ್ನು ಅಭಿನಂದಿಸಲಾಗುವುದು. ದಕ್ಷಿಣ ಆಫ್ರಿಕಾದ ಟುನಿಷಿಯ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತರಾದ ವಿವೇಕಾನಂದ ಸಿಬಿಎಸ್‌ಇ ಶಾಲೆಯ ಕು.ಆಪ್ತ ಚಂದ್ರಮತಿ ಮುಳಿಯ ಅವರನ್ನು ಗೌರವಿಸಲಾಗುವುದು ಎಂದು ಬಿ.ಐತ್ತಪ್ಪ ನಾಯ್ಕ್ ಅವರು ಹೇಳಿದರು.


ಸಂಘದ ಹಿರಿಯ ಸದಸ್ಯರಿಗೆ ಗೌರವ:
ಸಂಘದಲ್ಲಿ ಈಗಾಗಲೇ 1ಸಾವಿರ ಸದಸ್ಯರಿದ್ದು, ಈ ಪೈಕಿ ಸಂಘದ ಸದಸ್ಯರಾಗಿ 75, 80 ಮತ್ತು 85 ವರ್ಷ ಪ್ರಾಯ ಪೂರ್ಣಗೊಂಡ 48 ಮಂದಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ನಮ್ಮ ಸಂಘದಲ್ಲಿ ಇನ್ನೂ ಸದಸ್ಯರಾಗದ ನಿವೃತ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದಸ್ಯತ್ವವನ್ನು ನೋಂದಾಯಿಸುವಂತೆ ಬಿ.ಐತ್ಪಪ್ಪ ನಾಯ್ಕ್ ಅವರು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷೆ ಪ್ರೊ. ವತ್ಸಲಾ ರಾಜ್ಞಿ, ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಶಾಂತಿ ಟಿ ಹೆಗಡೆ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here